ವೇದ ಧರ್ಮ ೩೮

📗🌾📙 ವೇದ-ಧರ್ಮ 📗🌾📙 ಭಾಗ-೩೮

*ಶಿಕ್ಷಾ*

*ಅಚೋಸ್ಪೃಷ್ಟಾ ಯಣಸ್ತ್ವೀಷನ್ನೇಮಸ್ಪೃಷ್ಟಾಶ್ಶಲಃ ಸ್ಮೃತಾಃ ಶೇಷಾಃ ಸ್ಪೃಷ್ಟಾ ಹಲಃ ಪ್ರೋಕ್ತಾ ನಿಬೋಧಾನುಪ್ರದಾನತಃ*

_ಶಿಕ್ಷಾ ಗ್ರಂಥದಲ್ಲಿ ಅಕ್ಷರಗಳ ಉಚ್ಚಾರಣೆಯ ವಿಧವನ್ನು ಹೀಗೆ ವರ್ಣಿಸಿದ್ದಾರೆ. ಅಚಃ ಅಂದರೆ ಅ ದಿಂದ ಔ ವರೆಗಿನ ಸ್ವರಗಳು ಸ್ಪೃಷ್ಟ ಪ್ರಯತ್ನ ಇಲ್ಲದವು. ಅವುಗಳ ಉಚ್ಚಾರಣೆಗೆ ಹೆಚ್ಚಿನ ಶಕ್ತಿ ಅಗತ್ಯವಿಲ್ಲ. ಸಹಜವಾಗಿ ಹೇಳುವಂತಹವು. ಯ ರ ಲ ಇವುಗಳು ಈಷತ್ ಅಂದರೆ ಸ್ವಲ್ಪ ಪ್ರಯತ್ನ ಉಳ್ಳವು. ಶ ಷ ಸ ಹ ಇವುಗಳು ಅರ್ಧ ಸ್ಪೃಷ್ಟಗಳು. ಸ್ವಲ್ಪ ಹೆಚ್ಚಿನ ಶ್ರಮ ಬೇಕುಗಳು. ಉಳಿದೆಲ್ಲ ವ್ಯಂಜನಗಳು ಪೂರ್ಣವಾಗಿ ಪ್ರಯತ್ನವುಳ್ಳವು. ಕ ಚ ಇತ್ಯಾದಿ ಅಕ್ಷರಗಳನ್ನು ನೀವು ತೇಲಿಸಿ ಉಚ್ಚರಿಸಿದರೆ ಬೇರೆಯ ಅಕ್ಷರದ ಸಾಮ್ಯ ಹೊಂದಿ ಅರ್ಥವೇ ಬೇರೆಯಾಗುತ್ತದೆ. ಹೀಗೆ ಅಕ್ಷರಗಳ ಉಚ್ಚಾರಣೆಯ ವೈಜ್ಞಾನಿಕ ಮಾಹಿತಿ ಇಲ್ಲಿದೆ._

*ಗೀತೀ ಶೀಘ್ರೀ ಶಿರಃ ಕಂಪೀ ತಥಾ ಲಿಖಿತಪಾಠಕಃ ಅನರ್ಥಜ್ಞೋಲ್ಪಕಂಠಶ್ಚ ಷಡೇತೇ ಪಾಠಕಾಧಮಾಃ*

_ಹಿಂದೆ ಇದನ್ನೇ ಈ ಮಾಲಿಕೆಯಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ. ರಾಮನು ಹನುಮನ ಮಾತಿನಲ್ಲಿ ಈ ಎಲ್ಲಾ ದೋಷರಾಹಿತ್ಯವನ್ನು ಗುರುತಿಸಿ ಚತುರ್ವೇದಿ ಎಂದದ್ದು. ವೇದ ಮಂತ್ರಗಳನ್ನು ಹಾಡಿನಂತೆ ಹೇಳಬಾರದು. ತುಂಬಾ ವೇಗವಾಗಿ ಬಹಿರ್ದೆಸೆಗೆ ಹೊರಟವರಂತೆಯೂ ಹೇಳಬಾರದು. ಕೆಲವರ ಉಚ್ಚಾರಣೆ ಅವರಿಗೇ ಅರ್ಥವಾಗದಷ್ಟು ವೇಗವಾಗಿರುತ್ತದೆ.ಇನ್ನು ತಲೆಯನ್ನು ಅಥವಾ ಕೈಯನ್ನು ಅಲ್ಲಾಡಿಸುತ್ತಾ ಸಂಗೀತಗಾರನಂತೆಯೂ ವೇದವನ್ನು ಹೇಳಬಾರದು. ಅದು ವಿಕಾರವಾಗಿಯೂ ಕಾಣುವುದು. ಪುಸ್ತಕದಲ್ಲಿ ತಪ್ಪಿದ್ದರೆ ಹಾಗೆಯೇ ಉಚ್ಚರಿಸುವುದು ಅಥವಾ ಅರ್ಧಾಕ್ಷರಗಳಿಗೆ ಸ್ವರವಿದ್ದಲ್ಲಿ ( ಮನ್ ) ಹಿಂದಿನ ಅಕ್ಷರಕ್ಕೆ ಸ್ವರವೆಂದು ಅರಿಯದೇ ಹಾಗೆಯೇ ಓದುವುದು ಅಥವಾ ಮುಂದೆ ಸ್ವರವಿದ್ದಾಗ ( ನಮಸ್ತೇ ಅಸ್ತು ) ಅರೆಕ್ಷಣ ನಿಲ್ಲಿಸದೇ ಒಟ್ಟಿಗೇ ಓದುವುದು, ಮೂರು ನಾಲ್ಕು ಸಂಖ್ಯೆ ಹಾಕಿದ್ದಾಗ ಅದರ ಯ
ಉಚ್ಚಾರಣೆಯ ಕ್ರಮ ಅರಿಯದೇ ಎಲ್ಲಾ ಮಂತ್ರಗಳಂತೆ ಹೇಳುವುದು, ಸ್ವಲ್ಪವೂ ಅರ್ಥ ಅರಿಯಲು ಪ್ರಯತ್ನಿಸದೇ ಬಾಯಿಪಾಠ ಒಪ್ಪಿಸುವುದು, ( ತರಗತಿಯಲ್ಲಿ ಒಪ್ಪಿಸಿದಂತೆ) ಕೀರಲು ಸ್ವರದಲ್ಲಿ ಗಂಟಲು ಬಿದ್ದುಹೋದವರಂತೆ ಕುಞ್ ಗುಡುವುದು ಇವೆಲ್ಲ ವೇದ ಓದುವವನ ಅಧಮ ಲಕ್ಷಣಗಳು. ಇಷ್ಟು ದೋಷಗಳಿಂದ ರಹಿತವಾಗಿ ವೇದ ಪಠಿಸಿದರೆ ಆ ಕೂಡಲೇ ರಾಮನೇ ಬರುವನೇನೋ!

*ಮಾಧುರ್ಯಮಕ್ಷರವ್ಯಕ್ತಿಃ ಪದಚ್ಛೇದಸ್ತು ಸುಸ್ವರಃ  ಧೈರ್ಯಂ ಲಯಸಮರ್ಥಂ ಚ ಷಡೇತೇ ಪಾಠಕಾಗುಣಾಃ*

_ದೋಷಗಳ ನಂತರ ಗುಣಗಳನ್ನು ಹೇಳುತ್ತಿದ್ದಾರೆ. ಇಂಪಾಗಿ, ಅಕ್ಷರಗಳನ್ನು ಸ್ಫುಟವಾಗಿಯೂ, ಪದಗಳನ್ನು ಅಗತ್ಯವಿದ್ದಲ್ಲಿ ಬಿಡಿಸಿಯೂ, ಉದಾತ್ತ ಅನುದಾತ್ತ ಸ್ವರಿತ ಸ್ವರಗಳು ಲೋಪಗಳಾಗದಂತೆ, ( ಕೆಲವರಿಗೆ ಸ್ವರ ಯಾವುದಕ್ಕೆಂದೇ ತಿಳಿದಿರುವುದಿಲ್ಲ), ಯಾವ ಹೆದರಿಕೆ ಇಲ್ಲದೆಯೂ ( ಯುದ್ಧಕ್ಕೆ ಮಾತ್ರವಲ್ಲ, ವೇದಪಠನಕ್ಕೂ ಆತ್ಮವಿಶ್ವಾಸದ ಧೈರ್ಯ ಬೇಕು) ಲಯಕ್ಕೆ ಸರಿಯಾಗಿ ಹೇಳುವುದು ಪಾಠಕನ ಗುಣಗಳು. ಗುಂಪಿನಲ್ಲಿ ಹೇಳುವಾಗ ಉಳಿದವರ ಶ್ರುತಿಗೆ ಹೋಂದಿಕೆಯಾಗುವಂತೆ, ಒಬ್ಬನೇ ಹೇಳುವಾಗ ಕರ್ಕಶವಾಗದಂತೆ ವೇದ ಹೇಳುವುದು ಒಂದು ಕಲೆ.  ಇವನ್ನೆಲ್ಲ ನೋಡಿದರೆ ಅರಿವಾಗುತ್ತದೆ ವೇದ ಪಠಿಸಲು ಎಷ್ಟು ತಿಳುವಳಿಕೆ ಇದ್ದರೂ ಸಾಲದೆಂಬುದು._

http://shreenidhiabhyankar.blogspot.in/

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩