ಪದಶಕ್ತಿ ೯

📝📕ಪದ ಶಕ್ತಿ ೯📕📝

*ವೈಕುಂಠ*

_ಭಗವಂತನ ಆವಾಸ ಸ್ಥಾನ, ಭಕ್ತರ ಗಮ್ಯ ಸ್ಥಾನ ಎರಡೂ ವೈಕುಂಠವೇ ಆಗಿದೆ. ವೈಕುಂಠ ಶಬ್ದಕ್ಕೆ ವಿಷ್ಣು ಎಂಬ ಅರ್ಥವೂ ಇದೆ. ಯಾವುದು ನಾಶರಹಿತವಾದ ಲೋಕವೋ ಅದು ವೈಕುಂಠ. ಭಗವಂತನೂ ನಾಶರಹಿತನೇ ಆದುದರಿಂದ ಅವನೂ ವೈಕುಂಠನೇ. ಜ್ಞಾನಾಶ್ರಯ ಎಂಬ ಅರ್ಥದಲ್ಲೂ ಭಗವಂತನು ವೈಕುಂಠ. ಬಗೆಬಗೆಯ ಮಾಯೆಗಳು ಯಾರವೋ ಅವನೇ ವೈಕುಂಠ.ವಿಕುಂಠ ಅಂದರೆ ಪ್ರಕೃತಿ. ಆ ಪ್ರಕೃತಿಯಲ್ಲಿ ಗುಣಗಳಿಗೆ ಆಶ್ರಿತನಾಗಿ ಪ್ರಾದುರ್ಭವಿಸಿದವನು ಭಗವಾನ್ ನಾರಾಯಣ, ಹಾಗಾಗಿ ಅವನು ವೈಕುಂಠ. ಇನ್ನೂ ಒಂದು ಅರ್ಥ ನೋಡುವುದಾದರೆ ವಿವಿಧ ಗುಣಗಳನ್ನು ಒಂದು ಮಾಡಿ ಪಂಚಭೂತಗಳನ್ನೂ ಬ್ರಹ್ಮಾದಿ ದೇವರನ್ನೂ ಸೃಜಿಸಿದ ಕಾರಣ ಅವನು ವೈಕುಂಠ. ವಿಷ್ಣುವಿನ ವಾಸಸ್ಥಾನವೂ ಅವನ ಹೆಸರೂ ಆಗಿರುವ ಅಪರೂಪದ ಪದವಿದು. ಹೀಗೆ ಮನೆಯ ಹೆಸರೂ ವ್ಯಕ್ತಿಯ ಹೆಸರೂ ಒಂದೇ ಆಗಿರುವ ದೃಷ್ಟಾಂತ ಬೇರೆ ಇದೆಯೋ ಇಲ್ಲವೋ!_

ಕನ್ನಡ-ಸಂಸ್ಕೃತ ಸಾಹಿತ್ಯದಲ್ಲಿ ಈ ಪದ ಬಳಕೆಯಾಗಿದೆ.

*ते साधुकृतसर्व्वार्था ज्ञात्वात्यन्तिकमात्मनः । मनसा धारयमासुर्वैकुण्ठचरणाम्बुजम्*
_ಆ ಋಷಿಗಳು ಆತ್ಮ ಸ್ವರೂಪನಾದ ಭಗವಂತನನ್ನು ಧ್ಯಾನಿಸಿ ತಮ್ಮ ಹೃದಯದಲ್ಲಿ ಅವನ ರೂಪವನ್ನು ಚಿಂತಿಸುತ್ತಾ ತಪಗೈದರು ಎಂಬ ಶ್ಲೋಕವಿದು ಭಾಗವತ ಪುರಾಣದಲ್ಲಿ ಇದೆ._

*ಸಾಕ್ಷಾನ್ನಾರಾಯಣನಿಪ್ಪ ವೈಕುಂಠ ಪೊಕ್ಕು ಬದುಕುವುದೇ ಮೋಕ್ಷ*
_ಇದು ವಾದಿರಾಜರ ವೈಕುಂಠ ವರ್ಣನೆಯ ಒಂದು ತುಣುಕು. ಇಲ್ಲಿ ಸಾಧಾರಣ ಕನ್ನಡದ ಬಳಕೆಯಂತೆ ವೈಕುಂಠ ಲೋಕದ ಉಲ್ಲೇಖ ಇದೆ. ಯೌಗಿಕವಾಗಿ ವೈಕುಂಠ ಶಬ್ದ ನಾರಾಯಣ ಎಂಬ ಅರ್ಥ ಹೊಂದಿದ್ದರೂ ರೂಢಿಯಲ್ಲಿ ನಾರಾಯಣನ ಲೋಕವೆಂದೇ ಬಳಕೆಯಲ್ಲಿದೆ. ನಾವೂ ವೈಕುಂಠನನ್ನು ಧ್ಯಾನಿಸಿ ವೈಕುಂಠ ಹೊಂದೋಣ._

http://shreenidhiabhyankar.blogspot.in/

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩