ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*विधिसमयनियोगाद्दीप्तिसंहारजिह्मं शिथिलवसुमगाधे मग्नमापत्पयोधौ | रिपुतिमिरमुदस्योदीयमानंदिनादौ दिनकृतमिवलक्ष्मीस्त्वां समभ्येतु भूयः ||*
_ಮೊದಲ ಸರ್ಗದ ಕೊನೆಯ ಶ್ಲೋಕ. ಲಕ್ಷ್ಷ್ಮೀ ಎಂಬ ಪದದಿಂದಲೇ ಭಾರವಿಯು ಪ್ರತಿಯೊಂದು ಸರ್ಗವನ್ನು ಮುಗಿಸುತ್ತಾನೆ. ಸರ್ಗದ ಕೊನೆಯ ಶ್ಲೋಕದಲ್ಲಿ ಆ ಪದ ಇದ್ದೇ ಇರುವುದು. ಮಂಗಲಾಂತಾನಿ ಕಾರ್ಯಾಣಿ ಎಂಬಂತೆ ಅಂತ್ಯದಲ್ಲೂ ಒಳ್ಳೆಯದನ್ನು ಬಯಸುವ ವಿಶಾಲ ಮನೋಭಾವ ಕವಿಗೆ. ದ್ರೌಪದಿ ಯುಧಿಷ್ಠಿರನು ಯುದ್ಧೋನ್ಮುಖನಾಗುವಂತೆ ಸಾಕಷ್ಟು ಉಪದೇಶಿಸುತ್ತಾಳೆ. ಶತ್ರುಗಳ ಅವನತಿಯನ್ನು ಚಿಂತಿಸಿ ಪ್ರವೃತ್ತನಾಗು ಎಂದೆಲ್ಲಾ ಹೇಳಿ ಕಡೆಗೆ ಈ ಮಾತು ನುಡಿಯುವಳು. ರಾಜಲಕ್ಷ್ಮಿಯು ದೈವದ ಪ್ರೇರಣೆಯಂತೆ ಕಾಂತಿಯನ್ನು ಕಳೆದುಕೊಂಡು ಅಪಾರವಾದ ಶತ್ರುಗಳೆಂಬ ಸಮುದ್ರದಲ್ಲಿ ಮುಳುಗಿದೆ. ಮುಂದೊಮ್ಮೆ ಬಾಳ ಕತ್ತಲು ಕವಿದು ಆ ರಾಜಲಕ್ಷ್ಮಿಯು ಉದಯಿಸುವ ಸೂರ್ಯನಂತಿರುವ ನಿನ್ನನ್ನು ಆಶ್ರಯಿಸಿ ಮೆರೆಯಲಿ. ಸಂಜೆಯಾಗುತ್ತಿದ್ದಂತೆ ಮಂದೇಹ ನಾಮಕ ರಾಕ್ಷಸರ ಪೀಡೆಗೊಳಗಾದ ಸೂರ್ಯನು ತನ್ನ ಅಪಾರವಾದ ತೇಜೋರಾಶಿಯನ್ನು ಕಳೆದುಕೊಂಡು ಖಿನ್ನನಾಗಿ ಸಮುದ್ರದಲ್ಲಿ ಮುಳುಗುವನು. ಮರುದಿನ ಎಂದಿನಂತೆ ಎಲ್ಲಾ ಬಂಧಗಳನ್ನು ಕಳಚಿ ರಾಕ್ಷಸರೆಂಬ ಕತ್ತಲನ್ನು ಓಡಿಸಿ ಮತ್ತೆ ಅಂಬರದಲ್ಲಿ ಮೆರೆಯುವನು. ಅದರಂತೆ ಪ್ರಕೃತ ಯುಧಿಷ್ಠಿರನು ಸುಯೋಧನಾದಿಗಳ ಮೋಸದಿಂದ ರಾಜ್ಯಲಕ್ಷ್ಮಿಯಿಂದ ವಂಚುತನಾಗಿ ಅರಣ್ಯವಾಸವೆಂಬ ಕಷ್ಟಗಳ ಸಮುದ್ರದಲ್ಲಿ ಮುಳುಗಿದ್ದಾನೆ. ಮುಂದೆ ಶತ್ರುಗಳನ್ನು ತರಿದು ತಾನು ಧರ್ಮದ ತೇಜಸ್ಸಿನಿಂದ ಮತ್ತಷ್ಟು ಬೆಳಗಿ ಮೆರೆಯುತ್ತಾನೆ ಲಕ್ಷ್ಮೀನಾರಾಯಣ ಆಶಯ ದ್ರೌಪದಿಯದ್ದು. ನಿರಾಸೆಯ ಕಾರ್ಮೋಡ ಕರಗಿ ಬಾಳೆಂಬ ಗಗನಕ್ಕೆ ಚಂದಿರನ ಆಗಮನದಂತೆ ರಾಜನ ಬಾಳಲ್ಲೂ ಸುಖವು ಬಂದೇಬರುವುದೆಂಬ ಆಶಾಭಾವನೆ. ಸುಂದರವಾದ ಉಪಮೆ. ದುಃಖವು ತಾತ್ಕಾಲಿಕ. ಎಂದಾದರೊಂದು ದಿನ ಸುಖ ಬಂದೇ ಬರುವುದೆಂಬ ಸಂದೇಶವೂ ಕವಿಯ ಭಾವ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ