ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ವಸಿಷ್ಠರ ಮಾತಿನಂತೆ ಆ ಕ್ಷಣದಲ್ಲೇನೋ ಸಿಟ್ಟು ನಿಯಂತ್ರಿಸಿದ ಪರಾಶರನು ಕಾಲಾಂತರದಲ್ಲಿ ಮತ್ತಷ್ಟು ಸಿಟ್ಟಿಗೊಳಗಾದನು. ಮಹಾತೇಜಸ್ವಿಯೂ ಆದ ಆ ಶಕ್ತಿಯ ಮಗನು ರಾಕ್ಷಸರ ನಾಶಕ್ಕಾಗಿ ರಾಕ್ಷಸ ಸತ್ರವೆಂಬ ವಿಶಿಷ್ಟವಾದ ಯಜ್ಞವನ್ನು ಆರಂಭಿಸಿದನು. ತರುವಾಯ ಯಜ್ಞ ಮುಂದುವರೆದಂತೆ ತನ್ನ ಅಪ್ಪನ ಸಾವನ್ನು ನೆನೆಸಿಕೊಂಡ ಆ ಪರಾಶರನು ವೃದ್ಧರು ಬಾಲಕರಾದಿಯಾಗಿ ಅನೇಕ ರಾಕ್ಷಸರನ್ನು ಸುಟ್ಟು ಹಾಕಿದನು. ಇವನ ಈ ಪ್ರತಿಜ್ಞೆಯನ್ನು ಹಾಳು ಮಾಡಿದರೆ ಮತ್ತಿನ್ನೇನು ಅನರ್ಥವಾಗುವುದೋ ಎಂದು ಎಣಿಸಿದ ವಸಿಷ್ಠರು ಅದಕ್ಕೆ ತಡೆಯಲಿಲ್ಲ. ಆ ಶ್ರೇಷ್ಠ ತಪಸ್ವಿ ಪರಾಶರನು *ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ* ಎಂಬ ಮೂರು ಅಗ್ನಿಗಳೊಡನೆ ಯಾಗ ನಡೆಸುತ್ತಾ ತಾನು ನಾಲ್ಕನೆಯ ಅಗ್ನಿಯಂತೆ ಶೋಭಿಸುತ್ತಿದ್ದನು. ವಿಧಿಗನುಸಾರವಾಗಿಯೇ( ಅಥವಾ ವಿಧಿ ನಿರ್ಣಯದಂತೆ) ನಡೆದ ಆ ಯಾಗದಲ್ಲಿ ಅಗ್ನಿಯು ಜಗವನ್ನೇ ಸುಡುವಂತೆ ಪ್ರಜ್ವಲಿಸಿತು._

_ಅನಂತರ ಬೇರೆಯವರಿಗೆ ಮಾಡಲು ಅಸಾಧ್ಯವಾದ ಆ ಯಜ್ಞವನ್ನು ತಡೆಯಲೆಂದು ಉದಾರ ಮನಸ್ಸಿನ ಅತ್ರಿ ಮಹರ್ಷಿಗಳು, ಹಾಗೂ ರಾಕ್ಷಸರ ನಾಶ ಒಳ್ಳೆಯದಲ್ಲವೆಂಬ ಉದ್ದೇಶ ಹೊಂದಿದ ಪುಲಸ್ತ್ಯ ಪುಲಹ, ಕ್ರತು ಇವರೂ ಆ ಮಹಾಯಾಗಕ್ಕೆ ಬಂದರು.ಪುಲಸ್ತ್ಯನು ಪರಾಶರರನ್ನು ಉದ್ದೇಶಿಸಿ ಹೀಗೆ ಹೇಳಿದನು. " ಮಗು ಅಜ್ಞರೂ ದೋಷರಹಿತರೂ ಆದ ಈ ರಾಕ್ಷಸರನ್ನು ಕೊಂದು ನಿನಗೆ ಸಂತೋಷವಾಗುವುದೇ? ಸೋಮಪಾನ ಮಾಡಿದವರಲ್ಲಿ ಶ್ರೇಷ್ಠನೇ, ನೀನು ನಿನ್ನ ವಂಶವನ್ನು ನಾಶ ಮಾಡುವಂತಹ ಈ ಅಧರ್ಮದಲ್ಲೇಕೆ ತೊಡಗಿರುವಿ? ಇತ್ತ ರಾಕ್ಷಸನಾಗಿದ್ದ ಕಲ್ಮಾಷಪಾದನು ಸ್ವರ್ಗವೇರಲು ಸಿದ್ಧನಾಗಿದ್ದಾನೆ. ವಸಿಷ್ಠ ಮಹಾಮುನಿಯ ಪುತ್ರರಾದ ನಿನ್ನ ತಂದೆ ಹಾಗೂ ತೊಂಭತ್ತೊಂದು ಜನ ಪುತ್ರರು ಸ್ವರ್ಗದಲ್ಲಿ ದೇವತೆಗಳೊಡನೆ ಸುಖದಿಂದಿರುವರು. ಇದೆಲ್ಲವೂ ವಸಿಷ್ಠನಿಗೆ ಗೊತ್ತೇ ಇದೆ. ವಸಿಷ್ಠರು ಇದು ಗೊತ್ತಿದ್ದೂ ನಿನಗೆ ಬೇಸರವಾಗಬಾರದೆಂದು ಸುಮ್ಮನಿರುವರು. ಅವರಿಗೂ ಈ ನಿನ್ನ ಕಾರ್ಯ ಖೇದ ಉಂಟು ಮಾಡಿದೆ. ಮಗು, ಶೋಚನೀಯರಾದ ಈ ರಾಕ್ಷಸರ ವಿನಾಶದಲ್ಲಿ ನೀನೊಬ್ಬ ನಿಮಿತ್ತನಾಗಿದ್ದಿ. ಆದ್ದರಿಂದ ಈ ದುಷ್ಕಾರ್ಯವನ್ನು ಇಲ್ಲಿಗೇ ನಿಲ್ಲಿಸಿಬಿಡು. ನಿನಗೆ ಒಳ್ಳೆಯದಾಗಲಿ"ಎಂದರು. ಗುರುಗಳ ಮಾತಿನಂತೆ ಶಕ್ತಿಯ ಮಗನು ಆ ಯಜ್ಞವನ್ನು ಸಮಾಪ್ತಿಗೊಳಿಸಿದನು. ಆ ಮುನಿಯು ಅನಂತರ ಸಮಸ್ತ ರಾಕ್ಷಸ ಸಂಹಾರಕ್ಕಾಗಿ ಸಿದ್ಧಪಡಿಸಿದ್ದ ಅಗ್ನಿಯನ್ನು ಹಿಮಾಲಯದ ಉತ್ತರ ಭಾಗದಲ್ಲಿ ವಿಸರ್ಜಿಸಿದನು. *ಸ ತತ್ರಾದ್ಯಾಪಿ ರಕ್ಷಾಂಸಿ ವೃಕ್ಷಾನಶ್ಮಾನ ಏವ ಚ ಭಕ್ಷಯನ್ದೃಶ್ಯತೇ ವಹ್ನಿಃ ಸದಾ ಪರ್ವಣಿ ಪರ್ವಣಿ* ಅದೇ ಬೆಂಕಿ ಪ್ರತಿಪರ್ವಕಾಲದಲ್ಲೂ ರಾಕ್ಷಸರನ್ನೂ ವೃಕ್ಷಗಳನ್ನೂ ಕಲ್ಲುಗಳನ್ನೂ ಇಂದಿಗೂ ತಿನ್ನುತ್ತಿದೆ._

_ಕೊಲ್ಲಲು ಒಬ್ಬನಿದ್ದರೆ ಕಾಯಲು ಇನ್ನೊಬ್ಬ ಇರುವನು ಎಂಬ ಮಾತು ಎಷ್ಟು ಸತ್ಯವಲ್ಲವೇ! ರಾಕ್ಷಸರ ನಾಶವೆಂದರೆ ದುಷ್ಟತನದ ನಾಶ. ಆದರೆ ಕೆಲವೊಮ್ಮೆ ದುಷ್ಟರಲ್ಲಿಯೂ ಉತ್ತಮ ಗುಣಗಳಿರುತ್ತವೆ. ದುಷ್ಟತನ ಹೋಗಬೇಕೇ ಹೊರತು ಸದ್ಗುಣಗಳಲ್ಲ. ಪ್ರತಿಯೊಂದು ಜೀವಿಯಲ್ಲಿಯೂ ಇವೆರಡೂ ವಾಸವಾಗಿರುತ್ತವೆ. ಸದ್ಗುಣಗಳ ಉಳಿವಿಗಾಗಿ ಅತ್ರಿ ಮುಂತಾದ ಮಹರ್ಷಿಗಳ ರೀತಿ ಪ್ರಯತ್ನ ಪಡುತ್ತಲೇ ಇರಬೇಕು. ದುಷ್ಟತನದ ನಾಶಕ್ಕಾಗಿ ನಮ್ಮ ಮನದಲ್ಲಿ ಯಜ್ಞ ಅಂದರೆ ಭಗವಂತನ ಆರಾಧನೆ ಅವಶ್ಯಕ. ಅಂತಹ ಯಜ್ಞವು ನಮ್ಮನ್ನು ನಿರ್ಮಲವಾಗಿಸಿ ಅಗ್ನಿಯಂತೆ ಬೆಳಗಿಸುವುದು. ಇಂತಹ ಅಮೋಘವಾದ ಸಂದೇಶ ಈ ಕಥೆಯಲ್ಲಿದೆ. ದುಷ್ಟರನ್ನೂ ಕೊಲ್ಲದೆ ಸಜ್ಜನರಾಗಿಸುವ ಪ್ರಯತ್ನ ನಿರಂತರವಾಗಿರಲಿ. ಒಳ್ಳೆಯತನಕ್ಕೆ ಎಂದೂ ಅಳಿವಿಲ್ಲ. ಅದು ಎಲ್ಲಿದ್ದರೂ ಚಿರಂಜೀವಿ. ಕೋಪದ ಭರದಲ್ಲಿ ಯಾರನ್ನೂ ಕೊಲ್ಲದೇ ಕೋಪವನ್ನೇ ಕೊಲ್ಲುವ ಪ್ರಯತ್ನ ಮಾಡೋಣವೇ_!


📗 ಆಕರ - ಉದ್ಯೋಗಪರ್ವ ೧೭೩ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩