ಸ್ವಪ್ನವಾಸವದತ್ತ 2
🌼 ಸ್ವಪ್ನವಾಸವದತ್ತ ಎಸಳು-೧೨🌼
*क: कं शक्तुो रक्षितुं मृत्युकाले रज्जुच्छेदे के घटं धारयन्ति । एवं लोकस्तुल्यधर्मो वनानां काले काले छिद्यते रुह्यते च ।।*
_ಉದಯನನ್ನು ಸಮಾಧಾನಿಸುತ್ತಾ ಮಹಾಸೇನನ ಪ್ರತಿನಿಧಿ ನುಡಿಯುವ ಮಾತು. ವಾಸವದತ್ತೆ ನಾಶಳಾಗಿ ಹೋದಳೆಂದು ದುಃಖಿಸದಿರು. ವಿಧಿಯ ವಿಲಾಸದ ಮುಂದೆ ನಾವೆಷ್ಟು ಪ್ರಬಲರು. ಏಕೆಂದರೆ ಮರಣ ಸಮೀಪಿಸಿದಾಗ ಯಾರು ಯಾರನ್ನು ತಾನೇ ರಕ್ಷಿಸಬಲ್ಲರು. ಮೃತ್ಯು ಸಮೀಪಿಸಿದ ಮೇಲೆ ಎಷ್ಟು ಅಧಿಕಾರ, ಶ್ರೀಮಂತಿಕೆ, ಗೌರವ ಇದ್ದರೂ ಮರಣವನ್ನು ತಪ್ಪಿಸಲಾಗದು. ಕವಿ ಒಂದು ದೃಷ್ಟಾಂತ ಕೊಡುತ್ತಿದ್ದಾನೆ. ಬಾವಿಯಿಂದ ನೀರು ಸೇದುವಾಗ ಯಾರೂ ಕೂಡ ಕೊಡಪಾನ ಬೀಳಲೆಂದು ಪಾಶ ಹಾಕಲಾರರು. ಸಾಧ್ಯವಾದಷ್ಟು ಗಟ್ಟಿ ಗಂಟುಹಾಕಿಯೇ ಇಳಿಬಿಡುತ್ತಾರೆ. ಒಂದೊಮ್ಮೆ ನೀರು ಎಳೆಯುತ್ತಿರುವಾಗ ನೀರಿನ ಭಾರಕ್ಕೆ ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದರೆ ಅದನ್ನು ಬೀಳದಂತೆ ತಡೆಯಲು ಯಾರಿಗೆ ತಾನೇ ಸಾಧ್ಯವಿದೆ. ಕವಿಯ ದೃಷ್ಟಾಂತದ ಆಯ್ಕೆ ತುಂಬಾ ಸಮಂಜಸವಾಗಿದೆ. ಎಷ್ಟು ಬಲಿಷ್ಠನಾದರೂ ಸಾಹಸಿಗನಾಗಿದ್ದರೂ ಬೀಳುತ್ತಿರುವ ಕೊಡಪಾನವನ್ನು ಅದೇ ಕ್ಷಣದಲ್ಲಿ ಎತ್ತಲು ಪ್ರಯತ್ನ ನಡೆಸಿದರೂ ಅದು ವ್ಯರ್ಥವಾಗುತ್ತದೆ. ಅದು ಕಣ್ರೆಪ್ಪೆ ಮುಚ್ಚುವಷ್ಟರಲ್ಲಿ ನಡೆಯುವ ಕ್ರಿಯೆ. ಲೋಕದಲ್ಲಿ ಹುಟ್ಟು ಸಾವುಗಳು ಇದರಂತೇ ಇವೆ. ಕಾಡಿನ ಮರಗಿಡಗಳು ಹೇಗೋ ಹುಟ್ಟುತ್ತವೆ, ಹೇಗೋ ಸಾಯುವವು. ಪ್ರಕೃತಿಯಲ್ಲಿ ನಡೆಯುವ ಸ್ವಾಭಾವಿಕ ಬದಲಾವಣೆ ಅದು. ಜೀವಿಗಳ ಜನನ ಹಾಗೂ ಮರಣಗಳು ಕೂಡ ಹಾಗೆಯೇ.ಬಯಸಿದಾಗ ಜನಿಸಲಾರರು ಅಥವಾ ಬಯಸದೇ ಇದ್ದಾಗ ಮರಣ ಹೊಂದದೇ ಇರಲಾರರು. ವಿಧಿಯ ವಿಲಾಸ ಎಂದರೆ ಇದೇ ಅಲ್ಲವೇ! ನೀನು ಕೂಡ ವಾಸವದತ್ತೆಯನ್ನು ರಕ್ಷಿಸಲಾರದೇ ಹೋದೆನೆಂದು ದುಃಖಿಸದಿರು. ಅವಳ ಬದುಕು ಅಥವಾ ಸಾವು ನಿನ್ನ ನಿಯಂತ್ರಣದಲ್ಲಿ ಇರುವಂತಹದಲ್ಲ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ