ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*द्विषन्निमित्ता यदियं दशा ततः समूलमुन्मूलयतीव मे मनः | परैरपर्यासितवीर्यसम्पदां पराभवोप्युत्सव एव मानिनाम् ||*
_ಸ್ವಾಭಿಮಾನಿಗಳಿಗೆ ಪರಾಜಯವೂ ದುಃಖ ತರಲಾರದು. ದ್ರೌಪದಿ ಧರ್ಮಜನಿಗೆ ಹೇಳಿದ ಮಾತು. ಒಂದು ವೇಳೆ ದೈವವಶಾತ್ ನಮಗೆ ಈ ಅವಸ್ಥೆ ಒದಗಿದ್ದರೆ ನಾನು ಇಷ್ಟು ದುಃಖಿಸುತ್ತಿರಲಿಲ್ಲ. ವಿಧಿ ನಿರ್ಣಯವೇ ಹೀಗೆಂದು ಸುಮ್ಮನಿದ್ದುಬಿಡುತ್ತಿದ್ದೆ. ಆದರೆ ಇದು ಹಾಗಲ್ಲ. ಶತ್ರುಗಳ ಕಪಟದಿಂದ ಉಂಟಾದ ಅವಸ್ಥೆ. ಹಾಗಾಗಿ ನನ್ನ ಮೈಯಲ್ಲೆಲ್ಲ ದ್ವೇಷದ ಬೆಂಕಿ ಪಸರಿಸುತ್ತಿದೆ. ಮನವು ಸುಮ್ಮನಿರಲು ಸಮ್ಮತಿಸುತ್ತಿಲ್ಲ. ನನ್ನ ಒಳಗಿನ ಭಾವನೆಗಳನ್ನೆಲ್ಲ ಹೊರಗೆಡಹುತ್ತಿದೆ. ಆದರೆ ನನ್ನ ಕೋಪ ವ್ಯರ್ಥ. ಅದರಿಂದ ಹೆಚ್ಚೇನೂ ಕೆಲಸವಾಗಲಾರದು. ಅದು ದುಃಖವನ್ನು ಅನುಭವಿಸಿಯೇ ತೀರಬೇಕು. ನನಗೆ ಪ್ರತೀಕಾರ ತೀರಿಸಲು ಅಸಾಧ್ಯ. ಆದರೆ ನಿನ್ನಂತಹ ಸ್ವಾಭಿಮಾನಿಗಳು ಈ ಅಪಮಾನವನ್ನು ಹೇಗೆ ಸಹಿಸಿಕೊಳ್ಳುವಿರಿ? ಪರರಿಂದ ಅಪಹರಿಸಲ್ಪಟ್ಟ ಸಂಪತ್ತು ಪಡೆಯುವಾಗ ಪರಾಭವ ಹೊಂದಿದರೂ ಅದು ಸಮಾಧಾನವನ್ನೇ ತರುತ್ತದೆ. ಆದರೆ ಪ್ರಯತ್ನಶೀಲತೆ ಇರಲೇಬೇಕು. ಆದರೆ ನೀನು ಶತ್ರುಗಳಿಂದ ಅಪಮಾನಿತನಾಗಿ, ಶತ್ರುಗಳ ಏಳಿಗೆ ಕಂಡೂ ಕಾಣದಂತೆ ಸುಮ್ಮನೆ ಹೇಗಿರುವೆ? ನಿನ್ನಂತಹ ಮಾನಿಗೆ ಇದು ಸಾಧ್ಯವೇ? ಸೋತರೂ ಚಿಂತೆಯಿಲ್ಲವೆಂದು ಪ್ರವೃತ್ತಿ ಮಾಡುವುದು ಸ್ವಾಭಿಮಾನಿಯ ಕೆಲಸ. ಏಕೆ ಸುಮ್ಮನಿರುವೆ? ಇನ್ನಾದರೂ ಶತ್ರುನಿಗ್ರಹದ ಮಾರ್ಗ ಹುಡುಕು. ದ್ರೌಪದಿಯ ಮಾತು ಎಷ್ಟು ಸತ್ಯ. ನಮಗೂ ವಿಧಿಯಿಂದುಂಟಾದ ಹೊಡೆತ ದೊಡ್ಡದಿದ್ದರೂ ಹಗೆಯಿಂದುಂಟಾದ ಹೊಡೆತ ಸಣ್ಣದಿದ್ದರೂ ಮನದ ಮೇಲೆ ಹೆಚ್ಚು ಪರಿಣಾಮ ಬೀರುವುದು ಎರಡನೆಯದೇ. ನಮ್ಮನ್ನು ಸುಮ್ಮನಿರಲು ಅದು ಬಿಡದು. ಸತತ ಪ್ರಯತ್ನದಿಂದ ಕಳೆದುಹೋದ ಗೌರವ ಮರಳಿ ಪಡೆಯಲು ಪ್ರಯತ್ನಿಸಬೇಕು. ಹಾಗೆ ಮಾಡಿದಾಗ ಸೋಲಾದರೂ ಅಲ್ಲೊಂದು ಆತ್ಮತೃಪ್ತಿ ಇರುತ್ತದೆ. ಅದನ್ನೇ ಕೃಷ್ಣ ಹೇಳಿದ್ದು. ಫಲಾಫಲದ ಅಪೇಕ್ಷೆ ಇಟ್ಟುಕೊಳ್ಳದೆ ಶ್ರದ್ಧೆಯಿಂದ ಕರ್ಮ ಮಾಡು. ಫಲ ಸಿಕ್ಕಿದರೆ ಹೆಚ್ಚು ಸಂತೋಷ. ಇಲ್ಲದಿದ್ದರೂ ಪಟ್ಟ ಪ್ರಯತ್ನದ ಬಗೆಗೆ ಸಂತೋಷ ಇದ್ದೇ ಇರುತ್ತದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ