ಪದಶಕ್ತಿ ೬

📝📕ಪದ ಶಕ್ತಿ ೬📕📝

*ಅಸುರ*

_ದೇವತೆಗಳನ್ನು ಬಿಸಾಕುತ್ತಾರೆ ಎಂಬ ಅರ್ಥದಲ್ಲಿ ಸುರವಿರೋಧಿಗಳು. ದೇವ ವಿರೊಧಿಗಳು ಅಥವಾ ಯಾವಾಗಲೂ ಅವರೊಡನೆ ಕಾದಾಡುವರು ಎಂಬುದೇ ತಾತ್ಪರ್ಯ. ಪೂರ್ವದೇವತೆಗಳಾದರೂ ತಮ್ಮ ಹೀನಕೃತ್ಯದಿಂದ ಪದಚ್ಯುತರಾದವರೇ ಅಸುರರು. ಈ ಹೆಸರು ಸೂರ್ಯನಿಗೂ ಅನ್ವಯಿಸುತ್ತದೆ. ಅರ್ಥ ಮಾತ್ರ ಬೇರೆ ಲೋಕವನ್ನು ಬೆಳಗುವನು ಎಂಬ ಅರ್ಥದಲ್ಲಿ ಸೂರ್ಯನೂ ಅಸುರನೇ ಸರಿ. ರಾಕ್ಷಸರು ಅಸು ಎಂದರೆ ದೇಹ ಅಥವಾ ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯ. ಅವುಗಳಲ್ಲೇ ರಮಿಸುವರು, ಹಾಗಾಗಿಯೇ ಅಸುರರು. ಆತ್ಮನ ಏಳಿಗೆ ಪರಮಾತ್ಮನ ಚಿಂತನೆ ಅದ್ಯಾವುದೂ ಅವರಿಗೆ ಬೇಕಾಗಿಲ್ಲ. ದಶ ಇಂದ್ರಿಯಗಳು ಕೇಳುವುದನ್ನು ಸಮಯಕ್ಕೆ ಸರಿಯಾಗಿ ಪೂರೈಸಿ ಸುಖ ಪಡುವುದು ಅಸುರವೃತ್ತಿ. ಅದಕ್ಕಾಗಿ ಅವರು ಹಿಡಿದದ್ದೇ ದಾರಿ,ನಡೆದದ್ದೇ ಧರ್ಮ, ಮಾಡಿದ್ದೇ ಆಚಾರ. ಇಂತಹ ಪ್ರವೃತ್ತಿ ನಮ್ಮಲ್ಲಿದ್ದರೂ ನಾವು ಅಸುರರೇ ಸರಿ._

ರಾಮಾಯಣದಲ್ಲಿ ಅಸುರ ಶಬ್ದದ ಉಲ್ಲೇಖ ಇದೆ.
*सुराः प्रतिग्रहाद्देवाः सुरा इत्यभिविश्रुताः ।  अप्रतिग्रहणात्तस्य दैतेयाश्चासुराः स्मृताः*

_ಬ್ರಹ್ಮವಿದ್ಯೆಯನ್ನು ಅಥವಾ ಆತ್ಮೋನ್ನತಿಯ ಮಾರ್ಗವನ್ನು ಸ್ವೀಕರಿಸಿದ ಕಾರಣ ದೇವತೆಗಳು ಸುರರೆನಿಸಿದರು‌. ತ್ಯಜಿಸಿದ ಕಾರಣ ದಿತಿಯ ಮಕ್ಕಳು ಅಸುರರೆನಿಸಿದರು_

ಕನ್ನಡ ಸಾಹಿತ್ಯದಲ್ಲೂ ಈ ಶಬ್ದ ಸಾಕಷ್ಟು ಬಳಕೆಯಾಗಿದೆ.
*ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಾಪಾಶವನು ಹರಿದ
ಪರಮತತ್ತ್ವಜ್ಞಾನಿಯವೋಲೀ
ಧರೆಯ ನರಪಾಲಕರು ಹಗೆ
ಹರಿದು ಹೋಗುಲಸಾಧ್ಯವಹುದೇನೆಂದನಾ ಶಕುನಿ (ಆದಿ ಪರ್ವ, ೮ ಸಂಧಿ, ೪೭ ಪದ್ಯ)

_ಕುಮಾರವ್ಯಾಸನ ಈ ಪದ್ಯದಲ್ಲಿ ರಾಜರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುತ್ತಾ ಅಸುರರ ಭಯವಿಲ್ಲದ ಸುರರು ಎಂದು ಸಂದರ್ಭೋಚಿತವಾಗಿ ವರ್ಣಿಸಿದ್ದಾನೆ._

http://shreenidhiabhyankar.blogspot.in/

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩