ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*विषमोपि विगाह्यते नयः कृततीर्थः पयसामिवाशयः | स तु तत्र विशेषदुर्लभः सदुपन्यस्यति कृत्यवर्त्म यः ||*

_ಭೀಮನು ದ್ರೌಪದಿಯ ಮಾತಿನ ಬಗೆಗೆ ಹೇಳುತ್ತಿರುವುದು. ಪ್ರಕೃತಿ ಸಹಜವಾದ ಒಂದು ಎತ್ತರ ತಗ್ಗು ಆಳ ತಿಳಿಯದ ಜಲಾಶಯ ಇರುತ್ತದೆ. ಅಂತಹ ಜಲಾಶಯಕ್ಕೆ ಯಾರಾದರೂ ಮಹಾತ್ಮನೊಬ್ಬನು ಮೆಟ್ಟಿಲುಗಳನ್ನು ಕಟ್ಟಿ ಅನುಕೂಲ ಮಾಡಿಕೊಡುವನು. ಅಲ್ಲಿಯವರೆಗೆ ಭಯಂಕರವಾಗಿದ್ದ ಅಥವಾ ಒಳ ಹೊಕ್ಕಲು ಭಯವಾಗುತ್ತಿದ್ದ ಆ ಕೆರೆಯನ್ನು ಈಗ ಸಾಮಾನ್ಯರೆಲ್ಲರೂ ಸುಲಭವಾಗಿ ಪ್ರವೇಶಿಸುತ್ತಿದ್ದಾರೆ. ಈಗ ಪ್ರವೇಶಿಸುವ ಮಂದಿ ಸಾಕಷ್ಟು ಇದ್ದಾರೆ. ಆದರೆ ಹಿಂದೆ ಮೆಟ್ಟಿಲು ಕಟ್ಟಲು ಮನಸ್ಸು ಮಾಡಿ ಸಾಧಿಸಿದವನು ಯಾರೋ ಲಕ್ಷಕ್ಕೊಬ್ಬ ಮಹಾತ್ಮ. ಪ್ರಕೃತ ದ್ರೌಪದಿಯು ಶತ್ರುವಿನ ನಿಗ್ರಹದ ಬಗೆಗೆ ಪ್ರವೃತ್ತಿ ಮಾಡಲು ನಿನ್ನ ಮನಕ್ಕೆ ಮೆಟ್ಟಿಲು ಕಟ್ಟುವ ಕೆಲಸ ಮಾಡುತ್ತಿದ್ದಾಳೆ. ಮುಂದೆ ನೀನು ಯುದ್ಧಕ್ಕೆ ಹೊರಟಾಗ ಸಾಕಷ್ಟು ಸಲಹೆಗಾರರು ಬೆಂಬಲಿಗರು ನಿನ್ನೊಡನೆ ಬರಬಹುದು. ಆದರೆ ಈಗ ನಿನ್ನನ್ನು ಬಡಿದೆಬ್ಬಿಸುವ ಕೃಷ್ಣೆಯ ಮಾತು ಮರೆಯಲಾಗದು. ಅಲ್ಲಿ ಹೇಗೆ ಸೋಪಾನಗಳ ನಿರ್ಮಾಣ ಮಾಡಿದ ವ್ಯಕ್ತಿಯನ್ನು ಮರೆಯುವುದಿಲ್ಲವೋ ಅಥವಾ ಅವನ ಮೌಲ್ಯ ಎಷ್ಟು ದೊಡ್ಡದೋ ಅದರಂತೆ ಪ್ರಕೃತ ದ್ರೌಪದಿಯ ಮಾತು ಮರೆಯಲಾಗದು ಅಥವಾ ಹೆಚ್ಚು ಕಲಿಯದ ಸ್ತ್ರೀಯ ಮಾತೆಂದು ತಿರಸ್ಕರಿಸಲಾಗದು. ಹಾಗಾಗಿ ಅವಳ ಮಾತನ್ನು ಮನನ ಮಾಡಿ ಶತ್ರುವನ್ನು ನಿಗ್ರಹಿಸಲು ಪ್ರವರ್ತಿಸು. ಆಳ ಅಗಲ ಅರಿಯದ ಕೊಳದಂತೆ ಯುಧಿಷ್ಠಿರನ ಮನವೂ ಈಗ ಸಹಿಸಲಸಾಧ್ಯವಾದ ದುಃಖದಿಂದ ನರಳುತ್ತಿದೆ. ಅಂತಹ ಮನಕ್ಕೆ ಸೋಪಾನ ನಿರ್ಮಿಸುವ ಕೆಲಸ ದ್ರೌಪದಿಯ ಮಾತಿನಲ್ಲಿದೆ ಎಂಬ ಭಾವ. ಲೋಕದಲ್ಲಿ ಹೀಗೆಯೇ ಇರುವುದು. ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಉಪದೇಶಿಸುವವರು ಕಡಿಮೆ. ತೊಡಗಿದ ಮೇಲೆ ತಲೆಗೊಂದರಂತೆ ನೀತಿಯನ್ನು ಉಪದೇಶಿಸುತ್ತಾರೆ. ಮೊದಲು ತೊಡಗಲು ಪ್ರೇರಣೆ ಒದಗಿಸುವ ಮಹಾನುಭಾವರ ವಿಸ್ಮರಣೆ ಸಲ್ಲದು. ಕಾರ್ಯ ಯಶಸ್ವಿಯಾದೊಡನೆ ಅವರನ್ನು ಗುರುತಿಸಿ ಗೌರವಿಸಬೇಕೆಂಬ ಆಶಯ ಕವಿಯ ಮಾತಿನಲ್ಲಿ ಇಣುಕಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩