ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*पुरस्सरा धामवतां यशोधनाः सुदुस्सहं प्राप्य निकारमीदृशम् | भवादृशाश्चेदधिकुर्वते रतिं निराश्रया हन्त हता मनस्विता ||*
_ದ್ರೌಪದಿ ಯುಧಿಷ್ಠಿರನಿಗೆ ಹೇಳುವ ಮಾತು. ನೀನು ತೇಜಸ್ವಿಗಳಲ್ಲಿ ಅಗ್ರಗಣ್ಯ. ಯಶಸ್ಸನ್ನೇ ಧನವನ್ನಾಗಿಸಿದವನು. ಬೇರೆ ಸಂಪತ್ತಿನ ಹಿಂದೆ ಓಡದೇ ಯಶಸ್ಸನ್ನು ಮಾತ್ರ ಬಯಸುವವನು. ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಹಾಗೂ ಕೀರ್ತಿಯನ್ನು ಸಂಪಾದಿಸಿದವನು. ನಿನ್ನಂತಹ ಮಹಿಮರೇ ಸಹಿಸಲಸಾಧ್ಯವಾದ ಈ ದುರವಸ್ಥೆಯನ್ನು ಹೊಂದಿಯೂ ಸುಮ್ಮನಿರುವುದಾದರೆ, ಶತ್ರುವಿನ ಅಪಮಾನವನ್ನು ಪಡೆದೂ ಪ್ರತೀಕಾರ ಮಾಡದೇ ಸಂತೋಷವಾಗಿಯೇ ಅಥವಾ ಇದ್ದುದರಲ್ಲೇ ತೃಪ್ತಿ ಹೊಂದುವುದಾದರೆ ಏನು ಗತಿ! ಅಸ್ಮಿತೆಯು ಇಂದು ಆಶ್ರಯಹೀನವಾಗಿ ಸತ್ತುಹೋಯಿತು. ಸ್ವಾಭಿಮಾನವೆಂಬುದು ಇಷ್ಟು ದಿನ ನಿನ್ನಂತಹ ಮಾನವಂತರನ್ನು ಆಶ್ರಯಿಸಿತ್ತು. ಆದರೀಗ ನಿನ್ನಲ್ಲೂ ಆಶ್ರಯ ಸಿಗದೆ ಅದು ಮೃತಪ್ರಾಯವಾಗಿದೆ. ಶತ್ರುಗಳ ಏಳ್ಗೆ ತಡೆದು, ನಮ್ಮ ಉನ್ನತಿ ಸಾಧಿಸುವ ಯಾವೊಂದು ಸಣ್ಣ ಪ್ರಯತ್ನವೂ ನಿನ್ನಿಂದ ನಡೆಯುತ್ತಿಲ್ಲ ಅಂದರೆ ನೀನು ಶತ್ರುಗಳಿಂದಾದ ಅಪಮಾನಾದಿಗಳನ್ನು ಮರೆತು, ಅವರ ತಿರಸ್ಕಾರವನ್ನೂ ಗಮನಿಸದೇ, ಪಡುತ್ತಿರುವ ಕಷ್ಟವನ್ನೇ ಸುಖವೆಂದು ತಿಳಿದು ತೃಪ್ತನಾಗಿರುವೆಯಲ್ಲ! ಇನ್ನು ಅಭಿಮಾನ ಏನಾದೀತು? *ಸಂತುಷ್ಟಃ ಪ್ರಜಾಪತಿಃ ನಷ್ಟಃ* ಎಂಬ ಮಾತಿದೆ. ರಾಜನಾದವನಿಗೆಂದೂ ತೃಪ್ತಿ ಇರಬಾರದು. ಧನದ , ಕೀರ್ತಿಯ ಆಕಾಂಕ್ಷೆ ಬೆಟ್ಟದಷ್ಟಿದ್ದರೆ ಅವನು ಹಿಡಿಮಣ್ಣನ್ನಾದರೂ ಪಡೆಯಬಲ್ಲ. *ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ*ಎಂಬಂತೆ ಗರುಡನೂ ಪ್ರಯತ್ನಿಸದಿದ್ದರೆ ಒಂದು ಹೆಜ್ಜೆಯೂ ಮುಂದಿಡಲಾರ. ಇರುವೆಯು ಸಾವಿರ ಮೈಲು ಕ್ರಮಿಸೀತು. ಎಷ್ಟೇ ಕಷ್ಟ ಬಂದರೂ ಅಭಿಮಾನ ಬಿಡದೆ ಮತ್ತೆ ಗೆದ್ದು ನಿಲ್ಲಬೇಕೆಂಬ ಛಲದ ಪಾಠವನ್ನು ದ್ರೌಪದಿಯ ಮೂಲಕ ಕವಿ ನಮಗೂ ಹೇಳುತ್ತಿರುವನೇನೋ!_
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ