ಪದಶಕ್ತಿ ೭
📝📕ಪದ ಶಕ್ತಿ ೭📕📝
*ಬುದ್ಧ*
_ಆಧುನಿಕ ಜಗತ್ತಿನಲ್ಲಿ ಅಥವಾ ನಮ್ಮ ಧರ್ಮದ ಮೂಲಭೂತ ತತ್ವಗಳ ಪರಿಚಯ ಇಲ್ಲದ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದರೆ ಬುದ್ಧ. ದಿನವೂ ಮಾಂಸಾಹಾರ ಮಾಡುವವರಿರಲಿ,ಭ್ರಷ್ಟಾಚಾರ ಅನಾಚಾರಗಳು ಮೈಗೂಡಿಸಿಕೊಂಡವರಿರಲಿ ಎಲ್ಲರ ಬಾಯಿಗೆ ಸುಲಭವಾಗಿ ಸಿಗುವ ಹೆಸರು ಬುದ್ಧ. ಹಾಗಾದರೆ ಬುದ್ಧ ಶಬ್ದದ ಅರ್ಥ ನೋಡುವುದಾದರೆ ಯಾರು ಬೋಧಿಸುವನೋ ಅವನೇ ಬುದ್ಧ. ಉಪನಿಷತ್ತಿನ ಸಾರವಾದ ಮಾನವೀಯ ಮೌಲ್ಯಗಳನ್ನು ತನ್ನ ಬೋಧನೆಯ ಮೂಲಕ ಎತ್ತಿ ಹಿಡಿದ ವ್ಯಕ್ತಿ, ಜಗತ್ತಿಗೆ ಅದನ್ನು ಬೋಧಿಸಿ ಬುದ್ಧನೆನಿಸಿದನು. ಇನ್ನೊಂದು ಅರ್ಥ ನೋಡುವುದಾದರೆ ಪ್ರಶಸ್ತವಾದ ಅಥವಾ ಸರಿಯಾದ ತಿಳುವಳಿಕೆ- ಬುದ್ಧಿ ಯಾರಿಗಿದೆಯೋ ಅವನೇ ಬುದ್ಧ. ಬುಧ ಎಂದರೆ ಜ್ಞಾನಿ ಎಂಬುದು ಸಾಮಾನ್ಯ. ಇವನು ಆ ನಿಟ್ಟಿನಲ್ಲೂ ಜ್ಞಾನಪೂರ್ಣನೂ ಹೌದು. ಬುದ್ಧನ ಮುಖ್ಯ ತತ್ವಗಳು- ಅಹಿಂಸೆ, ಅಸ್ತೇಯ, ಅಪರಿಗ್ರಹ ಮೊದಲಾದವು. ಭಾಗವತದಲ್ಲಿ ಗಯಾಪ್ರದೇಶದಲ್ಲಿ ಅಜಿನ ಅಥವಾ ಅಂಜನನ ಮಗನಾಗಿ ಇವನು ಹುಟ್ಟುವನೆಂಬ ಉಲ್ಲೇಖವಿದೆ. ಹದಿನೈದು ಬುದ್ದರ ವರ್ಣನೆ ಸಾಹಿತ್ಯದಲ್ಲಿ ಇದೆ.ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಬುದ್ಧನ ವರ್ಣನೆ ಸಾಕಷ್ಟಿದೆ. ಸಂಸ್ಕೃತದ ಲಭ್ಯವಿರುವ ಅರ್ವಾಚೀನ ಕಾವ್ಯಗಳಲ್ಲಿ ಅಶ್ವಘೋಷನ ಬುದ್ಧಚರಿತವೂ ಮೊದಲನೆಯದು. ಅವನೇ ವ್ಯಾಸಾದಿಗಳ ನಂತರದ ಕವಿ._
*ततः कलौ संप्रवृत्ते संमोहाय सुरद्विषाम् । बुद्धो नाम्नाञ्जनमुतः कीकटेषु भविष्यति ॥ “ इति श्रीभागवते १ स्कन्धे ३ अध्यायः*
_ಕಲಿಯುಗದಲ್ಲಿ ಅವನ ಜನ್ಮವಾಗುವುದೆಂಬ ಈ ಮಾತು ರಾಕ್ಷಸರ ಮೋಹಕ್ಕಾಗಿ ಅವನ ಜನ್ಮವೆಂದಿದೆ.ಅವನು ಶುದ್ಧೋದನನ ಮಗನೆಂಬ ವಿಷಯದಲ್ಲಿ ಒಂದಷ್ಟು ಅಭಿಪ್ರಾಯ ಭೇದಗಳಿವೆ._
*ಬುದ್ಧ ಮಹಾಮೌನದ ಬಯಲಾದ
ಎಲ್ಲ ಅರಿವಿನಾಚೆಯ ನಿರ್ವಾಣವಾದ
ಈಗ ಆನಂದ ಒಂಟಿ, ಏಕಾಂಗಿ*
ಅನುಪಮಾ ಅವರ ಕವಿತೆಯೊಂದರಲ್ಲಿ ಬುದ್ಧನು ಅಡಗಿದ್ದಾನೆ. ಬುದ್ಧನ ಲಕ್ಷಾಂತರ ಬೋಧನೆಗಳಲ್ಲಿ ಒಂದಾದರೂ ಅಳವಡಿಸಿಕೊಂಡು ಅವನ ಹೆಸರು ಹೇಳುವ ಅರ್ಹತೆ ಪಡೆಯೋಣ ಅಥವಾ ಅವನ ಹೆಸರಲ್ಲಿ ಜನಪ್ರಿಯರಾಗೋಣ.
http://shreenidhiabhyankar.blogspot.in/
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ