ವೇದ ಧರ್ಮ ೩೧

📗🌾📙 ವೇದ-ಧರ್ಮ 📗🌾📙 ಭಾಗ-೩೧

*ಋಷಿ ಛಂದಸ್ಸು ದೇವತೆ*

*ಛಂದಸ್ಸು*

_ದೇವತೆಗಳನ್ನು ಸಂತೋಷಪಡಿಸಲು ಗಾನವು ಒಂದು ಸಾಧನ. ಹಾಗೆ ಗಾನ ಮಾಡಲು ಛಂದೋಬದ್ಧವಾದ ಪದ್ಯವು ಸಹಾಯಕ. ಹಾಗಾಗಿಯೇ ಋಷಿಗಳಿಗೆ ಮಂತ್ರಗಳು ಛಂದೋಬದ್ಧವಾಗಿಯೇ ಸಾಕ್ಷಾತ್ಕೃತವಾದವು. ನೆನಪಿನಲ್ಲಿ ಇಟ್ಟಕೊಳ್ಳುವುದಕ್ಕೂ ಗದ್ಯಕ್ಕಿಂತ ಪದ್ಯವೇ ಸುಲಭ. ಹೀಗಾಗಿಯೇ ಇರಬೇಕು, ವೇದಮಂತ್ರಗಳ ರೂಪ ಕೆಡದೆ ಒಂದೇ ಬಗೆಯಲ್ಲಿ ಉಳಿದುಬಂದಿರುವಂತಹದು. ಉಚ್ಚಾರಣೆಯಲ್ಲಿ ಉತ್ತರದವರಿಗೂ ನಮಗೂ ಅಲ್ಪಸ್ವಲ್ಪ ವ್ಯತ್ಯಾಸವಿದೆಯೇ ಹೊರತು ಅಕ್ಷರದಲ್ಲಲ್ಲ. ವೇದಮಂತ್ರಗಳಲ್ಲಿ  ಇಷ್ಟು ಛಂದಸ್ಸುಗಳು ಪ್ರಸಿದ್ಧವಾಗಿವೆ. *ಗಾಯತ್ರ್ಯುಷ್ಣಿಗನುಷ್ಟುಪ್ಬೃಹತೀ ಪಂಕ್ತಿಚ್ಛಂದಾಸಿ* ಎಂದು. ಗಾಯತ್ರೀ, ಉಷ್ಣಿಕ್, ಅನುಷ್ಟುಪ್,ಬೃಹತೀ, ಪಂಕ್ತಿ. ವೇದಮಂತ್ರಗಳಲ್ಲಿ ಛಂದೋನಿಯಮಗಳ ಕಟ್ಟುನಿಟ್ಟಿನ ಪಾಲನೆ ಲೌಕಿಕ ಕಾವ್ಯಗಳಂತೆ ಇಲ್ಲ. ವರ್ಣಗಳ ಕ್ರಮ ಹಾಗೂ ಮಾತ್ರಾ ನಿಯಮಗಳನ್ನು ಕೆಲವೆಡೆ ಮೀರಿಯೂ ಮಂತ್ರಗಳು ಇವೆ. ಅಕ್ಷರಗಳ ಸಂಖ್ಯೆಯಿಂದ ವೇದಮಂತ್ರಗಳಲ್ಲಿ ಛಂದಸ್ಸನ್ನು ಗುರುತಿಸಬಹುದು. ಕಾತ್ಯಾಯನರ *ಸರ್ವಾನುಕ್ರಮಣೀ* ಎಂಬ ಗ್ರಂಥದಲ್ಲಿ ಈ ಎಲ್ಲಾ ವೈದಿಕ ಛಂದಸ್ಸುಗಳ ನಿರೂಪಣೆ ಇದೆ. ಲೌಕಿಕದಲ್ಲಿ ಒಂದು ಅಕ್ಷರದಿಂದ ಹಿಡಿದು ಇಪ್ಪತ್ತಾರು ಅಕ್ಷರಗಳಿಗೆ ಛಂದಸ್ಸುಗಳು ಉಂಟು. ಇಪ್ಪತ್ತೇಳು ಅಕ್ಷರಗಳ ಛಂದಸ್ಸು ಚಂಡವೃಷ್ಟಿ ಪ್ರಯಾತ ಎನ್ನುವುದು ಆಗಿದೆ. ಅನಂತರ ರಗಣವೊಂದನ್ನು  ಸೇರಿಸುತ್ತಾ ಅರ್ಣ, ಅರ್ಣವ ಇತ್ಯಾದಿ ಬೆಳೆಯುತ್ತಾ ಹೋಗುತ್ತದೆ. ಈ ಲಕ್ಷಣಗಳಿಗಿಂತ ವ್ಯತಿರಿಕ್ತವಾದುದು *ಗಾಥಾ* ಎಂದು ಕರೆಸಿ ಕೊಳ್ಳುತ್ತದೆ. ಈ ಗಾಥೆಗಳಲ್ಲಿ ೩,೪,೬ ಪಾದಗಳೂ ಇರಬಹುದು. ಸಂಸ್ಕೃತ ಸಾಹಿತ್ಯದಲ್ಲಿ ಗಾಥಾ ಸಪ್ತಶತೀ ಎನ್ನುವ ಗ್ರಂಥ ಬಹುಶಃ ಈ ಸಾಲಿಗೆ ಸೇರಿರಬಹುದು. ( ನಾನು ಓದಿಲ್ಲ )_

_ಆಗ ಹೇಳಿದ ಛಂದಸ್ಸುಗಳಲ್ಲದೇ *ತ್ರಿಷ್ಟುಪ್, ಜಗತೀ,ಸಂಕೀರ್ಣ,ಪ್ರಗಾಥ, ಅಷ್ಟಿ,ಅತ್ಯಷ್ಟಿ,ಧೃತಿ,ಅತಿಧೃತಿ,ಕೃತಿ,ಪ್ರಕೃತಿ,ಆಕೃತಿ,ವಿಕೃತಿ, ಸಂಕೃತಿ ,ಅಭಿಕೃತಿ,ಉತ್ಕೃತಿ ಇತ್ಯಾದಿ ಛಂದಸ್ಸುಗಳು ವೇದದಲ್ಲಿವೆ._

_ಪುರಾತನ ವೇದಸಾಹಿತ್ಯದಲ್ಲಿ ಬಿಗಿಯಾಗಿದ್ದ ಛಂದೋನಿಯಮವು ಕಾಲಾಂತರದಲ್ಲಿ ಉಚ್ಚಾಣೆಯ ವ್ಯತ್ಯಾಸಗಳಿಂದ ಸ್ವಲ್ಪ ನಿಯಮ ಮುರಿಯಿತೇನೋ ಎನ್ನಬಹುದು. ಜ್ಯೇಷ್ಠ ಪದ ಜಯಿಷ್ಠ ಎಂದೂ ಉಚ್ಚರಿಸಿ ಅಥವಾ ವಾತ ಪದವನ್ನು ವಾತ ಎಂದೂ ಉಚ್ಚರಿಸಿದಾಗ ವ್ಯತ್ಯಾಸ ಕಾಣಬಹುದೆಂದು ಕೆಲವರ ಮತ. ಎಂಟು ಅಕ್ಷರಗಳಿರುವ ಮೂರು ಪಾದಗಳಿದ್ದರೆ ಅದು ಗಾಯತ್ರೀ ಛಂದಸ್ಸು ಎಂದು ಕರೆಯಲಾಗುತ್ತದೆ. ಉ- *ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ, ಹೋತಾರಂ ರತ್ನಧಾತಮಮ್* ಕೆಲವು ಛಂದಸ್ಸುಗಳಲ್ಲಿ ನಾಲ್ಕು ಪಾದಗಳುಂಟು. ಅನುಷ್ಟುಪ್ ಛಂದಸ್ಸಿನಲ್ಲಿ ನಾಲ್ಕು ಪಾದಗಳುಂಟು. ಸತೋಬೃಹತೀ ಎಂಬ ಛಂದಸ್ಸಿನ ಮೊದಲ ಪಾದದಲ್ಲಿ ಹನ್ನೆರಡು ಅಕ್ಷರಗಳೂ, ಎರಡನೇ ಪಾದದಲ್ಲಿ ಎಂಟು ಅಕ್ಷರಗಳೂ ಇವೆ. ಅಕ್ಷರಗಳ ಸಂಖ್ಯೆ ಬೇರೆ ಬೇರೆ ಆಗಿರುವ ಕಾರಣ, ಪಾದಗಳ ಸಂಖ್ಯೆ ಬೇರೆ ಬೇರೆ ಆದ ಕಾರಣ ಅನೇಕ ಬಗೆಯ ಛಂದಸ್ಸುಗಳು ಹುಟ್ಟಿಕೊಂಡಿವೆ._

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩