ಪದಶಕ್ತಿ ೮

📝📕ಪದ ಶಕ್ತಿ ೮📕📝

*ನಾರಾಯಣ*

_ಹೆಸರು ನೋಡಿದ ಕೂಡಲೇ ವಿಷ್ಣು ಎಂಬುದು ಪ್ರಸಿದ್ಧ. ವಿಷ್ಣುವಿಗಾದರೂ ಹೇಗೆ ಈ ಹೆಸರು ಅನ್ವಯ ಆಗುವುದೆಂದು ನೋಡುವುದಾದರೆ ಜಗದ ಸೃಷ್ಟಿಗೆ ಕಾರಣವಾದ ನೀರಿನಲ್ಲಿ ಯಾರು ಮೊದಲು ವಾಸವಾಗಿದ್ದನೋ ಅವನೇ ನಾರಾಯಣ. ನಾರ ಎಂದರೆ ನೀರು. ಅದೇ ಮನೆ ಕ್ಷೀರಸಮುದ್ರ ಶಾಯಿಯಾಗಿ. ಅಯನ ಶಬ್ದಕ್ಕೆ ಹತ್ತಕ್ಕೂ ಹೆಚ್ಚು ಅರ್ಥಗಳಿರುವ ಕಾರಣ ಈ ಪದಕ್ಕೆ ಅನೇಕ ಅರ್ಥಗಳು ಹೊಂದಿಕೆಯಾಗುತ್ತವೆ.  ಜೀವಿಗಳಿಗೆ ಅಶ್ರಯಭೂತನೆಂದೂ, ಜಗತ್ತನ್ನು ಪಾಲಿಸುವವನೆಂದೂ,   ಜಗದ ಸೃಷ್ಟಿಗೆ ಮೂಲಕಾರಣನೆಂದೂ ಹೀಗೆ ಅನೇಕ ಅರ್ಥಗಳಿವೆ. ಸಾಹಿತ್ಯದಲ್ಲಿ ಇದು ಧಾರಾಳವಾಗಿ ಬಳಕೆಯಾದ ಪದ._

ಗಿರಿಗಳಲಿ ಹೇಮಾದ್ರಿ ಘನ ಸಾ
ಗರದೊಳಗೆ ದುಗ್ಧಾಬ್ಧಿ ದೇವಾ
ಸುರನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩ ಪದ್ಯ)

_ಕುಮಾರವ್ಯಾಸನ ಭಾರತದಲ್ಲಿ ಕೃಷ್ಣನಿಗೆ ಅಗ್ರಪೂಜೆ ಏತಕೆ ಎಂಬ ಶಿಶುಪಾಲನ ಪ್ರಶ್ನೆಯ ಸಂದರ್ಭದಲ್ಲಿ ಉತ್ತರರೂಪವಾಗಿ ಈ ಪದ್ಯ ಬಂದಿದೆ. ಪರ್ವತಗಳಲ್ಲಿ ಹಿಮಾಲಯ ಶ್ರೇಷ್ಠ, ಸಾಗರಗಳಲ್ಲಿ ಕ್ಷೀರಸಾಗರ ಶ್ರೇಷ್ಠ, ಅಂತೆಯೇ ದೇವ ಮಾನವಾದಿ ಸಕಲ ಜೀವಿಗಳಲ್ಲಿ ನಾರಾಯಣನೇ ಮಿಗಿಲೆಂದು ಭೀಷ್ಮನಾಡುವ ಮಾತು._

*नारायणाय परिपूर्णगुणार्णवाय*
ಈ ಧ್ಯಾನ ಶ್ಲೋಕದಲ್ಲಿ ಗುಣಗಳಿಂದ ತುಂಬಿದ ಸಮುದ್ರದಂತೆ ಎಂದು ವರ್ಣಿಸಿದ್ದಾರೆ. ನಾರಾಯಣನನ್ನು ನೆನೆಯುತ್ತಾ ಪಾಪಸಮುದ್ರದಿಂದ ಪಾರಾಗೋಣ.

http://shreenidhiabhyankar.blogspot.in/

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩