ರಾಮಾಯಣ ೪೬
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೬
*ವಾಗ್ದಂಡಸ್ತ್ವಥ ಪಾರುಷ್ಯಮರ್ಥದೂಷಣಮೇವ ಚ, ಪಾನಂ ಸ್ತ್ರೀ ಮೃಗಯಾ ದ್ಯೂತಂ ವ್ಯಸನಂ ಸಪ್ತಧಾ ಪ್ರಭೋಃ*
_ವಿಭೀಷಣ ಸಭೆಯಲ್ಲಿ ಹೇಳುವ ಮಾತು. ಈ ರಾವಣನೊಡನೆ ನೀವು ಹೋಗಬೇಡಿ. ನೀವೆಲ್ಲಾ ಪರಾಕ್ರಮಿಗಳಿರುವುರಿ. ಈ ರಾವಣನಾದರೋ ವ್ಯಸನಗಳಿಗೆ ವಶನಾಗಿದ್ದಾನೆ. ಕಾಮಂದಕ ನೀತಿಯಲ್ಲಿ ರಾಜನ ವ್ಯಸನಗಳನ್ನು ಹೀಗೆ ಹೇಳಿದ್ದಾರೆ. ಕಠೋರವಾದ ಮಾತು, ಕ್ರೂರವಾದ ಶಿಕ್ಷೆ, ಧನದ ವೃಥಾ ಅಪವ್ಯಯ, ಮದ್ಯಪಾನ, ಸ್ತ್ರೀಯರ ಬಗೆಗಿನ ಅತೀ ಆಕರ್ಷಣೆ, ಬೇಟೆ ಹಾಗೂ ದ್ಯೂತ. ಈ ಏಳು ವ್ಯಸನಗಳು ರಾಜರ ನಾಶವನ್ನು ತಾವೇ ತಂದೊಡ್ಡುತ್ತವೆ. ತಪ್ಪು ಮಾಡಿದಾಗಲೂ ಭೃತ್ಯರ ಬಳಿ ಅಥವಾ ಮಂತ್ರಿಗಳ ಬಳಿ ಹೆಚ್ಚು ಕಠೋರವಾಗಿ ವ್ಯವಹರಿಸಬಾರದು. ಅದು ಅವರ ವಿಶ್ವಾಸಭಂಗಕ್ಕೆ ಹೇತುವಾಗುವುದು. ಇನ್ನು ಕ್ರೂರವಾದ ಶಿಕ್ಷೆಯು ಪ್ರಜೆಗಳಿಗೆ ರಾಜನ ಬಗ್ಗೆ ಅತಿಯಾದ ಭಯ ಹಾಗೂ ಹೇಸಿಗೆಯನ್ನು ಹುಟ್ಟಿಸುತ್ತದೆ. ರಾಜ್ಯದ ಬೊಕ್ಕಸದ ಹಣವನ್ನು ಮೂರ್ಖತನದ ಯೋಜನೆಗಳಲ್ಲಿ ತೊಡಗಿಸುವುದು ಕೂಡ ರಾಜ್ಯ ನಾಶಕ್ಕೆ ಕಾರಣವಾಗುವುದು. ಭಾಗ್ಯಗಳ ಹೆಸರಿನಲ್ಲೋ , ಅನ್ನದ ಹೆಸರಿನಲ್ಲೋ ಹಣದ ಅಪವ್ಯಯ ರಾಜನ ಒಂದು ದೋಷವೇ ಸರಿ. ಇನ್ನು ಮದ್ಯಪಾನ ಮನುಷ್ಯನ ಎಲ್ಲಾ ರೀತಿಯ ಏಳಿಗೆಗೆ ಮಾರಕ. ಎಷ್ಟು ಸಮರ್ಥಿಸಿದರೂ ಅದು ಸೆರಗಿನಲ್ಲಿ ಕಟ್ಟಿಕೊಂಡ ಬೆಂಕಿಯಂತೆ ಸುಡುವುದು ಖಂಡಿತ. ಪರಸ್ತ್ರೀಯರೊಡನೆ ವಿಲಾಸ ಒಳ್ಳೆಯದಲ್ಲ. ಅದೂ ಸಕಲವಿನಾಶಕ್ಕೆ ಹೇತು. ಕ್ರೂರಪ್ರಾಣಿಗಳ ನಾಶಕ್ಕಾಗಿ ಬೇಟೆ ಸಾಧುವೇ ಹೊರತು ಬೇರೆ ಉದ್ದೇಶದ ಬೇಟೆಯಲ್ಲ. ದ್ಯೂತ ಎಲ್ಲಾ ರೀತಿಯಿಂದಲೂ ಅನರ್ಥಕರ. ಧರ್ಮಜ- ನಳ ಮುಂತಾದವರೇ ಪ್ರತ್ಯಕ್ಷ ಸಾಕ್ಷಿ. ಈ ರಾವಣ ಈ ವ್ಯಸನಗಳನ್ನು ಮೈಗೂಡಿಸಿಕೊಂಡಿದ್ದಾನೆ. ಅದರಲ್ಲೂ ಸ್ತ್ರೀ ಸಹವಾಸ ಬಯಸುವ ಇವನ ಅಧಃಪತನ ಖಂಡಿತ. ಏಕೆ ಇವನ ಜೊತೆ ಹೆಜ್ಜೆ ಹಾಕಿ ನಿಮ್ಮ ಹೆಜ್ಜೆಗಳನ್ನು ಕಳೆದುಕೊಳ್ಳುವಿರಿ!_
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ