ರಾಮಾಯಣ ೧೫೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೮🏝📖   

*ಅವೇಕ್ಷಮಾಣಶ್ಚಾರೇಣ ಪ್ರಜಾ ಧರ್ಮೇಣ ರಂಜಯನ್ | ಪ್ರಜಾನಾಂ ಪಾಲನಂ ಕುರ್ವನ್ನಧರ್ಮಂ ಪರಿವರ್ಜಯನ್ ||*

_ದಶರಥನ ಕಾಲದ ಆಡಳಿತ ಹೇಗಿತ್ತೆಂದರೆ ರಾಜನಿಷ್ಠರಾದ ಗೂಢಚಾರರಿಂದ ತನ್ನ ದೇಶ ಹಾಗೂ ವಿದೇಶಗಳಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯಗಳನ್ನೂ ರಾಜನು ಅರಿಯುತ್ತಿದ್ದನು. ಚಾರರು ಹೇಗಿರಬೇಕೆಂದು ಮನುವಿನ ಈ ಮಾತು ಹೇಳಿದೆ- *ವನೇ ವನಚರಾಃ ಕಾರ್ಯಾಃ ಶ್ರಮಣಾ ವಿಟಕಾದಯಃ | ಪರಪ್ರವೃತ್ತಿಜ್ಞಾನಾರ್ಥಂ ಶೀಘ್ರಾಶ್ಚಾರಪರಂಪರಾಃ||*_
_ಕಾಡಿನಲ್ಲಿ ಸಂಚರಿಸುವಾಗ ಕಾಡುಜನಗಳಂತೆ ವ್ಯವಹರಿಸಿ, ಬೇರೆಡೆ ಭಿಕ್ಷುಕರಂತೆ- ಪರಿವ್ರಾಜಕರಂತೆ- ನಟರಂತೆ ನಿಜರೂಪ ಮರೆಮಾಚಿ ಇನ್ನೊಬ್ಬರ ಅಭಿಪ್ರಾಯ ಹಾಗೂ ಕಾರ್ಯಗಳನ್ನು ಶೀಘ್ರವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರುವರಾಗಿರಬೇಕು. ಅಂತಹ ಚಾರರಿದ್ದರೆ ರಾಜರ ಕಾರ್ಯಗಳು ಸುಲಲಿತವಾಗಿ ಸಾಗುತ್ತವೆ. ಅಷ್ಟಲ್ಲದೆ ಪ್ರಜಾಪಾಲನೆಯನ್ನು ಧರ್ಮಮಾರ್ಗದಿಂದ ನಡೆಸುತ್ತಾ ಅಂದರೆ ಜೀವನ ನಡೆಸಲು ಹೊರೆಯಾಗದ ಕರಗಳನ್ನು, ಹಿಂಸೆ ಎನಿಸದ ಕಾನೂನನ್ನು, ಅಪರಾಧಿಗೆ ಮುಂದೆ ಅಪರಾಧ ಎಸಗಲು ಮನಸ್ಸು ತೊಡಗದ ಶಿಕ್ಷೆಯನ್ನು, ಬಡ- ದೀನ- ದುರ್ಬಲರ ವಿಷಯದಲ್ಲಿ ಉದಾರತೆಯನ್ನು ತೋರುವ ಆಡಳಿತವೇ ಧರ್ಮದ ಮಾರ್ಗದಲ್ಲಿ ನಡೆಯುವ ಆಡಳಿತ. ಅಂತಹ ಮಾದರಿ ಆಡಳಿತ ದಶರಥನ ರಾಜ್ಯದಲ್ಲಿತ್ತು. ಇನ್ನೊಂದು ಮುಖ್ಯ ಅಂಶ ಪ್ರಜಾಪಾಲನೆಯಲ್ಲಿ ಅಧರ್ಮವನ್ನು ಎಳ್ಳಷ್ಟೂ ಜಾರಿಗೆ ತರದೇ ಪೂರ್ಣ ವರ್ಜಿಸಿ ಉತ್ತಮ ಆಡಳಿತ ಕೊಡುತ್ತಿದ್ದನು ರಾಮಜನಕ. ಸಾಮಾನ್ಯವಾಗಿ ಜನರ ಅಭಿಪ್ರಾಯ ಹೇಗಿರುತ್ತದೆ ಎಂದರೆ ಅಷ್ಟೆಲ್ಲ ಒಳ್ಳೆಯ ಕೆಲಸ ಮಾಡುವವನು ಕೆಲವು ಅಧರ್ಮ ಮಾಡಿದರೂ ಕ್ಷಮ್ಯ ಎಂಬ ರೀತಿಯಲ್ಲಿ ಇರುತ್ತದೆ. ಆದರೆ ಒಂದು ಸುಳ್ಳು ನೂರು ಸುಳ್ಳುಗಳಿಗೆ ದಾರಿ ಮಾಡಿಕೊಡುವಂತೆ ರಾಜನ ಒಂದು ಧರ್ಮ ಹಿಂಬಾಲಕರ ಹಾಗೂ ಪ್ರಜೆಗಳ ನೂರು ಅಧರ್ಮಕ್ಕೆ ಕಾರಣವಾದೀತು. ರಾಜನು ಅನ್ಯಾಯದ ಒಂದು ರುಪಾಯಿ ಬಯಸಿದರೆ ಪ್ರಜೆಗಳು ಹತ್ತಾರು ಪೈಸೆ ಬಯಸುತ್ತಾರೆ. ಇದು ಭ್ರಷ್ಟಾಚಾರಕ್ಕೆ ಸ್ವಜನಪಕ್ಷಪಾತಕ್ಕೆ ಕಾರಣವಾಗುತ್ತದೆ. ಇಕ್ಷ್ವಾಕು ವಂಶದ ಅರಸರಲ್ಲಿ ಇಂತಹ ಯಾವ ಅನೀತಿಗೂ ಕಿಂಚಿತ್ತೂ ಆಸ್ಪದ ಇರಲಿಲ್ಲ._

*ನಾಧ್ಯಗಚ್ಛದ್ವಿಶಿಷ್ಟಂ ವಾ ತುಲ್ಯಂ ವಾ ಶತ್ರುಮಾತ್ಮನಃ |*

_ದಶರಥನನ್ನು ಪರಾಕ್ರಮದಲ್ಲಿ ಮೀರಿಸುವ ಅಥವಾ ಅವನಿಗೆ ಸಮಾನಬಲವುಳ್ಳ ಶತ್ರುಗಳಾರೂ ಆ ಕಾಲದಲ್ಲಿ ಇರಲಿಲ್ಲ. ಬಹುಶಃ ರಾವಣ ಮೊದಲಾದವರು ದೇವವರ ದರ್ಪಿತರು. ಸ್ವಾಭಾವಿಕವಾಗಿ ಬಲಿಷ್ಠರು ದಶರಥನನ್ನು ಮೀರಿಸುವರು ಇರಲಿಲ್ಲ ಎಂಬುದು ಮುನಿಗಳ ಆಶಯ ಇರಬಹುದು. ಮೀರುವ ಬಲವಿದ್ದರೆ ಅವರ ಕೆಲವು ಮಾತುಗಳನ್ನಾದರೂ ನಮಗೆ ತಥ್ಯವಾಗದಿದ್ದರೂ ಒಪ್ಪಬೇಕಾಗುತ್ತದೆ. ಸಮಾನರಾಗಿದ್ದರೂ ಬಲಿಷ್ಠರ ಜೊತೆ ಸೇರಿ ಹಗೆ ಸಾಧಿಸುವ ಅಥವಾ ನಮ್ಮನ್ನು ಮೀರಿಸುವ ಹಂಚಿಕೆಯಲ್ಲಿ ತೊಡಗುವ ಅಥವಾ ನಮ್ಮ ಆದೇಶ ಧಿಕ್ಕರಿಸುವ ಧೈರ್ಯ ತೋರುತ್ತದೆ. ಹಾಗಾಗಿ ಬಲ ಎನ್ನುವುದು ರಾಜಕೀಯದಲ್ಲಿ ಸರ್ವದಾ ಅವಶ್ಯಕ ಸಾಧನ. ಅಲಿಪ್ತ ನೀತಿ ಅಥವಾ ಶರಣಾಗಿಯ ವಿಚಾರಗಳು ಪ್ರಜೆಗಳನ್ನು ಜೀತದಾಳುಗಳನ್ನಾಗಿಸುವುದೇ ಹೊರತು ಯಾವ ಬಗೆಯಲ್ಲೂ ಉತ್ತಮ ಬದುಕನ್ನು ಪ್ರಜೆಗಳಿಗೆ ತೋರಲಾರದು._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩