ಪ್ರತಿಮಾ ನಾಟಕ ಕೊನೆಯ ಸುಮ
🌸 ಪ್ರತಿಮಾ ನಾಟಕದ ಕೊನೆಯ ಸುಮ 🌸
*एतदार्याभिषेकेण कुलं मे नष्टकल्मषम् | पुनः प्रकाशतां याति सोमस्येवोदये जगत् ||*
_ಶತ್ರುಘ್ನನ ಮಾತು. ಭಾಸನು ಇಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾನೆ. ರಾಮಾಯಣದಲ್ಲಿ ಅಯೋಧ್ಯೆಗೆ ತೆರಳಿದ ನಂತರ ಅಭಿಷೇಕ ಇದ್ದರೆ ಈ ನಾಟಕದಲ್ಲಿ ವನದಲ್ಲೇ ಋಷಿಗಳು ರಾಜನೆಂದು ಅಭಿಷೇಕ ನೆರವೇರಿಸುವರು. ಇದನ್ನು ಕಂಡು ಧನ್ಯನಾದ ಶತ್ರುಘ್ನನ ಸಂತೋಷದ ಮಾತಿದು. ಇಷ್ಟು ಕಾಲ ನಮ್ಮ ರಘುಕುಲವು ಕಲ್ಮಷದಿಂದ ಕುಗ್ಗಿತ್ತು. ಸಹಜವಾಗಿ ಜ್ಯೇಷ್ಠನಿಗೆ ಅಥವಾ ಯೋಗ್ಯತೆಗನುಸಾರ ದೊರಕುವ ರಾಜಪದವಿಯು ಯಾರನ್ನೂ ಪಡೆಯದೇ ಅನಾಥವಾಗಿತ್ತು. ಹಾಗಾಗಿ ಸಿಂಹಾಸನ ಶೂನ್ಯವಾಗಲು ನಾವೆಲ್ಲರೂ ಕಾರಣರೇ. ಆದರಿಂದು ರಾಮ ಅಭಿಷಿಕ್ತನಾದ ಮಧುರ ಘಳಿಗೆಯಲ್ಲಿ ಆ ಪೂರ್ಣತೆ ಕಂಡುಬಂದಿದೆ. ಕಲ್ಮಷವು ಅಥವಾ ಅಪವಾದವು ಕಳೆಯಿತು. ಇಂದು ಈ ಇಕ್ಷ್ವಾಕು ಕುಲವು ಪ್ರಕಾಶಮಾನವಾಯಿತು. ಅಮಾವಾಸ್ಯೆ ಕಳೆದು ಚಂದ್ರೋದಯವಾದಾಗ ಹೇಗೆ ಜಗವೆಲ್ಲಾ ಆನಂದದಲ್ಲಿ ಮುಳುಗುವುದೋ ಅದರಂತೆ ಇಂದೂ ಕುಲಕಳಂಕ ಕಳೆದುಕೊಂಡ ನಮ್ಮ ಪ್ರಸಿದ್ಧ ವಂಶವು ರಾಮಚಂದ್ರನ ಉದಯದಿಂದ ಪ್ರಕಾಶಮಾನವಾಯಿತು. ಕೀರ್ತಿಗೆ ಭಾಜನವಾಯಿತು._
ಈ ಶ್ಲೋಕದೊಂದಿಗೆ ಪ್ರತಿಮಾ ನಾಟಕದ ಸುಮಗಳು ಮುಗಿದವು. ಮುಂದೆ *ಪ್ರತಿಜ್ಞಾ ಯೌಗಂಧರಾಯಣ* ನಾಟಕದೊಂದಿಗೆ ಮುಂದುವರೆಯುವುದು ಈ ಅಕ್ಷರ ಯಜ್ಞ.ಅವಿಮಾರಕ ಹಾಗೂ ಪ್ರತಿಮಾನಾಟಕದ ಆಯ್ದ ಶ್ಲೋಕಗಳೆಲ್ಲಾ ನನ್ನ ಬ್ಲಾಗಿನಲ್ಲಿವೆ. ಆಸಕ್ತರು ಓದಿ ಪ್ರತಿಕ್ರಯಿಸಿ. ಅಂದಾಜು ೪೦೦ ಲೇಖನ ಇಂದಿಗೆ ಮುಗಿಯಿತು. ತಪ್ಪನ್ನು ಒಪ್ಪದೇ ಕೂಡಲೇ ತಿಳಿಹೇಳಿ ಎನ್ನುತ್ತಾ ನಿಮ್ಮೆಲ್ಲರ ಆಶೀರ್ವಾದ- ಪ್ರೋತ್ಸಾಹ ಬಯಸುವ.
http://shreenidhiabhyankar.blogspot.in/
📗ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ