ಚಾರುದತ್ತ 1
🌞ಚಾರುದತ್ತ ಬೆಳಕು -೧🌚
*सुखं हि दु:खान्यनुभूय शोभते यथान्धकारादिव दीपदर्शनम् । सुखात्तु यो याति दशां दरिद्रतां स्थित: शरीरेण मृत: स जीवति ।।*
_ಚಾರುದತ್ತದ ಒಂದು ಚಂದದ ಶ್ಲೋಕ. ಭಾಸನ ನಾಟಕಗಳಲ್ಲಿ ಪೌರಾಣಿಕ ಕಥೆಯಲ್ಲದ ಒಂದು ಕಾಲ್ಪನಿಕ ಕಥೆಯ ಸುಂದರ ನಾಟಕ. ಕಥೆಯ ಪರಿಚಯ ಮುಂದೊಮ್ಮೆ ಮಾಡಿಕೊಡುವೆ. ಇಂದಿನಿಂದ ಈ ನಾಟಕದ ಆಯ್ದ ಕೆಲವು ಮಾತುಗಳು. ಚಾರುದತ್ತನು ತನ್ನ ಗತ ವೈಭವವನ್ನು ನೆನೆದು ಈಗ ಒದಗಿರುವ ಬಡತನದ ಬಗ್ಗೆ ದುಃಖಿಸುತ್ತಿದ್ದಾನೆ. ಒಂದು ಕಾಲದಲ್ಲಿ ತಾನು ಬಾಗಿಲಂಚಿನಲ್ಲಿ ಚೆಲ್ಲುತ್ತಿದ್ದ ಬಲಿಯ ಕಾಳುಗಳನ್ನು ತಿನ್ನಲು ಹಂಸ ಸಾರಂಗಾದಿಗಳು ನೆರೆಯುತ್ತಿದ್ದವು. ಇಂದು ಅವೇ ಸ್ಥಳಗಳಲ್ಲಿ ಹಿಂದೆ ಬಿದ್ದ ಕಾಳು ಮೊಳಕೆ ಒಡೆದು ಚಿಗುರಿವೆ. ಕೀಟಗಳು ಅವುಗಳನ್ನು ತಿನ್ನಲು ಕಾಯುತ್ತಿವೆ. ಬಲಿ ಕೊಡಲು ಧಾನ್ಯವೂ ಇಲ್ಲದ ಬಡತನ ತನಗೊದಗಿದೆ. ಸುಖವೆಂದರೇನೆಂದು ಮನಸಾರೆ ಅನುಭವಿಸಿದ ನನಗೆ ಇದು ದುಃಖ ಉಂಟು ಮಾಡುತ್ತಿಲ್ಲ. ಆದರೆ ಈ ಪರಿಸ್ಥಿತಿ ಒದಗಿದ ಜನರ ಬಾಳು ಎಷ್ಟು ಕಷ್ಟವೆಂದು ಯೋಚಿಸುತ್ತಿರುವೆ. ಏಕೆಂದರೆ ಸುಖ ದುಃಖಗಳು ಒಂದಾದ ಮೇಲೊಂದು ಬರುವಂತಹವು. ದುಃಖದ ಅನುಭೂತಿಯ ನಂತರ ಒದಗುವ ಸುಖ ಆನಂದ ತರುತ್ತದೆ. ಹೇಗೆಂದರೆ ತುಂಬಾ ಹೊತ್ತು ಕತ್ತಲಲ್ಲಿ ಕಳೆದ ವ್ಯಕ್ತಿಗೆ ಬೆಳಕು ಕಂಡಾಗ ಆಗುವ ಆನಂದ ಅನಿರ್ವಚನೀಯ. ಅದೇ ಬಹಳ ಕಾಲ ಸುಖವನ್ನು ಸೂರೆಗೈದ ವ್ಯಕ್ತಿ ಒಮ್ಮೆಲೇ ದರಿದ್ರತೆಯನ್ನು ಹೊಂದಿದರೆ ಅವನು ಬದುಕಿಯೂ ಸತ್ತಂತೆ ಸರಿ. ಅವನ ಶರೀರ ಬದುಕಿದ್ದೂ ಅವನು ಉಸಿರಾಡುತ್ತಿದ್ದರೂ ಅವನ ಸ್ಥಿತಿ ಮರಣದ ಸಮಾನ. ಹಾಗಾಗಿ ಮೊದಲಿನ ಸುಖ ಎಂದಿಗೂ ಸಹಿಸುವುದು ಕಷ್ಟ. ದುಃಖದ ತರುವಾಯ ಒದಗುವ ಸುಖ ಪರಮಾನಂದಕರ. ಭಾಸನ ಮಾತು ನಮ್ಮೆಲ್ಲರ ಅನುಭವಕ್ಕೆ ಒದಗುವಂತಹದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ