ಮಹಾಭಾರತ ೧೧
🍀📙🍀 ಮಹಾಭಾರತದ ಕೆಲವು ವಿಶೇಷ ವಿಷಯಗಳು 🍀📗☘ ಭಾಗ- 11
*ಕುಟೀಗತಾ ಸಾ ತ್ವನವೇಕ್ಷ್ಯ ... ಭುಂಕ್ತೇತಿ ಸಮೇತ್ಯ ಸರ್ವೇ ಪಶ್ಚಾತ್ತು ... ಕಷ್ಟಂ ಮಯಾ ಭಾಷಿತಮ್*
_ಪಾಂಡವರು ದ್ರೌಪದಿಯೊಡನೆ ಮನೆಗೆ ಬಂದು ಅಮ್ಮಾ ಭಿಕ್ಷೆ ತಂದೆವು ಎನ್ನುತ್ತಾರೆ. ಕುಟೀರದೊಳಗಿದ್ದ ಕುಂತಿ ನೋಡದೇ ಭಿಕ್ಷೆಯನ್ನು ಹಂಚಿ ತಿನ್ನಿರಿ ಎಂದು ಕಡೆಗೆ ನೋಡಿ ಕಷ್ಟವಾಯಿತೆಂದೆಣಿಸುತ್ತಾಳೆ._
_ಧರ್ಮಜನ ಧರ್ಮಜ್ಞಾನ ನಮಗಿಲ್ಲಿ ಕಾಣುತ್ತದೆ. ಕುಂತಿ ತಾನಾಡಿದ ಮಾತು ಸುಳ್ಳಾಗದಂತೆ ಅಧರ್ಮ ದ್ರೌಪದಿಗೆ ತಾಕದಂತೆ ಏನಾದರೂ ಪರಿಹಾರ ನೀನೇ ಹೇಳೆಂದು ಧರ್ಮಜನನ್ನು ಕೇಳುತ್ತಾಳೆ. ಧರ್ಮದ ಬಗ್ಗೆ ಅಮ್ಮನೇ ಮಗನ ಬಳಿ ಕೇಳುವ ಸನ್ನಿವೇಶ ನಿಜಕ್ಕೂ ಅದ್ಭುತ. ಯುಧಿಷ್ಠಿರನ ಧರ್ಮಭೀರುತ್ವ ಮತ್ತೆ ಕಾಣುತ್ತದೆ. ದ್ರೌಪದಿ ತ್ರಿಲೋಕ ಸುಂದರಿ ತನಗೆ ಸಿಕ್ಕಿದರೆ ತೊಂದರೆ ಇಲ್ಲ ಎಂಬ ಯಾವ ಭಾವನೆಯೂ ಇಲ್ಲದೆ ಅರ್ಜುನ ಗೆದ್ದವನು ನೀನು ನೀನೆ ವರಿಸು ಎಂದು ಆದೇಶಿಸುತ್ತಾನೆ._
*ತ್ವಯಾ ಜಿತಾ ಪಾಂಡವ.*
*... ಗೃಹಾಣ ಪಾಣಿಂ ವಿಧಿವತ್*
_ಗೆದ್ದವ ನೀನೆ, ಈಗಲೇ ಅಗ್ನಿ ಸ್ಥಾಪಿಸಿ ಕೈ ಹಿಡಿ ಎನ್ನುತ್ತಾನೆ. ಅರ್ಜುನ ಅದನ್ನು ಒಪ್ಪುವುದಿಲ್ಲ. *ಮಾ ಮಾಂ ನರೇಂದ್ರ ತ್ವಧರ್ಮಭಾಜಂ* ಎಂದೆಲ್ಲಾ ಹೇಳುತ್ತಾನೆ. ಜ್ಯೇಷ್ಠನಿಗೆ ಮದುವೆಯಾಗದೇ ಕನಿಷ್ಠನು ಮದುವೆಯಾಗುವುದು ಸರಿಯಲ್ಲ. ನನ್ನನ್ನು ಅಧರ್ಮಿಯಾಗಿಸದಿರು. ನೀನು ಮೊದಲು, ಅನಂತರ ಭೀಮ, ಹೀಗೆ ಮದುವೆಯಾಗಬೇಕೇ ಹೊರತು ನಾನು ಹೇಗೆ ಕೈ ಹಿಡಿಯಲಿ ಎಂದು ಅಣ್ಣನನ್ನೇ ಪ್ರಶ್ನಿಸುತ್ತಾನೆ. ಈಗ ನಿಜವಾಗಿ ಧರ್ಮಜನಿಗೆ ಚಿಂತೆ ಶುರುವಾಗುತ್ತದೆ. ಇಲ್ಲಿ ಮೂರು ವ್ಯಕ್ತಿತ್ವ ನಮಗೆ ಮಾದರಿ. ಕುಂತಿ ಸುಳ್ಳಾಡಲು ಸಹಿಸಳು. ತನ್ನ ಮಾತು ಸುಳ್ಳಾದರೆ ಲೋಕ ಏನಂದೀತು ಎಂಬ ಭಯ ಜಾಗೃತವಾಗಿದೆ. ಕ್ಷಣ ಕ್ಷಣಕ್ಕೂ ಉಸಿರಿನಂತೆ ಬಿಡದೆ ಸುಳ್ಳಾಡುವ ಅನಂತರ ಸಮರ್ಥಿಸಿಕೊಳ್ಳುವ ನಾವು ಕುಂತಿಯ ಆದರ್ಶ ಪಾಲಿಸುವೆವೇ! ಇನ್ನು ಧರ್ಮಜ ಸುಂದರಿ ಅಮ್ಮನ ಮಾತಿನಂತೆ ಸಿಕ್ಕಿದರೂ ಧರ್ಮದಂತೆ ತಮ್ಮನಿಗೆ ಕೊಡುವ ತ್ಯಾಗಿ. ಒಳ್ಳೆಯದೆಲ್ಲ ತನಗೇ ಸಿಗಬೇಕೆಂಬ ಮನಸ್ಥಿತಿಯ ನಮಗೆ ತ್ಯಾಗ ಬುದ್ಧಿ ಬಂದೀತೇ! ಮೂರನೆಯದಾಗಿ ಅರ್ಜುನ. ಅಣ್ಣನ ಮದುವೆಯಾಗದೇ ತಾನು ಹೇಗೆ ವರಿಸಲಿ? ಗೆದ್ದು ತಂದದ್ದು ಹೌದಾದರೂ ಧರ್ಮಕ್ಕೆ ಚ್ಯುತಿ ಬಂದರೆ ಅವಳು ಇಲ್ಲದಿದ್ದರೂ ಪರವಾಗಿಲ್ಲ ಎನ್ನುವ ಮನೋಭಾವ. ಜ್ಯೇಷ್ಠನು ಸ್ವಸ್ಥನಾಗಿದ್ದಾಗ ಅವನ ಪೂರ್ವದಲ್ಲಿ ಕನಿಷ್ಠನು ವಿವಾಹವಾಗುವುದು ಧರ್ಮಶಾಸ್ತ್ರಕ್ಕೆ ವಿರುದ್ಧ. ಧರ್ಮ ಮೀರದ ಅವನ ಆದರ್ಶ ಧರ್ಮವೆಂದರೆ ಅಯ್ಯೋ ಎನ್ನುವ ನಮಗೆ ಪಾಠವಾದೀತೇ!_
_ಈ ಸಮಯದಲ್ಲಿ ಮನ್ಮಥನು ದ್ರೌಪದಿಯ ಬಗೆಗೆ ಅವರೆಲ್ಲರಲ್ಲೂ ಪ್ರೀತಿ ಹುಟ್ಟವಂತೆ ಮಾಡುವನು. *ಸಂಪ್ಯಮಥ್ಯೇಂದ್ರಿಯಗ್ರಾಮಂ ಪ್ರಾದುರಾಸೀನ್ಮನೋಭವಃ* ಪಾಂಚಾಲಿಯ ಕಮನೀಯ ರೂಪ ಕಂಡು ಮರುಳಾದ ತಮ್ಮಂದಿರ ಭಾವ ಕಂಡ ಧರ್ಮಜನು ವ್ಯಾಸರ ಮಾತು ನೆನೆಸಿಕೊಂಡು ದ್ರೌಪದಿ ತಮಗೆಲ್ಲರಿಗೂ ಪತ್ನಿಯಾಗಲೆಂದನು. ಅವರ ನಡುವೆ ಪರಸ್ಪರ ಪ್ರೀತಿ ಗೌರವ ಅಗಾಧವಿತ್ತಾದ್ದರಿಂದ ಇದು ಎಲ್ಲರಿಗೂ ಸಮ್ಮತವಾಯಿತು. ಕಿರಿಯರ ಭಾವನೆಗೂ ಬೆಲೆ ಕೊಡುವ ಧರ್ಮಜನ ಉದಾತ್ತ ಮನೋಭಾವ ಕಲಿಯಲೇಬೇಕಾದ ಅಂಶ. ಬರೀ ಸ್ವಾರ್ಥ ಚಿಂತನೆ ಬಿಟ್ಟು ಪರರನ್ನೂ ಅರಿತು ನಡೆಯುವ ಗುಣ ಮಾದರಿ. ಹೀಗೆ ಮಹಾಭಾರತದ ಈ ಪ್ರಸಂಗ ನಮಗೆಲ್ಲಾ ಕಲಿಕೆಯ ಅಂಗ._
ಮುಂದುವರಿಯುತ್ತದೆ.
http://shreenidhiabhyankar.blogspot.in/
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ