ವೇದ ಧರ್ಮ ೩೧

📗🌾📙 ವೇದ-ಧರ್ಮ 📗🌾📙 ಭಾಗ-೩೧

*ಋಷಿ ಛಂದಸ್ಸು ದೇವತೆ*

*ಛಂದಸ್ಸು*

_ವೇದಮಂತ್ರಗಳು ಯಾಕೆ ಹೆಚ್ಚಿನವು ಛಂದೋಬದ್ಧವಾಗಿವೆ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಬಹುದು. ಭಾವವು ಗದ್ಯಕ್ಕಿಂತ ರಾಗಯುಕ್ತವಾದ ಪದ್ಯದಿಂದ ಹೆಚ್ಚು ಸ್ಫುಟಗೊಳ್ಳುವುದು. ನಮ್ಮ ದೈನಂದಿನ ಬದುಕಿನಲ್ಲಿ ನೋಡುವುದಾದರೆ ಒಂದು ಉತ್ತಮ ಸಾಹಿತ್ಯ ಸಂಗೀತ ಮಿಶ್ರವಾಗಿರುವ ಪದ್ಯವನ್ನು ಕೇಳಿದಾಗ ನಮ್ಮ ಆಂತರ್ಯದ ಭಾವವು ಸ್ಫುರಿಸಿ ಆನಂದವನ್ನೋ ದುಃಖವನ್ನೋ ಸುರಿಸುವುದು ಅನುಭವ ಸಿದ್ಧ. ಸ್ತೋತ್ರಗಳಲ್ಲಿ ಭಾವವೇ ಪ್ರಧಾನ. ಭಾಷೆ ಅಥವಾ ಶಬ್ದಗಳ ಆಡಂಬರಕ್ಕಿಂತ ಭಾವ ಹೆಚ್ಚಿದ್ದಾಗ ಸ್ತುತಿ ಆಗುವುದೇ ಹೊರತು ಬರಿದೆ ದೊಡ್ಡ ದೊಡ್ಡ ಶಬ್ದಗಳಿಂದಲ್ಲ. ಈ ಕಾರಣದಿಂದಲೇ ನಮ್ಮಲ್ಲಿ ಜನಪದರೂ ದೊಡ್ಡ ಕೀರ್ತನಕಾರರಾದದ್ದು. ಕರುಣೆಯಿಂದ ವಾಲ್ಮೀಕಿ ಮರುಗಿದಾಗ *ಮಾ ನಿಷಾದ ಪ್ರತಿಷ್ಠಾಂ* ಎಂಬ ಅನುಷ್ಟುಪ್ ಛಂದಸ್ಸಿನ ಸುಂದರ ಪದ್ಯ  ಹುಟ್ಟಿಕೊಂಡಿತು. ದೇವತೆಗಳ ಸ್ತೋತ್ರವೇ ಪ್ರಧಾನವಾಗಿರುವ ವೇದ ಮಂತ್ರಗಳು ಈ ಕಾರಣದಿಂದ ಛಂದೋಬದ್ಧವಾಗಿವೆ. *ಚದಿ ಆಹ್ಲಾದೇ* ಎಂಬ ಧಾತುವಿನಿಂದ ಈ ಛಂದಸ್ ಎಂಬ ಶಬ್ದ ಹುಟ್ಟಿಕೊಂಡಿದೆ. ಧಾತುವಿನ ಅರ್ಥದಂತೆ ಛಂದೋಬಂಧದ ಉಡುಗೆ ತೊಟ್ಟಿರುವ ಸಾಹಿತ್ಯ ಹೆಚ್ಚು ಆಹ್ಲಾದ ಕೊಡುವುದು. ಯಾಸ್ಕರ ಮತದಂತೆ ಆವರಿಸುವಿಕೆ ಈ ಧಾತುವಿನ ಅರ್ಥ. ಪದಗಳನ್ನು ಆವರಿಸಿ ಮುನ್ನಡೆಸುವ ವಿಧಾ‌ನವೇ ಈ ಛಂದಸ್ಸು_

*ಯದೇಭಿರಾತ್ಮಾನಮಾಚ್ಛಾದಯನ್ ದೇವಾ ಮೃತ್ಯೋರ್ಬಿಭ್ಯತಃ ತಚ್ಛಂದಸಾಂ ಛಂದಸ್ತ್ವಮ್*

_ಮೇಲಿನ ಮಾತಿನಂತೆ ದೇವತೆಗಳು ಮೃತ್ಯುವಿನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಛಂದಸ್ಸಿನ ಆವರಣವನ್ನು ಹಾಕಿಕೊಂಡರು ಎಂದಿದೆ. ದೈವೀಭಾವನೆಯಿಂದ ಸೇರಿಕೊಂಡಾಗ ಆ ಮಂತ್ರಗಳ ಶಕ್ತಿ ಪ್ರಕಟಗೊಳ್ಳುವುದು ಅಥವಾ ಅವುಗಳ ಅಮರತ್ವ ಸ್ಥಾಪಿತವಾಗುವುದು. ಆ ಸೀಮೆಯನ್ನು ಮೀರಿದಾಗ ಅವುಗಳ ಆವರಣ ನಾಶವಾಗಿ ಸಾರ್ಥಕತೆಯನ್ನು ಹೊಂದಲಾರವು ಅಥವಾ ಮೃತವಾಗುವವು. ಈ ಅರ್ಥ ನೋಡಿದಾಗ ಛಂದಸ್ಸು ಎಂಬ ಹೆಸರು ಯುಕ್ತವಾಗಿದೆ. ಮಂತ್ರಗಳನ್ನು ಗುರುಗಳ ಉಪದೇಶವಿಲ್ಲದೆ ಮನಸ್ಸಿಗೆ ಬಂದಂತೆ ಹೇಳುವುದು ಅವುಗಳನ್ನು ಕೊಂದಂತೆಯೇ ಸರಿ. ಹಾಗೆ ಉಚ್ಚರಿಸಿದಾಗ ಆ ಮಂತ್ರ ಪ್ರತಿಪಾದ್ಯ ದೇವತೆ ಶಪಿಸಿ ಹೋಗುವುದೆಂದು ಸ್ಮೃತಿಗಳು ಹೇಳುತ್ತವೆ. *ಛಂದಃ ಪಾದೌ ತು ವೇದಸ್ಯ* ಎಂಬಂತೆ ಛಂದಸ್ಸು ವೇದಗಳ ಕಾಲು. ನಡೆಯಲು ನಿಲ್ಲಲು ದೇಹಕ್ಕೆ ಕಾಲು ಆಧಾರವಾಗುವಂತೆ ಮಂತ್ರದಲ್ಲಿನ ರಸ ಭಾವಗಳು ಸರಿಯಾಗಿ ತೋರಲು ಛಂದಸ್ಸು ಅವಶ್ಯಕ. ಛಂದದ ಬಂಧವು ಒಂದು ಸೌಂದರ್ಯವನ್ನೂ ತಂದುಕೊಡುವುದು. ಹೀಗಾಗಿಯೇ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ರಮಣೀಯ ಹಾಗೂ ಉತ್ತಮವಾದ ಅರ್ಥವುಳ್ಳ ಕಾವ್ಯಗಳು ರಚಿಸಲ್ಪಟ್ಟಿವೆ. ಆಂತರ್ಯದ ಅನುಭವಗಳೂ, ಪ್ರಭಾವೀ ಅನುಭವಗಳೂ ಹೆಚ್ಚಾಗಿ ಛಂದೋಬದ್ಧವಾಗಿಯೇ ಪ್ರಕಟಗೊಳ್ಳುತ್ತವೆ._  ಮುಂದುವರಿಯುತ್ತದೆ....

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩