ರಾಮಾಯಣ ೪೮

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪8

*ನಾಗ್ನಿರ್ನಾನ್ಯಾನಿ ಶಸ್ತ್ರಾಣಿ ನ ನಃ ಪಾಶಾ ಭಯಾವಹಾಃ ಘೋರಾಃ ಸ್ವಾರ್ಥಪ್ರಯುಕ್ತಾಸ್ತು ಜ್ಞಾತಯೋ ನೋ ಭಯಾವಹಾಃ*

_ರಾವಣ ತನ್ನ ನುಡಿಗಳನ್ನು ಮುಂದುವರೆಸುತ್ತಿದ್ದಾನೆ. ವಿಭೀಷಣ, ನಿನ್ನಂತಹ ಜ್ಞಾತಿಗಳೇ ನನಗೆ ದೊಡ್ಡ ಶತ್ರುಗಳು. ಹಿಂದೆ ಪದ್ಮವನದಲ್ಲಿದ್ದ ಆನೆಗಳು ಹೀಗೆ ಹೇಳುತ್ತಿದ್ದವು. ನಮಗೆ ಅಗ್ನಿಯಿಂದಾಗಲಿ, ಬೇರೆ ಬೇರೆ ಶಸ್ತ್ರಗಳಿಂದಾಗಲೀ, ಹಗ್ಗಗಳಿಂದಾಗಲೀ ಭಯವಿಲ್ಲ. ಏಕೆಂದರೆ ಅವು ಯಾವುವೂ ತನಗೆ ಆಪತ್ತು ಉಂಟುಮಾಡಲು ಅಸಮರ್ಥ. ಆದರೆ ಸ್ವಾರ್ಥಿಗಳಾದ ಜ್ಞಾತಿಗಳೇ ನಮಗೆ ಹೆದರಿಕೆ ಹುಟ್ಟಿಸುತ್ತಾರೆ. ಮದವೇರಿದ ಅಥವಾ ತುಂಟ ಆನೆಗಳನ್ನು ಹಿಡಿಯಲು ಆನೆಗಳನ್ನೇ ಬಳಸುವುದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಹೀಗೆ ಆನೆಯು ತನ್ನ ಬಂಧುವಿಂದಲೇ ತೊಂದರೆಗೆ ಒಳಗಾಗುತ್ತದೆ. ಅದರಂತೆ ನೀನೂ ನನಗೆ ಅಪಕಾರ ಮಾಡುತ್ತಿರುವೆ._

*ವಿದ್ಯತೇ ಗೋಷು ಸಂಪನ್ನಂ ವಿದ್ಯತೇ ಬ್ರಾಹ್ಮಣೇ ತಪಃ ವಿದ್ಯತೇ ಸ್ತ್ರೀಷು ಚಾಪಲ್ಯಂ ವಿದ್ಯತೇ ಜ್ಞಾತಿತೋ ಭಯಮ್*

_ಗೋವುಗಳಲ್ಲಿ ಸಂಪತ್ತು ಗೂಢವಾಗಿದೆ.‌ಏಕೆಂದರೆ ಗೋವುಗಳನ್ನು ಧನದ ರೂಪದಲ್ಲಿಯೂ ಸಾಕುತ್ತಾರೆ, ದಾನವನ್ನಾಗಿಯೂ ನೀಡುತ್ತಾರೆ. ಹಾಗಾಗಿ ಗೋವೇ ಸಂಪತ್ತು. ಬ್ರಹ್ಮ ಚಿಂತನೆ ಮಾಡುವವರಲ್ಲಿ ತಪಸ್ಸಿರುತ್ತದೆ. ಪರಮಾತ್ಮನ ಸತತ ಚಿಂತನೆಯೇ ತಪಸ್ಸು. ಸ್ತ್ರೀಯರಲ್ಲಿ ಚಪಲತೆ ಇರುತ್ತದೆ. ಅವರ ಚಾಪಲ್ಯವೇ ಅವರನ್ನು ಹಾಳು ಮಾಡುವಂತಹದು. ಅಂತೆಯೇ ಜ್ಞಾತಿಗಳಿಂದ ಭಯವಿರುತ್ತದೆ. ಅವರೊಡನೆ ಹೇಗೆ ವ್ಯವಹಾರ ಮಾಡಿದರೆ ಅಪಕಾರ ಮಾಡಲಾರರೆಂದೇ ತಿಳಿಯುವುದಿಲ್ಲ._

*ಯಥಾ ಪುಷ್ಕರಪರ್ಣೇಷು ಪತಿತಾಸ್ತೋಯಬಿಂದವಃ ನ ಶ್ಲೇಷಮಭಿಗಚ್ಛಂತಿ ತಥಾನಾರ್ಯೇಷು ಸೌಹೃದಮ್*

_ಕಮಲದ ಎಲೆಗಳ ಮೇಲೆ ಬಿದ್ದ ಜಲಬಿಂದುಗಳು ಅದಕ್ಕೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ನಮ್ಮ ಬಂಧುಗಳು ಅನಾರ್ಯರೆಂದು ದುಷ್ಟರೆಂದು ತಿಳಿದಾಗ ಅವರೊಡನೆ ಸ್ನೇಹ ಅಂಟಿಸಿಕೊಳ್ಳಬಾರದು. ನೀನೂ ನನ್ನ ಪಾಲಿಗೆ ಅನಾರ್ಯ. ಹಾಗಾಗಿ ತಾವರೆಯ ಎಲೆಯಂತೆ ನಿನ್ನೊಡನೆ ನನ್ನ ವ್ಯವಹಾರ.ಬಂಧುಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎಂಬುದಕ್ಕೆ ರಾವಣನ ಮಾತುಗಳು ನಮಗೆ ಮಾದರಿ. ಸಂಬಂಧಿಕರೆಂದು ಹೆಚ್ಚು ಸಂಬಂಧ ಇಟ್ಟುಕೊಂಡರೆ ಅದೇ ನಮ್ಮ ಬಂಧನಕ್ಕೆ ತನ್ಮೂಲಕ ಅವನತಿಗೆ ಕಾರಣವಾಗುವುದು. ರಾವಣ ನುಡಿದ ಮಾತು ವಿಭೀಷಣನಿಗೆ ಅನ್ವಯಿಸದಿದ್ದರೂ ನಮ್ಮ ಬಂಧುಗಳಿಗೆ ಕೆಲವರಿಗೆ ಅನ್ವಯಿಸಬಹುದು. ಅಂತಹವರೊಡನೆ ಮೈಯೆಲ್ಲಾ ಕಣ್ಣಾಗಿ ವ್ಯವಹರಿಸಬೇಕು. ಇಲ್ಲದಿದ್ದರೆ ಆನೆಯಂತೆ ನಮ್ಮ ಬಂಧುಗಳೇ ನಮ್ಮನ್ನು ಖೆಡ್ಡಾಕ್ಕೆ ಬೀಳಿಸುತ್ತಾರೆ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩