ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*नरपतिनिधनं मयानुभूतं नृपतिसुतव्यसनं मयैव दृष्टम् | श्रुत इह स च मैथिलीप्रणाशो गुण इव बह्वपराद्धमायुषा मे ||*
_ಸುಮಂತ್ರ ದುಃಖಿಸುತ್ತಿದ್ದಾನೆ. ಬಹುಕಾಲದ ಆಯುಷ್ಯ ಎನ್ನುವುದು ಎಲ್ಲರಿಗೂ ಗುಣವಾದರೆ ನನ್ನ ಪಾಲಿಗೆ ಅದು ದೋಷ. ಇನ್ನೂ ಏನೇನು ಕಷ್ಟಗಳನ್ನು ನೋಡಬೇಕೋ ಎಂಬ ದುಃಖವೇ ಇದಕ್ಕೆ ಕಾರಣ. ನನ್ನ ಬಹುಕಾಲದ ಮಿತ್ರನೂ ಒಡೆಯನೂ ಆಗಿದ್ದ ದಶರಥ ಕಣ್ಣೆದುರೇ ಅಸುನೀಗಿದ. ಆ ದುಃಖ ಕಂಡಿದ್ದಲ್ಲ ಅನುಭವಿಸಿದ್ದು. ನನ್ನನ್ನು ತೀವ್ರತರವಾಗಿ ಬಾಧಿಸಿದ್ದು. ಅಷ್ಟಲ್ಲದೇ ನೃಪತಿಯ ಮಕ್ಕಳ ಕಷ್ಟವನ್ನು ನೋಡಲೆಂದೇ ನಾ ಬದುಕಿರುವೆ. ಪಟ್ಟ ಏರಬೇಕಾದ ರಾಮ ಕಷ್ಟದ ಪರ್ವತ ಏರಿದ. ಭರತ ಯುವರಾಜನಾಗಬೇಕಿದ್ದವನು ಅಣ್ಣನ ಸ್ಥಿತಿಯನ್ನು ಕಂಡು ರಾಜ್ಯವನ್ನೇ ನಿರಾಕರಿಸಿ ದುಃಖಿತನಾದ. ಇನ್ನು ಲಕ್ಷ್ಮಣ ಶತ್ರುಘ್ನರೂ ತಮ್ಮ ತಮ್ಮ ಒಡನಾಡಿಗಳ ಕಷ್ಟವನ್ನು ಕಂಡು ಮತ್ತಷ್ಟು ಮರುಗಿದರು. ಈ ಸುಮಂತ್ರ ಬದುಕಿರುವಾಗ ಈ ರಾಜಕುಮಾರರ ಇಂತಹ ದುಃಖಪರಂಪರೆ ಹೇಗೆ ನೋಡಿ ಸಹಿಸಲಿ? ಈಗ ನೋಡಿದರೆ ಎಲ್ಲರ ಮುದ್ದಿನ ಸೊಸೆ ಸೀತೆ ಅಪಹೃತಳಾದ ವಾರ್ತೆಯೂ ನನ್ನ ಕಿವಿಗೆ ಬೀಳುತ್ತಿದೆ. ಬರಿದೆ ದುಃಖದ ಸಂಗತಿಗಳನ್ನು ಕೇಳಲು ಮಾತ್ರ ನನ್ನ ಕಿವಿಗಳು ಇಂದಿಗೂ ಕೇಳಿಸುತ್ತಿವೆಯೇ? ಅಯ್ಯೋ ಆ ಬಾಲೆಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ವನವಾಸದ ಕಷ್ಟ, ಈಗ ಅಪಹರಣದ ದುಃಖ. ಇವನ್ನೆಲ್ಲಾ ನೋಡಲೆಂದೇ ದೇವನು ನನ್ನ ಆಯುಷ್ಯ ಇಷ್ಟು ದೀರ್ಘ ಬರೆದಿರುವನೋ ಏನೋ! ನನ್ನ ಪಾಲಿಗೆ ಆಯುಷ್ಯ ಕಳೆಯುವುದು ಕಷ್ಟಕರವಾದುದು. ಎಂತಹ ಮಾರ್ಮಿಕವಾದ ಮಾತು. ಬಹಳ ಕಾಲ ಬದುಕಿರುವ ವ್ಯಕ್ತಿಗೆ ಇದು ಸಹಜ ಪ್ರಕ್ರಿಯೆ. ತನ್ನ ಕಣ್ಣೆದುರೇ ಆಪ್ತರು, ಮಕ್ಕಳು ಅಸುನೀಗಿದಾಗ ರೋಗಪೀಡಿತರಾದಾಗ ಕಷ್ಟ ಅನುಭವಿಸಿದಾಗ ಅವರ ದುಃಖ ಹೇಳತೀರದು. ಯಾಕಾದರೂ ತಾನು ಬದುಕಿರುವೆನೋ ಎಂಬ ಭಾವ ಕಾಡುವುದು. ಕವಿ ಇದನ್ನೇ ಸುಮಂತ್ರನ ಮಾತಿನಲ್ಲಿ ಚಿತ್ರಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ