ರಾಮಾಯಣ ೧೫೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೬🏝📖   


*ಕ್ರೋಧಾತ್ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ*

*ಪ್ರಾಪ್ತಕಾಲಂ ತು ತೇ ದಂಡಂ ಧಾರಯೇಯುಃ ಸುತೇಷ್ವಪಿ*

_ದಶರಥನ ಮಂತ್ರಿಮಂಡಲ ಹಾಗೂ ಋತ್ವಿಕ್ಮಂಡಲದ ಸದಸ್ಯರು ಎಂದಿಗೂ ಕೋಪದಿಂದಾಗಲೀ ಅಥವಾ ತಮ್ಮ ಆಸೆಯ ಈಡೇರಿಕೆಗೆ ಅಥವಾ ಧನದ ಅಪೇಕ್ಷೆಯಿಂದಲೋ ಸುಳ್ಳಾಡುತ್ತಿರಲಿಲ್ಲ. ಋತ ಎಂದರೆ ಮಾನಸಿಕ ಸತ್ಯ. ಅನೃತ ವು ಇದಕ್ಕೆ ವಿರುದ್ಧವಾದುದು.‌ಇವರು ಮಾನಸಿಕವಾಗಿ ಹಾಗೂ ಮಾತಿನಲ್ಲೂ ಎಂದಿಗೂ ಸತ್ಯದ ಸಂರಕ್ಷಣೆ ಮಾಡುತ್ತಿದ್ದರು. ಒಂದು ರಾಜ್ಯ ಸಮೃದ್ಧವಾಗಿರಲು ಇಂತಹ ಸತ್ಯದ ರಕ್ಷಣೆ ಅವಶ್ಯವಾಗಿರುತ್ತದೆ._

_ಈ ಮಂತ್ರಿಪರಿಷತ್ತು ಅಪರಾಧಿಗೆ ಶಿಕ್ಷೆ ವಿಧಿಸುವುದರಲ್ಲಿ ತುಂಬಾ ಪ್ರಾಮಾಣಿಕವಾಗಿತ್ತು. ಅಪರಾಧಿ ತಮ್ಮ ಮಗನೇ ಆಗಿದ್ದರೂ ಪಕ್ಷಪಾತ ಮಾಡದೇ ಶಿಕ್ಷಿಸುತ್ತಿದ್ದರು. ಅಧಿಕಾರದಲ್ಲಿ ಇರುವವರಿಗೆ ಅತ್ಯಂತ ಅವಶ್ಯವಾದ ಗುಣ ಇಂತಹ ನಿಷ್ಪಕ್ಷಪಾತ ನಡೆ. ದಶರಥನ ಮಂತ್ರಿಗಳು ಹಾಗಾಗಿಯೇ ಶ್ರೇಷ್ಠರೆನಿಸಿದ್ದರು._

*ಅಹಿತಂ ಚಾಪಿ ಪುರುಷಂ ನ ವಿಹಿಂಸ್ಯುರಪಿದೂಷಕಮ್*

_ಹೆಚ್ಚಿನ ಅಧಿಕಾರಿಗಳು ತಮಗೆ ಆಗದವರನ್ನು ಶತಾಯಗತಾಯ ಹಣಿಯಲು ಪ್ರಯತ್ನಿಸುತ್ತಾರೆ. ಆದರಿಲ್ಲಿ ಹಾಗಿರಲಿಲ್ಲ ಅಮಾತ್ಯರ ನಡೆ. ಒಬ್ಬನು ವೈಯಕ್ತಿಕವಾಗಿ ತನಗೆ ಶತ್ರುವಾಗಿದ್ದರೂ ನಿರ್ದೋಷಿಯಾಗಿದ್ದರೆ ಅವನನ್ನು ಎಂದಿಗೂ ಅಯೋಧ್ಯೆಯಲ್ಲಿ ಶಿಕ್ಷಿಸುವ ಪರಿಪಾಠ ಇರಲಿಲ್ಲ._

*ಸುತೀಕ್ಷ್ಣದಂಡಾಃ ಸಂಪ್ರೇಕ್ಷ್ಯ ಪುರುಷಸ್ಯ ಬಲಾಬಲಮ್*

_ಅಪರಾಧ ಯಾವುದಿದ್ದರೂ ಶಿಕ್ಷೆ ನೀಡುವಾಗ ವ್ಯಕ್ತಿಯ ವರ್ಣವನ್ನೋ‌ ಸ್ಥಾನಮಾನವನ್ನೋ ನೋಡದೇ ಬಲಾಬಲಗಳನ್ನು ಪರೀಕ್ಷಿಸಿ ನೀಡುತ್ತಿದ್ದರು. ಇಂತಹ ಶಿಕ್ಷೆ ಇವನು/ಳು ತಡೆದುಕೊಳ್ಳಲು ಸಮರ್ಥರೆನಿಸಿದರೆ ಮಾತ್ರ ಶಿಕ್ಷಿಸುತ್ತಿದ್ದರು. ಇಲ್ಲದಿದ್ದರೆ ಕಡಿಮೆ ಪ್ರಮಾಣದ ಶಿಕ್ಷೆ ನೀಡುತ್ತಿದ್ದರು. ಕಾನೂನು ಇದೆ ಅಥವಾ ತಪ್ಪು ದೊಡ್ಡದಿದೆಯೆಂದು ವ್ಯಕ್ತಿಯ ಸಹನಾಸಾಮರ್ಥ್ಯ ಮೀರಿ ಕೊಡುವ ಶಿಕ್ಷೆ ಎಂದಿಗೂ ನ್ಯಾಯಕ್ಕೆ ವಿರುದ್ಧವಾದುದು. ಹಾಗಾಗಿ ಶಿಕ್ಷೆ ನೀಡುವಾಗ ವಿಚಾರ ಮಾಡಬೇಕಾದುದು ಅವಶ್ಯ. ಬಡವನಿಗೆ ಹತ್ತು ಸಾವಿರ ದಂಡ ವಿಧಿಸುವುದು, ದೇಹದಲ್ಲಿ ಬಲವಿಲ್ಲದವನಿಗೆ ಸಾವಿರ ಛಡಿಏಟು ಶಿಕ್ಷೆ ವಿಧಿಸುವುದು ಕಾನೂನು ಸಮ್ಮತವೆನಿಸಿದರೂ ಮಾನವೀಯತೆಗೆ- ನ್ಯಾಯಪರತೆಗೆ ಸಮ್ಮತವಲ್ಲ. ಹಾಗಾಗಿ ಶಿಕ್ಷೆ ನೀಡುವುದೂ ಒಂದು ಕಲೆ._




ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩