ರಾಮಾಯಣ ೧೫೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೭🏝📖   

*ಕಶ್ಚಿನ್ನ ದುಷ್ಟಸ್ತತ್ರಾಸೀತ್ಪರದಾರರತೋ ನರಃ*

_ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂದರೆ ಯಾರೂ ದುಷ್ಟರು ಇರಲಿಲ್ಲ. ದೋಷವನ್ನೇ ಗ್ರಹಿಸುವವರು ಅಥವಾ ದೋಷಗಳಿಂದ ತುಂಬಿರುವವರು ದುಷ್ಟರು. ಕೆಡುಕನ್ನು ಬಯಸುವುದು ಹಾಗೂ ಕೆಡುಕನ್ನು ಚಿಂತಿಸುವುದು. ಅಷ್ಟಲ್ಲದೇ ಪರಪತ್ನಿಯನ್ನು ಮೋಹಿಸುವ ವ್ಯಕ್ತಿಗಳು ಅಲ್ಲಿರಲಿಲ್ಲ. ಈಗಿನ ಸಾವಿರಾರು ವ್ಯಾಜ್ಯಗಳಿಗೆ ಮೂಲಕಾರಣ ಪರಸ್ತ್ರೀ ಮೋಹ. ಸಂಪತ್ತಿನ ಅತಿಯಾದ ಸಂಗ್ರಹ, ರಹಸ್ಯವಾದ ಶೇಖರಣೆ, ಅತಿದೇಹಾಭಿಮಾನ ಇವುಗಳ ಮೂಲ ಪರಸ್ತ್ರೀ ಮೋಹ. ಎಂದಾದರೊಂದು ದಿನ ಮಣ್ಣಾಗುವ ದೇಹಕ್ಕೆ ಎಷ್ಟು ಸ್ತ್ರೀಯರು ಸಿಕ್ಕಿದರೇನು- ಸಿಗದಿದ್ದರೇನು ಎಂಬ ವಿಚಾರ ಬಂದಾಗ ಆ ದೋಷ ಹೋದೀತು. ಅಯೋಧ್ಯೆಯಲ್ಲಿ ಅಂತಹ ಘಟನೆಗಳಿಗೆ ಆಸ್ಪದ ಇರಲಿಲ್ಲ. ಹಾಗಾಗಿ ತಮ್ಮ ಸಂಸಾರದಲ್ಲಿ ಸುಖವಾಗಿ ಮತ್ತೊಬ್ಬರ ರೂಪ ಲಾವಣ್ಯ ನೋಡಿ ಕರುಬದೇ ದೇವರದಯೆಯೆಂದು ಇರುತ್ತಿದ್ದರು.ಇದು ಸಾಮಾಜಿಕ ಐಕ್ಯತೆಗೂ ಶಾಂತಿಗೂ ಕಾರಣವಾಗಿತ್ತು._

*ಗುರೌ ಗುಣಗ್ರಹೀತಾಶ್ಚ* 

_ಇದು ತುಂಬಾ ಮಾದರಿ ಗುಣ. ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಮಾತು_ *ಯಾನ್ಯಸ್ಮಾಕಗ್ಂ ಸುಚರಿತಾನಿ ತಾನಿ ತ್ವಯೋಪಾಸ್ಯಾನಿ*
_ಎಂದು. ಗುರುಗಳು ಉಪದೇಶಿಸುವಾಗ ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಅನುಸರಿಸು. ಬೇರೆಯದ್ದಲ್ಲ ಎಂದು. ಅದನ್ನೇ ಇಲ್ಲೂ ಹೇಳಿದ್ದಾರೆ- ಗುರುಗಳ ಗುಣಗಳನ್ನು ಗ್ರಹಿಸಿ ಅನುಸರಿಸಬೇಕೇ ಹೊರತು ದೋಷಗಳನ್ನಲ್ಲ. ದೋಷಗಳು ಮನುಷ್ಯರಲ್ಲಿ ಇರುವುದು ಸಹಜ. ಹೇಗೆ ಒಳ್ಳೆಯ ಗಿಡಗಳ ಜೊತೆಗೆ ಕಳೆಗಳೂ ಬೆಳೆಯುವವೋ ಅದರಂತೆ ಮನುಷ್ಯನ ಸದ್ಗುಣಗಳ ಜೊತೆಗೆ ಕೆಲವು ದುರ್ಗುಣಗಳೂ ಬರುತ್ತವೆ. ಅದನ್ನು ನಾವು ಅಥವಾ ಶಿಷ್ಯರು ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸಬೇಕು. ಹಂಸ ಪಕ್ಷಿಯು ಹಾಲು ನೀರು ಮಿಶ್ರ ಮಾಡಿ ಕೊಟ್ಟರೂ ಹಾಲನ್ನು ಮಾತ್ರ ಸ್ವೀಕರಿಸುತ್ತದೆ. ಅದರಂತೆ ನಾವೂ ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಗುಣಗಳನ್ನು ಮಾತ್ರ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು._

*ಸಂಧಿವಿಗ್ರಹತತ್ವಜ್ಞಾಃ*

_ಮಂತ್ರಿಗಳು ಯಾವ ಸಮಯದಲ್ಲಿ ಸಂಧಿ ಯಾವ ಸಮಯದಲ್ಲಿ ವಿಗ್ರಹ ಎಂಬ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು._ *ಯದಾತ್ವೇವಾಲ್ಪಿಕಾ ಪೀಡಾ ತದಾ ಸಂಧಿಂ ಸಮಾಶ್ರಯೇತ್* _ಎಂದಿದ್ದಾನೆ ಮನು. ಶತ್ರುಗಳು ನಮಗಿಂತ ಪ್ರಬಲರಾಗಿದ್ದು ಪೀಡೆ ಖಚಿತವಾದಾಗ ಅವರಿಗೆ ಕನ್ಯೆ- ರಾಜ್ಯದ ಒಂದು ಭಾಗ- ಧನಕನಕ- ವಜ್ರ - ಅಶ್ವಗಳು- ಆನೆಗಳು ಮೊದಲಾದವನ್ನು ನೀಡಿ ಸಂಧಾನ ಮಾಡಿಕೊಳ್ಳುವುದು. ಇದನ್ನು ದಶರಥನ ಮಂತ್ರಿಗಳು ಚೆನ್ನಾಗಿ ಅರಿತಿದ್ದರು. ಹಾಗಾಗಿ ಅಯೋಧ್ಯೆಯಲ್ಲಿ ರಕ್ತಪಾತಕ್ಕೆ ಶತ್ರುಗಳ ವಶಕ್ಕೆ ಅವಕಾಶ ಇರಲಿಲ್ಲ._ *ಅಭ್ಯುಛ್ರಯೋ ಯದಾತ್ಮಾನಂ ತದಾ ಮನ್ಯೇತ ವಿಗ್ರಹಮ್* _ಎಂಬಂತೆ ತನ್ನ ಏಳಿಗೆಯನ್ನು ಬಯಸಿ ಅನುಕೂಲ ಸಮಯದಲ್ಲಿ ಹೆಚ್ಚಿನ ಹಾನಿಯಾಗದಂತೆ ಜಾಗೃತೆ ವಹಿಸಿ ಯುದ್ಧ ಮಾಡುವುದೂ ಅವರ ನೀತಿಯಾಗಿತ್ತು. ಕ್ಷತ್ರಿಯರ ಏಳಿಗೆಗೆ ಬೆಳವಣಿಗೆಗೆ ಇಂತಹ ಯುದ್ಧಗಳೂ ಪೂರಕ. ರಾಷ್ಟ್ರದ ಮೇಲಿನ ತನ್ನ ಹಿಡಿತ ಹಾಗೂ ಸನಾತನ ಧರ್ಮದ ಉಳಿವಿಗೆ ಜನರ ಮಾನಸಿಕ ನೆಮ್ಮದಿಗೆ ಯುದ್ಧಗಳು ಬಹಳ ಕೊಡುಗೆ ನೀಡುತ್ತಿದ್ದವು. ಶತ್ರು ದುಷ್ಟನಿದ್ದಾಗ ಕ್ರೂರಿಯಾಗಿದ್ದಾಗ ಅಹಿಂಸೆ ಎಂದು ಸುಮ್ಮನಿರದೇ ಯುದ್ಧ ಮಾಡುವ ಸಂದರ್ಭವನ್ನೂ ಅವರು ಸರಿಯಾಗಿ ಅರಿತಿದ್ದರು. ಈ ಕಾರಣಗಳೇ ಅಯೋಧ್ಯೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದ್ದವು._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩