ರಾಮಾಯಣ ೬೦

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-60

*ಏವಂ ದೋಷೋ ಮಹಾನತ್ರ ಪ್ರಪನ್ನಾನಾಮರಕ್ಷಣೇ ಅಸ್ವರ್ಗ್ಯಂ ಚಾಯಶಸ್ಯಂ ಚ ಬಲವೀರ್ಯವಿನಾಶನಮ್*

_ರಾಮ ಶರಣಾಗತರ ರಕ್ಷಣೆಯ ಮಹತ್ವವನ್ನು ಮತ್ತೆ ಹೇಳುತ್ತಿದ್ದಾನೆ. ಯಾರೇ ಶರಣಾಗಿ ಬರಲಿ ಅವರಿಗೆ ರಕ್ಷಣೆ ನೀಡದಿದ್ದರೆ ಮಹಾದೋಷವೇ ಉಂಟಾಗುತ್ತದೆ. ಶರಣಾಗಿ ಬಂದವನ ತ್ಯಾಗವು ಸ್ವರ್ಗ ಮತ್ತು ಯಶಸ್ಸಿನ ನಷ್ಟಕ್ಕೆ ಕಾರಣವಾಗುವುದು. ಅವನನ್ನು ಬಿಟ್ಟರೆ ಅವನ ಜೊತೆಗೆ ನಮಗೆ ಸ್ವರ್ಗತರುವ ಪುಣ್ಯವೂ ನಮ್ಮ ಕೀರ್ತಿಯೂ ಮಣ್ಣುಪಾಲಾಗುವುದು. ಹಾಗಾಗಿ ಆರ್ತರ ರಕ್ಷಣೆ ಸಾರ್ವಕಾಲಿಕ ಎಂದು ಕಂಡುಮಹರ್ಷಿಗಳ ಮಾತು._

*ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ವ್ರತಂ ಮಮ*

_ಯಾರೇ ಆದರೂ ಒಂದೇ ಒಂದು ಬಾರಿ ಶರಣಾಗಿ ' ಪ್ರಭು, ನಾನು ನಿನ್ನವನು, ನನ್ನನ್ನು ರಕ್ಷಿಸು' ಎಂದರೆ ಅಂತಹ ಜೀವಿಯನ್ನು ಸಕಲಪ್ರಾಣಿಗಳಿಂದಲೂ ಅಭಯ ನೀಡುವೆನು. ಇದು ನನ್ನ ವ್ರತ. ರಾಮನ ಉದಾತ್ತತೆ ಇಲ್ಲಿ ಕಂಡಿದೆ. ಶತ್ರುವಿರಲಿ ವಂಚಕನಿರಲಿ ಅಪರಿಚಿತನಿರಲಿ ಶರಣಾದವನನ್ನು ಸಲಹುವುದು ಅವನ ಕರ್ತವ್ಯವೆಂದೇ ಭಾವಿಸಿದ್ದನು. ಶಿಬಿ ಯುಧಿಷ್ಠಿರ ಮುಂತಾದ ಮಹಾರಾಜರೂ ಸಹಿತ ಈ ವ್ರತವನ್ನು ಅನುಸರಿಸಿ ಕೃತಾರ್ಥರಾದರು. ಹಾಗಾಗಿ ಈಗ ವಿಭೀಷಣನನ್ನು ಬಿಡುವ ಮಾತೇ ಇಲ್ಲ. ಎಲ್ಲಾ ಭೂತಗಳಿಂದಲೂ ಅವನ ರಕ್ಷಣೆ ನನ್ನ ಹೊಣೆ._

*ಆನಯೈನಂ ಹರಿಶ್ರೇಷ್ಠ ದತ್ತಮಸ್ಯಾಭಯಂ ಮಯಾ ವಿಭೀಷಣೋ ವಾ ಸುಗ್ರೀವ ಯದಿ ವಾ ರಾವಣಃ ಸ್ವಯಮ್*

_ ಸುಗ್ರೀವ ವಿಭೀಷಣನನ್ನು ಕರೆ ತಾ. ಅವನ ಪ್ರಾಣಕ್ಕೆ ಯಾವ ಅಪಾಯವೂ ಎದುರಾಗದು. ವಿಭೀಷಣನೇನು, ರಾವಣನೇ ಶರಣಾದರೂ ನಾನು ಅಭಯ ನೀಡುವೆನು. ರಾಮನ ಉದಾರತೆ ಇಲ್ಲಿ ಕಾಣಸಿಗುತ್ತದೆ. ತನ್ನ ಮಡದಿಯನ್ನು ಅಪಹರಿಸಿ ತನಗೆ ದುಃಖ ಕೊಟ್ಟ ರಾವಣನಿಗೂ ಆಭಯ ಕೊಡುವ ಕ್ಷಮಾಗುಣ ಬೇರೆ ಯಾರಲ್ಲಿದ್ದೀತು! *ವಸುಧಾಯಾಃ ಕ್ಷಮಾಗುಣೈಃ* ಎಂಬ ವಾಲ್ಮೀಕಿಗಳ ಮಾತು ಇದನ್ನು ಕುರಿತೇ ಹೇಳಿದ್ದು. ಭೂಮಿಯು ಸಕಲರ ತಪ್ಪುಗಳನ್ನೂ ಮನ್ನಿಸುವಂತೆ ರಾಮನು ಶರಣಾದವರ ತಪ್ಪನ್ನು ಮನ್ನಿಸಿ ಆದರಿಸುವ ಕ್ಷಮಾಗುಣವನ್ನು ಹೊಂದಿದ್ದನು. ನಾವೂ ರಾಮನಂತೆ ಇತರರ ತಪ್ಪುಗಳನ್ನು ಕ್ಷಮಿಸುವ ಉದಾರತೆ ತೋರೋಣವೇ!_

http://shreenidhiabhyankar.blogspot.in/
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩