ರಾಮಾಯಣ ೪೪
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೪
*ಅನುಪಾಯೇನ ಕರ್ಮಾಣಿ ವಿಪರೀತಾನಿ ಯಾನಿ ಚ ಕ್ರಿಯಮಾಣಾನಿ ದುಷ್ಯಂತಿ ಹವೀಂಷ್ಯಪ್ರಯತೇಷ್ವಿವ*
_ಕುಂಭಕರ್ಣ ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ. ಯೋಚಿಸಿ ಕಾರ್ಯವೆಸಗಬೇಕು. ಸಾಮ- ದಾನ- ಭೇದ- ದಂಡವೆಂಬ ನಾಲ್ಕು ಉಪಾಯಗಳನ್ನು ಆಶ್ರಯಿಸದೇ ಶಾಸ್ತ್ರಕ್ಕೆ ವಿರುದ್ಧವಾಗಿ ಮಾಡುವ ಕಾರ್ಯಗಳು ಸರ್ವಥಾ ಕೆಡುತ್ತವೆ. ಶುದ್ಧವಿಲ್ಲದ ಹೋಮಕುಂಡದಲ್ಲಿ ಹಾಕಿದ ಹವಿಸ್ಸು ಹೇಗೆ ದೇವತೆಗಳನ್ನು ಸೇರದೇ ಹೇಗೆ ವ್ಯರ್ಥವಾಗುವುದೋ ಹಾಗೆಯೇ ಉಪಾಯಗಳನ್ನಾಶ್ರಯಿಸದ ಕರ್ಮಗಳೂ ನಾಶಹೊಂದುತ್ತವೆ. ಯಜ್ಞ ಮಾಡುವ ಮುನ್ನ ಶುಚಿ ಎಲ್ಲೆಡೆ ಇರುವುದು ಅವಶ್ಯಕ. ಅಶುಚಿಯಾದ ಸ್ಥಳದಲ್ಲಿ ಮನದಲ್ಲಿ ಕುಂಡದಲ್ಲಿ ಎಷ್ಟು ಹೋಮ ಮಾಡಿದರೂ ನೀರಿನಲ್ಲಿ ಮಾಡಿದಂತೆ ವ್ಯರ್ಥ. ಹಾಗೆಯೇ ಶಾಸ್ತ್ರ ಯಾವುದಕ್ಕೆ ಸಮ್ಮತಿ ನೀಡಿದೆಯೋ ಅಂತಹ ಕರ್ಮಗಳನ್ನು ಉಪಾಯವನ್ನು ಅನುಸರಿಸಿ ಅಪಾಯ ಎದುರಾಗದಂತೆ ನಿರ್ವಹಿಸಬೇಕು. ನೀನು ಮಾಡಿದ ಪರದಾರಾಪಹರಣವೆಂಬ ಕರ್ಮ ಶಾಸ್ತ್ರ ಸಮ್ಮತವೂ ಅಲ್ಲ, ಯಾವ ಉಪಾಯದ ಮೂಲಕವೂ ಮಾಡಿದ್ದಲ್ಲ. ಹಾಗಿದ್ದ ಮೇಲೆ ಅದನ್ನು ಹೇಗೆ ಸಮರ್ಥಿಸಿಕೊಳ್ಳುವೆ?_
*ಯಃ ಪಶ್ಚಾತ್ಪೂರ್ಯಕಾರ್ಯಾಣಿ ಕುರುತೇ ಬುದ್ಧಿಮೋಹಿತಃ ಪೂರ್ವಂ ಚೋತ್ತರಕಾರ್ಯಾಣಿ ನ ಸ ವೇದ ನಯಾನಯೌ*
_ಮೋಹದಿಂದ ಕೂಡಿದ ಯಾವ ವ್ಯಕ್ತಿಯು ಮೊದಲು ಮಾಡಬೇಕಾದ ಕಾರ್ಯಗಳನ್ನು ಕಡೆಯಲ್ಲಿಯೂ, ಕಡೆಯಲ್ಲಿ ಮಾಡಬೇಕಾದ ಕರ್ಮಗಳನ್ನು ಮೊದಲಿಗೂ ಮಾಡುವನೋ, ಅಂತಹವನು ನೀತಿ ಹಾಗೂ ಅನೀತಿ ಗಳ ವಿವೇಕವನ್ನು ಕಳೆದುಕೊಂಡಿರುತ್ತಾನೆ. ರಾಮನ ಬಗೆಗೆ ಜಾಗರೂಕತೆ ವಹಿಸಿ ಅಥವಾ ಅವನನ್ನು ನಿವಾರಿಸಿ ಅಥವಾ ಅವನನ್ನು ಗೆದ್ದು ನಂತರ ತರಬೇಕಾದ ಸೀತೆಯನ್ನು ಮೊದಲೇ ತಂದಿರುವೆ. ಸರಿ- ತಪ್ಪುಗಳ ವಿವೇಕ ನಾಶವಾದವರು ಮಾಡುವ ಕೆಲಸ ನೀನು ಮಾಡಿರುವೆ. ಕಪಿ ಬಂದು ಹೋದ ಮೇಲೆ ರಾಮನ ಬಗೆಗೆ ಯೋಚಿಸುತ್ತಿರುವೆ. ಮೊದಲೇ ನಿನ್ನ ಬುದ್ಧಿಗೇನು ಮಂಕು ಕವಿದಿತ್ತೇ?_
*ಚಪಲಸ್ಯ ತು ಕೃತ್ಯೇಷು ಪ್ರಸಮೀಕ್ಷ್ಯಾಧಿಕಂ ಬಲಮ್ ಕ್ಷಿಪ್ರಮನ್ಯೇ ಪ್ರಪದ್ಯಂತೇ ಕ್ರೌಂಚಸ್ಯ ಖಮಿವ ದ್ವಿಜಾಃ*
_ಶತ್ರುಗಳು ತಮ್ಮ ಎದುರಾಳಿಯು ಬಲದಲ್ಲಿ ತಮಗಿಂತಲೂ ಅಧಿಕನಾಗಿದ್ದರೂ ಅವನು ಚಪಲ ಮನಸ್ಸಿನವನಾದರೆ ಅವನನ್ನು ದಮನ ಮಾಡುತ್ತಾರೆ. ದಾಟಿಹೋಗಲು ಅಸಾಧ್ಯವಾದ ಕ್ರೌಂಚಪರ್ವತದಲ್ಲಿ ಕುಮಾರಸ್ವಾಮಿಯು ತನ್ನ ಶಕ್ತ್ಯಾಯುಧದಿಂದ ರಂಧ್ರವನ್ನು ಮಾಡಿ ಹಾರಿಹೋದನು. ಇದೇ ರೀತಿ ಶತ್ರುಗಳು ಎದುರಾಳಿಯ ದೋಷವನ್ನೇ ರಂಧ್ರವನ್ನಾಗಿ ಮಾಡಿಕೊಂಡು ನಮ್ಮನ್ನು ಆಕ್ರಮಿಸಿ ಸೋಲಿಸುವರು. ನಿನ್ನ ಚಪಲಚಿತ್ತತೆಯೇ ನಿನ್ನ ನಾಶಕ್ಕೆ ಕಾರಣವಾಗಬಹುದು._
*ತ್ವಯೇದಂ ಮಹದಾರಬ್ಧಂ ಕಾರ್ಯಮಪ್ರತಿಚಿಂತಿತಮ್ ದಿಷ್ಟ್ಯಾ ತ್ವಾಂ ನಾವಧೀದ್ರಾಮೋ ವಿಷಮಿಶ್ರಮಿವಾಮಿಷಮ್*
_ರಾಜನೇ, ಮುಂದಾಗುವ ಕೇಡನ್ನು ಯೋಚಿಸದೇ ಇಂತಹ ದುಷ್ಕರವಾದ ಕಾರ್ಯವನ್ನು ಆರಂಭಿಸಿಬಿಟ್ಟಿರುವೆ. ವಿಷಮಿಶ್ರವಾದ ಮಾಂಸವು ಹೇಗೆ ರುಚಿಕರವಾದರೂ ನಾಶಕರವೂ ಹೌದೋ ಹಾಗೆಯೇ ಈ ನಿನ್ನ ಕಾರ್ಯ ನಿನ್ನ ಚಪಲ ಬುದ್ಧಿಗೆ ಸರಿಯೆನಿಸಿದರೂ ನಿನ್ನ ಜೀವಕ್ಕೆ ಮಾರಕವಾಗೇ ಇದೆ. ಯಾವುದೋ ಸೌಭಾಗ್ಯದಿಂದ ರಾಮ ಈವರೆಗೂ ನಿನ್ನನ್ನು ಕೊಲ್ಲಲಿಲ್ಲ. ಬೇರೆ ಶತ್ರುಗಳಾದರೆ ನಿನ್ನ ಕಥೆ ಮುಗಿದುಹೋಗುತ್ತಿತ್ತು. ಕುಂಭಕರ್ಣನ ಮಾತುಗಳು ಎಷ್ಟು ಸತ್ಯ. ನಮ್ಮ ಜೀವನಕ್ಕೆ ಮಾರ್ಗದರ್ಶಕವಾದವು. ಪರಾಕ್ರಮಿ ಅಣ್ಣನೆದುರು ಇಂತಹ ನೇರ ಮಾತುಗಳನ್ನಾಡುವ ಅವನ ವರ್ತನೆ ತಪ್ಪನ್ನು ಸುಮ್ಮನೆ ಒಪ್ಪಿಕೊಳ್ಳುವ ನಮ್ಮಂತಹ ಜಡಮತಿಗಳಿಗೆ ಒಂದು ಪಾಠ. ತಪ್ಪು ನಾವು ಮಾಡಿರಲಿ ನಮ್ಮವರು ಮಾಡಿರಲಿ, ಪರಿಣಾಮ ಏನೇ ಇರಲಿ ಎದುರಿಗೆ ಹೇಳುವ ಧೈರ್ಯ ನಮಗಿದೆಯೇ! ಕುಂಭಕರ್ಣನಿಂದ ನಾವು ಈ ವಿಷಯ ಕಲಿಯಬೇಕು._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ