ಚಾರುದತ್ತ ೩

🌞ಚಾರುದತ್ತ  ಬೆಳಕು -3🌚

*सत्यं न मे धनविनाशगता विचिन्ता भाग्यक्रमेण हि धनानि पुनर्भवन्ति । एतत्तु मां दहति नष्टधनश्रियो मे यत् सौहृदानि सुजने शिथिलीभवन्ति ।।*

_ಭಾಸನ ಮತ್ತೊಂದು ಸರಳ ಶ್ಲೋಕ. ಕನ್ನಡ ಭಾಷೆ ಉತ್ತಮವಾಗಿ ಬಲ್ಲವರಿಗೂ ಅರ್ಥವಾಗುವ ಸರಳ ಸಂಸ್ಕೃತ ಭಾಸನದ್ದು. ಚಾರುದತ್ತನು ನುಡಿಯುವ ಮಾತು. ಗೆಳೆಯಾ,  ಸತ್ಯವಾಗಿಯೂ ಎನಗೆ ಧನಹೀನನಾದೆನೆಂಬ ಚಿಂತೆ ಇಲ್ಲ. ಇಂದು ಇರುವ ಧನ ನಾಳೆಗೆ ಇರದಿರಬಹುದು, ಮುಂದೊಂದು ದಿನ ಮತ್ತೆ ಮಹತ್ತಾಗಿ ಒದಗಬಹುದು. ನಮ್ಮ ಅದೃಷ್ಟ ಅಥವಾ ಕರ್ಮವಿಪಾಕವನ್ನು ಅನುಸರಿಸಿ ಸಂಪತ್ತು ಒದಗುವುದು ಅಥವಾ ಕಳೆದುಹೋಗುತ್ತದೆ. ಅದಕ್ಕೊಂದು ಸ್ಥಿರತೆ ಎಂದಿಗೂ ಇಲ್ಲ. ಲಕ್ಷ್ಮಿಯ ಸ್ವಭಾವವೇ ಚಾಂಚಲ್ಯ. ಇವತ್ತಿಲ್ಲದಿದ್ದರೇನು ದುಡ್ಡು ಸ್ವಲ್ಪ ಸಮಯದಲ್ಲೇ ಸಂಪಾದಿಸುವೆನು. ಆದರೆ ನನ್ನ ಚಿಂತೆಗೆ ಕಾರಣವೊಂದೇ, ದರಿದ್ರನಾದ ಅಥವಾ ಹಿಂದಿನ ವೈಭವ ಕಳೆದುಹೋದ, ಅದ್ವೇಷಿಯಾದ, ಯಾರಿಗೂ ಎಂದಿಗೂ ಕೇಡುಬಗೆಯದ ನನ್ನ ವಿಷಯದಲ್ಲಿ  ಬಂಧು ಮಿತ್ರರು ತೋರುತ್ತಿರುವ ವರ್ತನೆ ಅಥವಾ  ಅವರೊಡನೆ ದೃಢವಾಗಿದ್ದ ನನ್ನ ಸಂಬಂಧ ಈಗ ಶಿಥಿಲವಾಗಿರುವುದನ್ನು ಕಂಡ ನನ್ನ ಮನ ಮರುಗುತ್ತಿದೆ,ಶೋಚಿಸುತ್ತಿದೆ. ಇಷ್ಟು ದಿನ ಕಾರಣವಿಲ್ಲದಿದ್ದರೂ ನನ್ನ ಸುತ್ತಮುತ್ತಲು ಸುಳಿಯುತ್ತಿದ್ದ ಜನರು ಇಂದು ಕಾರಣವಿದ್ದರೂ ಬರುತ್ತಿಲ್ಲ. ಬಹುಕಾಲ ನನ್ನ ಬಳಿ ಉಳಿಯುತ್ತಿದ್ದ ಬಾಂಧವರು ಇಂದು ಕರೆದರೂ ಬರಲೊಲ್ಲರು.  ಸೌಜನ್ಯಕ್ಕಾದರೂ ನಗು ಬೀರುತ್ತಿದ್ದ ಊರ ಮಂದಿ ಇಂದು ಮುಖ ತಿರುಗಿಸಿ ದುರ್ದಾನ ತೆಗೆದುಕೊಂಡವರಂತೆ ತೆರಳುತ್ತಿದ್ದಾರೆ. ಸಂಪತ್ತೊಂದೇ ಎಲ್ಲಾ ಭಾವನೆಗಳಿಗೂ ಸಂಬಂಧಗಳಿಗೂ ಆಶ್ರಯ, ಸಜ್ಜನಿಕೆ ಅಲ್ಲವೇ ಅಲ್ಲ ಎಂಬ ಲೋಕದ ಮನಸ್ಥಿತಿ ನನ್ನನ್ನು ಅಡಿಗಡಿಗೆ ಸುಡುತ್ತಿದೆ. ಇದೇ ನನ್ನ ಚಿಂತೆಗೆ ಕಾರಣ ಹೊರತು ಬೇರೆನಲ್ಲ. ಕವಿಯ ಯಾವುದೋ ಕಾಲದ ಸ್ಥಿತಿಯೋ ಎನ್ನುವಂತೆ ಸಹಜವಾಗಿದೆ ಈ ಮಾತು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩