ರಾಮಾಯಣ
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೯
*ಬದ್ಧಾಂಜಲಿಪುಟಂ ದೀನಂ ಯಾಚಂತಂ ಶರಣಾಗತಮ್ ನ ಹನ್ಯಾದಾನೃಶಂಸ್ಯಾರ್ಥಮಪಿ ಶತ್ರುಂ ಪರಂತಪ*
_ರಾಮ ತನ್ನ ಮಾತು ಮುಂದುವರೆಸುತ್ತಿದ್ದಾನೆ. ಕಪೋತವೋ ಅಪಕಾರಿಗೆ ಆಶ್ರಯವಿತ್ತು ಆದರ ತೋರಿರಬೇಕಾದರೆ ನನ್ನಂತಹವನು ಹೇಗೆ ನಿರಾಕರಿಸಲಿ! ಈ ವಿಷಯದಲ್ಲಿ ಕಣ್ವನ ಮಗನಾದ ಕಂಡು ಮುನಿ ಹೀಗೆ ಹೇಳಿದ್ದಾನೆ. ಶತ್ರುವೇ ಆಗಿದ್ದರೂ ಶರಣಾಗಿ ದೀನಭಾವದಿಂದ ಕೈ ಜೋಡಿಸಿಕೊಂಡು ದಯಾಯಾಚನೆಯನ್ನು ಮಾಡುತ್ತಿದ್ದರೆ ಅಂತಹವವನ್ನು ಖಂಡಿತವಾಗಿಯೂ ಸಂಹರಿಸಬಾರದು. ಶತ್ರುವಾದವನು ಶರಣಾದರೆ ಅವನಿಗೂ ದಯೆ ತೋರಬೇಕು ಹೊರತು ಕೊಲ್ಲುವುದಲ್ಲ. ನಮ್ಮ ಧರ್ಮದ ಉದಾತ್ತತೆ ರಾಮನ ಮಾತಿನಲ್ಲಿ ಕಾಣುತ್ತದೆ. ಪಾಶ್ಚಾತ್ಯರು ಶತ್ರುವಲ್ಲದ ತತ್ವಜ್ಞಾನಿಗಳಾದ ಸಾಕ್ರೆಟೀಸ್ ಗೆಲಿಲಿಯೋ ಮುಂತಾದವರನ್ನು ಕೊಂದು ಕೆಡಹಿದರು. ಆದರೆ ನಮ್ಮಲ್ಲಿ ಚಾರ್ವಾಕನಿಂದ ಹಿಡಿದು ಜಿನನವರೆಗೆ, ಪಾರ್ಸಿ ಯಹೂದಿ ಮುಂತಾದ ಎಲ್ಲರಿಗೂ ಆಶ್ರಯ ಕೊಟ್ಟ ಉದಾತ್ತ ಭಾವ ರಾಮನ ನುಡಿಯ ಪ್ರಭಾವ._
*ಆರ್ತೋ ವಾ ಯದಿ ವಾ ದೃಪ್ತಃ ಪರೇಷಾಂ ಶರಣಂ ಗತಃ ಅಪಿ ಪ್ರಾಣಾನ್ಪರಿತ್ಯಜ್ಯ ರಕ್ಷಿತವ್ಯಃ ಕೃತಾತ್ಮನಾ*
_ರಾಮನ ಮತ್ತೊಂದು ಗಂಭೀರ ನುಡಿ. ದುಃಖಿಯೇ ಆಗಲಿ, ಅಭಿಮಾನಿಯೇ ಆಗಲಿ ಅವನು ತನ್ನ ಶತ್ರುಗಳಿಗೆ ಶರಣಾದರೆ ಶುದ್ಧಹೃದಯನಾದ ಶ್ರೇಷ್ಠ ಪುರುಷನು ಹಾಗೆ ಶರಣಾಗಿ ಬರುವ ತನ್ನ ಶತ್ರುವನ್ನು ಪ್ರಾಣ ಬಿಟ್ಟಾದರೂ ರಕ್ಷಿಸಬೇಕು. ಎಂತಹ ಅದ್ಭುತ ಮಾತು. ಅವನು ತನ್ನ ಮೇಲೆ ಅಭಿಮಾನ ಹೊಂದಿರಲಿ, ಅಥವಾ ಪರಿಸ್ಥಿತಿಯಿಂದ ನೊಂದಿರಲಿ ಅಂತಹ ಎಲ್ಲಾ ಸಂದರ್ಭದಲ್ಲಿ ಶರಣಾಗತನನ್ನು ಕೈ ಬಿಡದೆ ಪ್ರಾಣ ಕೊಟ್ಟಾದರೂ ಕಾಪಾಡಬೇಕು. ಇಂತಹ ನೀತಿ ಅನುಸರಿಸಿದ ಕಾರಣದಿಂದಲೇ ಇರಬೇಕು ನಮ್ಮ ಪರಂಪರೆಯಲ್ಲಿ ತ್ಯಾಗಿಗಳು ಲಕ್ಷಾಂತರ, ಭೋಗಿಗಳು ಅಲ್ಪ ಜನ._
*ತಂ ಚೇದ್ಭಯಾದ್ವಾ ಮೋಹಾದ್ವಾ ಕಾಮಾದ್ವಾಪಿ ನ ರಕ್ಷತಿ ಸ್ವಯಾ ಶಕ್ತ್ಯಾ ಯಥಾನ್ಯಾಯಂ ತತ್ಪಾಪಂ ಲೋಕಗರ್ಹಿತಮ್*
_ಒಂದು ವೇಳೆ ಅವನು ಭಯದಿಂದಲೋ,( ಬಂದವನು ಅಪಕಾರ ಎಸಗುವನು ಅಥವಾ ಅವನ ಶತ್ರು ತನಗೆ ತಿರುಗಿ ಬೀಳುವನು ಇತ್ಯಾದಿ) ಮೋಹದಿಂದಲೋ, ( ತಾನು ಬದುಕಿದರೆ ಸಾಕು ಎಂಬ ತನ್ನತನದ ಮೋಹ) ಅಥವಾ ಯಾವುದಾದರೂ ದುಷ್ಟಕಾಮನೆಯಿಂದಲೋ, ( ಇವನನ್ನು ರಕ್ಷಿಸದಿದ್ದರೆ ತಾನು ತೊಂದರೆ ಅನುಭವಿಸಲಾರೆ ಮುಂತಾದ) ನ್ಯಾಯಾನುಸಾರವಾಗಿ ತನ್ನಲ್ಲಿರುವ ಶಕ್ತಿಯಿಂದ ಶರಣಾಗತನಾಗಿ ಬಂದ ಶತ್ರುವನ್ನು ರಕ್ಷಿಸದಿದ್ದರೆ ಅದು ಲೋಕನಿಂದ್ಯವಾದ ಮಹಾಪಾಪವಾಗುವುದು. ಶರಣಾಗತ ರಕ್ಷಣೆಗೆ ಎಂತಹ ಮಹತ್ವ ಹಿಂದಿನವರು ನೀಡಿದ್ದರು!_
*ವಿನಷ್ಟಃ ಪಶ್ಯತೋ ಯಸ್ಯಾರಕ್ಷಿತುಃ ಶರಣಾಗತಃ ಆದಾಯ ಸುಕೃತಂ ತಸ್ಯ ಸರ್ವಂ ಗಚ್ಛೇದರಕ್ಷಿತಃ*
_ಶರಣಾಗತನಾಗಿ ಬಂದ ಪುರುಷನು ( ಸ್ತ್ರೀ ಪುರುಷ ಎರಡೂ ಪುರುಷ ಶಬ್ದದಿಂದ ವಾಚ್ಯ. ಭೇದವಿಲ್ಲ)ತನಗೆ ರಕ್ಷಣೆ ಸಿಗದೆ ಶರಣ್ಯನ ಎದುರಲ್ಲೇ ನಾಶ ಹೊಂದಿದರೆ ಅವನು ಶರಣ್ಯನ ಅಂದರೆ ರಕ್ಷಣೆ ನೀಡಬೇಕಾದವನ ಸಕಲ ಪುಣ್ಯವನ್ನೂ ತನ್ನೊಡನೆ ತೆಗೆದುಕೊಂಡು ಹೋಗುವನು. ಕಂಡು ಮಹರ್ಷಿಗಳ ಈ ಮಾತು ನಮಗೆಲ್ಲ ಮತ್ತೆ ಮತ್ತೆ ಹೇಳಬೇಕಾದದ್ದು. ರಸ್ತೆಯಲ್ಲೋ, ಕಾಡಲ್ಲೋ, ಜನಸಂದಣಿಯಲ್ಲೋ ಯಾರಾದರೂ ಅಪಾಯಕ್ಕೆ ಸಿಲುಕಿದಾಗ ಬೇಡಿದರೂ ನಾವು ತಿರಸ್ಕರಿಸಿ ಹೊರಟು ಹೋಗುವೆವು. ಅಂತಹ ಸಂದರ್ಭದಲ್ಲಿ ನಮ್ಮ ಪುಣ್ಯವೂ ಹೋಗುವುದೆಂಬ ಜ್ಞಾನ ಇರಬೇಕು. ಯಾರೇ ಯಾವ ಸಮಯದಲ್ಲಿ ಶರಣಾದರೂ ಶಕ್ತಿಯಿದ್ದಷ್ಟು ರಕ್ಷಿಸಲು ಪ್ರಯತ್ನಿಸಬೇಕೇ ಹೊರತು ನುಣುಚಿಕೊಂಡು ಪಲಾಯನ ಮಾಡುವುದಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಧಾವಂತ ಈ ವಿಷಯದಲ್ಲಿ ಆದರೂ ತ್ಯಜಿಸಬೇಕು. ಆಗ ಮಾತ್ರ ಪುಣ್ಯವಂತರಾಗುವೆವು._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ