ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*सखीनिव प्रीतियुजोनुजीविन: समानमानान् सुहृदश्च बन्धुभि: | न सन्ततं दर्शयते गतस्मय: कृताधिपत्यामिव साधु बन्धुताम् ||*
_ಕವಿ ಈ ಶ್ಲೋಕದಲ್ಲಿ ಯಾರೊಡನೆ ಹೇಗಿರಬೇಕು ನಮ್ಮ ವರ್ತನೆ ಎನ್ನುವುದನ್ನು ಸೂಚಿಸುತ್ತಿರುವನು. ಗೂಢಚಾರ ಧರ್ಮಜನ ಬಳಿ ಸುಯೋಧನನ ಆಳ್ವಿಕೆಯ ವಿಷಯಗಳನ್ನು ಅರುಹುತ್ತಿರುವನು. ದುರ್ಯೋಧನ ಹಿಂದಿನಂತಿಲ್ಲ. ಪ್ರಜೆಗಳ ವಿಶ್ವಾಸವನ್ನು ಗಳಿಸಲು ಆಲಸ್ಯ ಬಿಟ್ಟು ಮನುವಿನ ಧರ್ಮಶಾಸ್ತ್ರದ ಅಡಿಯಲ್ಲಿ ನ್ಯಾಯ ಮಾರ್ಗದಲ್ಲಿ ನಡೆಯುತ್ತಿರುವನು. ಅವನ ವರ್ತನೆಯಂತೂ ಅದ್ಭುತವಾಗಿದೆ. ಅನುಜೀವಿಗಳಲ್ಲಿ ಮಿತ್ರತ್ವವನ್ನು ತೋರ್ಪಡಿಸುತ್ತಿರುವನು. ಒಡೆಯನನ್ನು ಅನುಸರಿಸಿ ಅವನ ಮನೋಧರ್ಮದಂತೆ ಕಾರ್ಯವನ್ನು ನಿರ್ವಹಿಸುವ ಸೇವಕರು ಅನುಜೀವಿಗಳು. ಅವರನ್ನು ಮಿತ್ರರಂತೆ ಸಲಹುತ್ತಿದ್ದಾನೆ. ಆಪ್ತಮಿತ್ರರೊಡನೆ ಎಂತಹ ಆದರ, ವಿಶ್ವಾಸ ತೋರುವೆವೋ ಹಾಗೆ ತೋರುತ್ತಿರುವನು ರಾಜ. ಹಾಗಾದರೆ ಮಿತ್ರರನ್ನು ಹೇಗೆ ಕಾಣುತ್ತಿರುವನು ಎಂದರೆ ಅವರನ್ನು ಬಂಧುಗಳಂತೆ ಆದರಿಸುತ್ತಿದ್ದಾನೆ. ಬಂಧುಗಳಲ್ಲಿ ಯಾವ ಸಲುಗೆ, ಆತ್ಮೀಯತೆ, ಮನೆಗೆ ಬಂದಾಗ ಸತ್ಕರಿಸುವ ಪರಿ ಇವೆಲ್ಲವನ್ನೂ ದುರ್ಯೋಧನನು ಮಿತ್ರರಲ್ಲಿ ತೋರುತ್ತಿರುವನು. ಹಾಗಾದರೆ ಬಂಧುಗಳಲ್ಲಿ ಹೇಗಿದೆ ಅವನ ವರ್ತನೆಯೆಂದರೆ ಅವರನ್ನು ರಾಜರಂತೆ ಗೌರವಿಸುತ್ತಿರುವನು. ನೆರೆ ದೇಶದ ರಾಜನೊಬ್ಬ ಅರಮನೆಗೆ ಬಂದಾಗ ಎಂತಹ ಸ್ವಾಗತ, ಆದರಾತಿಥ್ಯ, ಅನೇಕ ಕಾಣಿಕೆಗಳನ್ನು ಕೊಡುಗೆಯಾಗಿ ನೀಡಿ, ಅವನು ಬಯಸಿದ ಇಷ್ಟವನ್ನು ಪೂರೈಸುವ ರೀತಿಯಲ್ಲಿ ಈ ನಿನ್ನ ಶತ್ರುವು ಬಂಧಗಳನ್ನು ನೋಡುತ್ತಿರುವನು. ಮುಂದೆ ಯಾರೂ ತನಗೆ ತಿರುಗಿ ಬೀಳಬಾರದೆಂಬ ಹಾಗೂ ಎಲ್ಲರಿಗೂ ತನ್ನ ಮೇಲೆ ಆದರ ಮೂಡಬೇಕೆಂಬ, ನಂಬಿಕೆ ಹುಟ್ಟಿಸಬೇಕೆಂದು ಹೀಗೆ ಮಾಡುತ್ತಿರುವನು ಆ ಕಪಟಿ ದುರ್ಯೋಧನ. ದುರ್ಯೋಧನನೇನೋ ಆಪತ್ತಿನಲ್ಲಿ ಪಾರಾಗಬೇಕೆಂದು ಇಂತಹ ಓಲೈಕೆ ತೋರುತ್ತಿದ್ದಾನೆ. ಆದರೆ ನಾವು ಭೃತ್ಯರಲ್ಲಿ, ಮಿತ್ರರಲ್ಲಿ, ಬಂಧುಗಳಲ್ಲಿ ಎಂದಿಗೂ ಇಂತಹ ವರ್ತನೇ ತೋರಬಹುದಲ್ಲವೇ! ಉದಾರ ಶೀಲರಿಗೆ ಇದು ಅಸಾಧ್ಯವಾದುದಲ್ಲ. ನಮ್ಮ ವರ್ತನೆ ಉಚ್ಚಮಟ್ಟದಲ್ಲಿದ್ದಷ್ಟೂ ನಮ್ಮನ್ನು ಪ್ರೀತಿಸುವವರು ಹೆಚ್ಚುತ್ತಾರಲ್ಲವೇ! ಹಾಗಿದ್ದ ಮೇಲೆ ಇಂತಹ ಸ್ವಭಾವ ತೋರುವುದು ನಮಗೇನೂ ನಷ್ಟ ತರುವುದಿಲ್ಲ. *ಜನಾನುರಾಗ ಪ್ರಭವಾ ಹಿ ಸಂಪದಃ* ಜನರ ಅನುರಾಗವೇ ದೊಡ್ಡ ಸಂಪತ್ತು ಅಂದಮೇಲೆ ಅನುರಾಗ ತರುವ ರಾಗ ಯಾಕೆ ತೋರಬಾರದು!_
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ