ಪದಸಂಪದ ೨೩

📝📕ಪದ ಸಂಪದ ೧೩📕📝

*ಅಧೋಕ್ಷಜ*

_ವಿಷ್ಣುವಿನ ಪರ್ಯಾಯ. ಅಕ್ಷಗಳೆಂದರೆ ಇಂದ್ರಿಯಗಳು. ಇಂದ್ರಿಯ ಜ್ಞಾನವು ಯಾರ ದಯೆಯಿಲ್ಲದೆ ಬರಲಾರದೋ ಅವನೇ ಅಧೋಕ್ಷಜ. ಕಣ್ಣು ತನ್ನೆದುರಿಗಿನ ರೂಪವನ್ನು, ಕಿವಿ ಬಾಹ್ಯದ ಶಬ್ದವನ್ನು, ರಸನವು ವಸ್ತುವಿನಲ್ಲಿನ ರಸವನ್ನು, ಚರ್ಮವು ಸ್ಪರ್ಶವನ್ನು, ಮೂಗು ವಾಯುವಿನಲ್ಲಿರುವ ಗಂಧವನ್ನು ಗ್ರಹಿಸಲು ಅವನ ದಯೆ ಕಾರಣ. ಅದಿಲ್ಲದಿದ್ದರೆ ಕಿವುಡ-ಕುರುಡ ಮೊದಲಾದ ಅವಸ್ಥೆಗಳು. ಇನ್ನೊಂದು ಅರ್ಥ ನೋಡುವುದಾದರೆ ಜಿತೇಂದ್ರಿಯರಿಗೆ ಗೋಚರಿಸುವ ದೇವದೇವನವನು. ಇಂದ್ರಿಯಗಳು ಕೇಳಿದ್ದೆಲ್ಲವನ್ನು ಕೊಡದೆ ಬದುಕಲು ಅಗತ್ಯವಾದದ್ದನ್ನು ಮಾತ್ರ ಕೊಡುತ್ತಾ ಸಾಧನೆಯ ಪಥದಲ್ಲಿ ನಡೆಯುವವನಿಗೆ ಅಧೋಕ್ಷಜನ  ಸಾಕ್ಷಾತ್ಕಾರವಾಗುವುದು. ಕೇವಲ ಇಂದ್ರಿಯಗಳಿಗೆ ಸಿಗದವನು ಅಧೋಕ್ಷಜನು. ಇಂದ್ರಿಯಾತೀತನು ಅಥವಾ ಮನಕ್ಕೆ ಗೋಚರಿಸುವವನು ಇತ್ಯಾದಿ. ಕ್ಷಯ ಅಂದರೆ ನಾಶ ಇಲ್ಲದವನು ಅಥವಾ ತನ್ನ ಕಕ್ಷೆಯಿಂದ ಜಾರದವನು ಅಧೋಕ್ಷಜ. ವಸ್ತುವಿನಲ್ಲಿ ಪ್ರವೃತ್ತಿ ಮಾಡುವ ಇಂದ್ರಿಯಗಳು ಆ ವಸ್ತುವಿನ ರೂಪ ಪಡೆಯುವಂತೆ ಸಹಕರಿಸುವ ದೇವನು. ಉದಾಹರಣೆಗೆ ಎದುರಿಗಿನ ವಸ್ತುವನ್ನು ನೋಡಿ ಬೆಲ್ಲವೆಂದೋ ಹಾಗಲಕಾಯಿಯೆಂದೋ ಮನವು ತಿಳಿಯುವ ಶಕ್ತಿ ಅವನ ದಯದಿಂದ.ಹೀಗೆ ಅಧೋಕ್ಷಜನನ್ನು ನೆನೆದರೆ ನಮ್ಮ ಇಂದ್ರಿಯ ಪ್ರವೃತ್ತಿ ಸುಲಲಿತ‌. ಇಲ್ಲದಿರೆ ಅಯೋಮಯ._

ಸಾಹಿತ್ಯದಲ್ಲಿ ಅವನ ಉಲ್ಲೇಖ ನೋಡೋಣ.

*मध्ये वैराज- रूपेण ततोऽधोक्षजैष्यते*
ವಿಷ್ಣು ಸಹಸ್ರನಾಮ ಭಾಷ್ಯದಲ್ಲಿ ವೈರಾಜ ಎಂಬ ರೂಪದಲ್ಲಿ ಸೃಷ್ಟಿಯ ಆದಿಯಲ್ಲಿ ನೆಲೆಸಿರುವನು, ಅನಂತರ ಭಗವಂತನ ಅಧೋಕ್ಷಜ ರೂಪವಿದೆ ಎಂದು ತಿಳಿಸಿದ್ದಾರೆ.

*ಕರಿವರನು ತವ | ಚರಣ ಸರಸಿಜ | ನಂಬಿ ಮೊರೆಯಿಡಲು |ಕರದ ಚಕ್ರದಿ | ತರಿದು ನಕ್ರನ | ಬಿಸುಟ ದೊರೆ ಪುರುಷೋತ್ತಮ
ದರ ಚಕ್ರಧರ | ಅಧೋಕ್ಷಜ18*

_ಗುರು ಗೋವಿಂದ ವಿಠಲದಾಸರ ಈ ವಿಷ್ಣು ಕೀರ್ತನೆಯಲ್ಲಿ ಅಧೋಕ್ಷಜನನ್ನು ಸ್ತುತಿಸಿದ್ದಾರೆ. ಗಜೇಂದ್ರನನ್ನು ಕಾಪಾಡಲು ಚಕ್ರಧರಿಸಿದ ಅಧೋಕ್ಷಜನೇ ಎಂದು. ನಾವೂ ನೆನೆದು ದುಃಖಗಳೆಂಬ ಮೊಸಳೆಗಳಿಂದ ಪಾರಾಗೋಣ._

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩