ಮಹಾಭಾರತ ೧೦

🍀📙🍀 ಮಹಾಭಾರತದ ಕೆಲವು ವಿಶೇಷ ವಿಷಯಗಳು 🍀📗☘ ಭಾಗ- ೧೦.

*ಸ ತದ್ಧನುಃ ಪರಿಕ್ರಮ್ಯ ಪ್ರದಕ್ಷಿಣಮಥಾಕರೋತ್*

_ಬೇರೆ ಯಾರೂ ಬಿಲ್ಲನೆತ್ತಿ ಕೃಷ್ಣೆಯ ಪಡೆಯಲು ಯಶಸ್ಸು ಪಡೆಯದಿದ್ದಾಗ ಬ್ರಾಹ್ಮಣರ ಮಧ್ಯದಿಂದ ಎದ್ದ ಅರ್ಜುನ ಮೊದಲಿಗೆ ಧನುಸ್ಸನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, ಎತ್ತಿಕೊಂಡು ಕಣ್ಣು ಮಿಟುಕಿಸುವುದರೊಳಗೆ ಹೆದೆಯೇರಿಸಿ ಐದು ಬಾಣಗಳಿಂದ ಲಕ್ಷ್ಯ ಭೇದಿಸಿದನು. ಇಲ್ಲಿ ಗಮನಿಸಬೇಕಾದ ಅಂಶ. ಪ್ರತಿಯೊಬ್ಬರೂ ತಮಗೆ ಉಪಯೋಗವಾಗುವ ವಸ್ತುಗಳ ಬಗೆಗೆ ತೋರುವ ಗೌರವ. ಇದು ನಮ್ಮಲ್ಲಿ ಎಲ್ಲಾ ವೃತ್ತಿಯವರಲ್ಲೂ ಕಂಡುಬರುತ್ತದೆ. ಕೃಷಿಕರು ತಾವು ಬಳಸುವ ಹಾರೆ ಗುದ್ದಲಿಗಳಿಗೆ, ಕ್ಷತ್ರಿಯರು ಆಯುಧಗಳಿಗೆ, ಸಾಣೆ ಹಿಡಿಯುವವರು ತಮ್ಮ ಯಂತ್ರಕ್ಕೆ, ಬ್ರಾಹ್ಮಣರು ಸ್ರುಕ್ ಸ್ರುವ ಹಾಗೂ ಪುಸ್ತಕಗಳಿಗೆ ಸಹಜವಾಗಿ ಗೌರವಿಸುತ್ತಾರೆ. ಅದನ್ನು ಯಾರಾದರೂ ವೈದಿಕರು ಹೇರಬೇಕೆಂದಿಲ್ಲ. ಅರ್ಜುನನಿಗೆ ಹಾಗೆ ಮಾಡೆಂದು ಯಾರೂ ಉಪದೇಶಿಸಿರಲಿಲ್ಲ. ಮಾತೆತ್ತಿದರೆ ವೈದಿಕರು ತಮ್ಮ ಆಚರಣೆ ಇತರರ ಮೇಲೆ ಹೇರಿದರೆನ್ನುವ ದಡ್ಡರು ಮಹಾಭಾರತ ಒಮ್ಮೆ ಓದಿ._

_ಕರ್ಣನನ್ನು ದ್ರೌಪದಿ ಮೂದಲಿಸುವ ಕಥೆ ಸೂತನೆಂದು ಜರೆಯುವುದು ಇತ್ಯಾದಿ ಮೂಲದಲ್ಲಿ ಕಂಡುಬರುವುದಿಲ್ಲ. ಇದು ಬೇರೆ ಗ್ರಂಥದ ಮಾಹಿತಿ ಇರಬಹುದು. ಕರ್ಣ ಶಲ್ಯಾದಿಗಳೂ ಅದನ್ನು ಭೇದಿಸುವಲ್ಲಿ ಸಮರ್ಥರಾಗಲಿಲ್ಲ ಹೊರತು ಅವರನ್ನು ತಡೆದವರಾರಿಲ್ಲ ಎಂದು ವ್ಯಾಸರ ಮಾತು._

*ನ ಚ ವಿಪ್ರೇಷ್ವಧಿಕಾರಃ ವಿದ್ಯತೇ ವರಣಂ ಪ್ರತಿ ಸ್ವಯಂವರಃ ಕ್ಷತ್ರಿಯಾಣಾಮಿತೀಯಂ ಪ್ರಥಿತಾ ಶ್ರುತಿ*

_ಬ್ರಾಹ್ಮಣರಿಗೆ ಸ್ವಯಂವರದ ಯಾವ ಅಧಿಕಾರವೂ ಇಲ್ಲ. ಸ್ವಯಂವರ ಕ್ಷತ್ರಿಯರಿಗಾಗಿಯೇ ಇರುವುದು ಎಂದೆಲ್ಲಾ ಅನೇಕರು ಮಾತನಾಡಿ ಅರ್ಜುನನ್ನು ಕೊಲ್ಲಲು ಬಯಸುತ್ತಾರೆ. ಪುರಾಣಗಳೆಲ್ಲ ಬ್ರಾಹ್ಮಣ ಪರ ಎನ್ನುವ ಮಂದಿ ಈ ವಾಕ್ಯಕ್ಕೆ ಏನು ಅರ್ಥ ಹೇಳುವರೋ!_

_ಇನ್ನು ನನ್ನ ಒಂದು ಚಿಂತನೆ. ಅರ್ಜುನ ಲೋಕವೀರ ಎನ್ನುವ ಸಂಗತಿ ಸತ್ಯ. ಭೀಮ ಕನಿಕರಿಸಿ ಅವನಿಗೆ ಅವಕಾಶ ಮಾಡಿಕೊಟ್ಟ ಎಂಬ ಕೆಲವರ ವಾದಕ್ಕೆ ಏನನ್ನಬೇಕೊ ಅರಿಯಲಾರೆ. ಕೃಷ್ಣನದೇ ಮಾತು *ಪಾಂಡವಾನಾಂ ಧನಂಜಯಃ* ಆ ಗುರಿ ಭೇದಿಸುವ ಸಾಮರ್ಥ್ಯ ಯಾದವ ವೀರರಿಗೆ ಕೆಲವರಿಗಿದ್ದರೂ ಕೃಷ್ಣನ ಸೂಚನೆಯಂತೆ ಅವರು ಸುಮ್ಮನಿದ್ದರು._ *ಸ್ಥಿತಾಶ್ಚ ಕೃಷ್ಣಸ್ಯ ಮತೇ ಬಭೂವುಃ*

_ಮುಂದೆ ತಮ್ಮನನ್ನು ಎದುರಿಸಲು ಬಂದ ವೀರರನ್ನು ಭೀಮನು ಸದೆಬಡಿಯಲು ತಾನೊಂದು ಬೃಹತ್ ಮರವನ್ನು ಬುಡಸಮೇತ ಕಿತ್ತು ನಿಲ್ಲುವನು.ಅವರ ನಡುವಿನ ಆತ್ಮೀಯತೆ ಆದರ್ಶಪ್ರಾಯ. ಅಣ್ಣನಿಗೆ ತೊಂದರೆಯಾದರೆ ತಮ್ಮ, ತಮ್ಮನಿಗೆ ತೊಂದರೆಯಾದರೆ ಅಣ್ಣ ಎಂದೂ ಬಿಟ್ಟುಕೊಡದ ಸಹೋದರ ಪ್ರೇಮ ಪಾಂಡವರದು._

_ಆ ಸಮಯದಲ್ಲಿ ಪಾಂಡವರೊಡನೆ ಬಂದ ಬ್ರಾಹ್ಮಣರು ನಾವು ಶತ್ರುಗಳನ್ನು ಸದೆಬಡಿಯುವೆವು ಎಂದಾಗ ಅರ್ಜುನ ನೀವು ಪ್ರೇಕ್ಷಕರಾಗಿರೆಂದು ಹೇಳಿ ತಾನು ಗುರಿ ಮುಟ್ಟಿದ ಧನುವನ್ನೇ ಹಿಡಿದು ಕಾದುತ್ತಾನೆ. ಆ ಸಮಯದಲ್ಲಿ ಅರ್ಜುನ ಕರ್ಣರಿಗೆ, ಭೀಮ ಶಲ್ಯರಿಗೆ ಪರಸ್ಪರ ಯುದ್ಧವಾಗುತ್ತದೆ. ಆ ಕಾಲದ ಸಮಬಲ ಪರಾಕ್ರಮಿಗಳೆಂದೇ ಕರೆಸಲ್ಪಟ್ಟಿದ್ದರು ಇವರು. ಆದರೆ ಮಹಾಭಾರತ ಯುದ್ಧದಲ್ಲಿ ಏಕೋ ಏನೋ ಶಲ್ಯನ ಪರಾಕ್ರಮ ಹೆಚ್ಚು ಪ್ರಕಟವಾಗಲಿಲ್ಲ._

_ಕರ್ಣಾರ್ಜುನರು ಮದಿಸಿದ ಆನೆಗಳಂತೆ ಕಾದಾಡುವರು. ಕೆಲಕಾಲದ ನಂತರ ಕರ್ಣನು ತಡೆಯಲಾರದೇ ನೀನಾರು  ಧನುರ್ವೇದವೋ, ವಿಷ್ಣುವೋ, ಇಂದ್ರನೋ ಎಂದಾಗ ಅರ್ಜುನ ತನ್ನ ಪರಿಚಯ ಬಿಟ್ಟುಕೊಡದೆ ತಾನು ಬ್ರಾಹ್ಮಣನೆಂದೇ ಹೇಳುತ್ತಾನೆ. ಸಾಕ್ಷಾತ್ ಇಂದ್ರನು ಅಥವಾ ಪಾಂಡುಪುತ್ರನಾದ ಅರ್ಜುನನನ್ನು  ಬಿಟ್ಟು ಬೇರಾರೂ ತನ್ನ ಬಳಿ ಹೀಗೆ ಯುದ್ಧ ಮಾಡಲಾರರೆನ್ನುವನು. ಕೊನೆಗೆ ಕರ್ಣನು ಬ್ರಹ್ಮ ತೇಜಸ್ಸು ಗೆಲ್ಲುವುದು ಕಷ್ಟವೆಂದು ಭಾವಿಸಿ ಯುದ್ಧದಿಂದ ಹಿಂತೆಗೆಯುತ್ತಾನೆ. ಭೀಮನು ಅದೇ ಸಮಯದಲ್ಲಿ ಚಾಕಚಕ್ಯತೆಯಿಂದ ಹಾಗೂ ಬಾಹುಬಲದಿಂದ ಶಲ್ಯನನ್ನು ನೆಲಕ್ಕೆ ಕುಕ್ಕುತ್ತಾನೆ. ಆದರೆ ಮನದಲ್ಲೇ ತನ್ನ ಮಾವನೆಂದರಿತು ಕೊಲ್ಲದೆ ಸುಮ್ಮನೆ ಸೋಲಿಸುವನು, ಕೊಲ್ಲುವುದಿಲ್ಲ. ಬಾಹುಬಲದಲ್ಲಿ ಭೀಮನಿಗೆ ಸಾಟಿ ಇಲ್ಲ, ಶಸ್ತ್ರಗಳ ಪರಿಣತಿಯಲ್ಲಿ ಅರ್ಜುನನ ಮೀರಿಸುವರಿಲ್ಲ ಎಂಬುದು ಇಲ್ಲಿ ಸಾಬೀತಾಗುವುದು._

ಮುಂದುವರಿಯುತ್ತದೆ.
http://shreenidhiabhyankar.blogspot.in/
📗 ಸಂಗ್ರಹ ✍  ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩