ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*अधिगतनृपशब्दं धार्यमाणातपत्रं विकसितकृतमौलिं तीर्थतोयाभिषिक्तम् | गुरुमधिगतलीलं वन्द्यमानं जनौघैर्नवशशिनमिवार्यं पश्यतो मे न तृप्तिः ||*
_ಭರತನ ಮಾತು. ಅಭಿಷಿಕ್ತನಾದ ರಾಮನನ್ನು ನೋಡಿದಷ್ಟೂ ಸಾಲದು. ನೋಡಲೆರಡು ಕಣ್ಣು ಎನಗೆ ಸಾಲದು. ಈಗ ತಾನೇ ಉದಿಸಿದ ಚಂದ್ರನಂತೆ ರಾಮ ಶೋಭಿಸುತ್ತಿರುವನು. ರಾಜನೆಂಬ ಶಬ್ದದಿಂದ ರಾಮ ಕರೆಸಲ್ಪಡುತ್ತಿದ್ದಾನೆ. ಅಥವಾ ರಾಜ ಶಬ್ದವು *ರಂಜನಾತ್ ರಾಜಾ* ಎಂಬಂತೆ ಪ್ರಜಾರಂಜಕನಾದ ರಾಮನನ್ನು ಆಶ್ರಯಿಸಿ ಸಾರ್ಥಕವಾಯಿತು. ಸೇವಕರಿಂದ ಶ್ವೇತಚ್ಛತ್ರವು ರಾಜನಿಗೆ ಹಿಡಿಯಲ್ಪಟ್ಟಿದೆ. ಇದು ರಾಜನ ಜವಾಬ್ದಾರಿ ಸೂಚಿಸುತ್ತಿದೆ. ನಿರ್ಮಲವಾದ ಛತ್ರದಂತೆ ರಾಜ್ಯದ ಆಡಳಿತವೂ ರಾಜ್ಯಶ್ರೀಯು ಕೆಡುಕಿಗೆ ಎಡೆ ಮಾಡಿಕೊಡದಂತೆ ರಾಜನ ವ್ಯವಹಾರವಿರಬೇಕು. ಬಹುಕಾಲದ ನಂತರ ರಾಮನನ್ನು ಹೀಗೆ ಆತಪತ್ರದ ಅಡಿಯಲ್ಲಿ ನೋಡಿ ಆನಂದ ತುಂಬಿಬರುತ್ತಿದೆ. ಯಾವಾಗಲೂ ಅನ್ಯರಿಗೆ ನೆರಳಾಗಿದ್ದ ರಾಮ ಇಂದು ತಾನು ನೆರಳಿನಲ್ಲಿದ್ದಾನೆ. ಅಭಿಷೇಕದ ಈ ಸಂದರ್ಭದಲ್ಲಿ ರಾಮನ ಮೊಗ ಅರಳಿದೆ. ಬಹುಕಾಲ ಮಳೆಯಾಗದೆ, ( ಸುಖದ ಅನುಭವ ಇಲ್ಲದೆ ) ಮುದುಡಿ ಹೋಗಿದ್ದ ರಾಮನ ಮುಖಕಮಲ ಇಂದು ಅರಳಿ ನಿಂತಿದೆ. ಗಂಗಾದಿ ಪುಣ್ಯ ಸಲಿಲವು ರಾಮನ ಮೌಲಿಯನ್ನು ತೋಯಿಸಿ ತಾನು ಪುನೀತವಾಗಿದೆ. ಸಾಮಾನ್ಯವಾಗಿ ಉಳಿದವರ ಪಾಪ ತೊಳೆಯುವ ಈ ತೀರ್ಥಗಳು ಇಂದು ರಾಮನ ತಲೆ ಸ್ಪರ್ಶಿಸಿದ ಪರಿಣಾಮ ತಾವು ಧನ್ಯತೆ ಅನುಭವಿಸಿವೆ. ಹೀಗೆ ಪೂಜ್ಯನಾದ ಅಣ್ಣನು ರಾಜ್ಯಶ್ರೀಯನ್ನು ಪಡೆದು ನಿಜಾರ್ಥದಲ್ಲಿ ಶ್ರೀಪತಿಯಾಗಿರುವನು. ಲೋಕದ ಅನೇಕ ರಾಜರು,ಪ್ರಜೆಗಳು ಸೇರಿ ಮತ್ತೆ ಮತ್ತೆ ವಂದಿಸುತ್ತಿದ್ದಾರೆ. ಇಂತಹ ದೃಶ್ಯ ನೋಡುತ್ತಿದ್ದಷ್ಟೂ ನನ್ನ ಮನ ತೃಪ್ತವಾಗುತ್ತಿಲ್ಲ. ಮತ್ತಷ್ಟು ಹೊತ್ತು ನೋಡುತ್ತಲೇ ಇರಬೇಕೆಂದು ಬಯಸುತ್ತಿದೆ. ಅಣ್ಣನ ಏಳೆಗೆಯನ್ನು ಕಂಡ ಭರತನ ಕಣ್ಣಲ್ಲಿ ಆನಂದಾಶ್ರು ಒಸರುತ್ತಿದೆ. ಇವರಿಬ್ಬರ ಈ ಭಾವ ಕವಿಯ ಮಾತಿನಲ್ಲಿ ಕೃತಾರ್ಥವಾಗಿದೆ. ಆದರ್ಶಗಳು ರಾಮ- ಭರತರ ನಡೆಯ ಮೂಲಕ ಸಾಕಾರಗೊಂಡಿವೆ._
📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ