ವೇದ-ಧರ್ಮ೩೬
📗🌾📙 ವೇದ-ಧರ್ಮ 📗🌾📙 ಭಾಗ-೩೬
~ವೇದಪ್ರಾಮಾಣ್ಯ~
_ವೇದ ಮಂತ್ರಗಳು ಪ್ರಮಾಣವೆನ್ನೋಣ. ಆದರೆ ವೇದದ ಆಧ್ಯಾತ್ಮಿಕ ವ್ಯಾಖ್ಯಾನ ರೂಪವಾದ ಬ್ರಾಹ್ಮಣದ ಮಂತ್ರಗಳು ಪರಸ್ಪರ ವಿರುದ್ಧವಾಗಿವೆ. ಹೇಗೆಂದರೆ- *ಜರ್ತಿಲಯವಾಗ್ವಾ ಜುಹುಯಾತ್ ಗವೀಧುಕಯವಾಗ್ವಾ ಜುಹುಯಾತ್* ಎಂಬಲ್ಲಿ ಕಾಡಿನ ಎಳ್ಳು ಅಥವಾ ಗೋಧಿಯಿಂದ ಯಾಗ ಮಾಡಬಹುದೆಂದು ಹೇಳಿ ಅನಂತರ ಇನ್ನೊಂದೆಡೆ *ಅನಾಹುತಿರ್ವೈ ಜರ್ತಿಲಾಶ್ಚ ಗವೀಧುಕಾಶ್ಚೇತಿ* ಎಂದು ಅವುಗಳ ಆಹುತಿಯನ್ನು ನಿಷೇಧಿಸಿದೆ. ಇದಕ್ಕುತ್ತರ ಹೀಗಿದೆ. *ನ ಹಿ ನಿಂದಾ ನಿಂದಿತುಂ ಪ್ರವೃತ್ತಾ ಅಪಿ ತು ನಿಂದಿತಾತ್ ಇತರತ್ ಸ್ತೋತುಮ್* ಒಂದನ್ನು ಒಳ್ಳೆಯದಲ್ಲ ಎಂದರೆ ಅದು ಅಷ್ಟು ಶ್ರೇಷ್ಠವಲ್ಲ ಎಂದೇ ಅರ್ಥ ಹೊರತು ನಿಷೇಧಿತ ಎಂದಲ್ಲ. ಪೂಜೆಯ ಸಮಯದಲ್ಲಿ ಮಾತನಾಡಬಾರದು ಎನ್ನುವ ನಿಯಮದಂತೆ ಇದೂ ಕೂಡ. ಪೂಜೆಗೆ ಸಂಬಂಧಿಸಿದ ಮಾತುಕತೆ ನಡೆಯುತ್ತದೆ. ಆದಷ್ಟು ಮಾತು ಕಡಿಮೆ ಇರಲಿ ಎಂಬುದಷ್ಟೇ ಉದ್ದೇಶ ಹೊರತು ಏನೂ ಮಾತನಾಡದೇ ಕ್ರಮ ಮೀರಿ ಎಂದಲ್ಲ.ಮಕ್ಕಳನ್ನು ತಾಯಿ ಉಳಿದ ಮಕ್ಕಳೆದುರು ನಿಂದಿಸಿದಾಗ ತಾಯಿಗೆ ತನ್ನ ಮಕ್ಕಳು ಒಳ್ಳೆಯದಾಗಿ ಓದಬೇಕೆಂಬ ತಾತ್ಪರ್ಯವಿರುವುದೇ ಹೊರತು ತನ್ನ ಮಕ್ಕಳು ಕೆಟ್ಟವರೆಂದಲ್ಲ. ಅದರಂತೆ ಇಲ್ಲೂ ಅರಣ್ಯದ ಎಳ್ಳು ಅಥವಾ ಕಾಡಿನ ಗೋಧಿ ಹೆಚ್ಚು ಪ್ರಶಸ್ತವಲ್ಲ. ಊರಿನ ಧಾನ್ಯ ಸಿಗದಿದ್ದಾಗ ಅದೂ ಸ್ವೀಕಾರ್ಯವೇ ಸರಿ. ಹೀಗಾಗಿ ಈ ವಾಕ್ಯಗಳು ಅರ್ಥವಾದ ರೂಪದಿಂದ ಪ್ರಮಾಣಗಳೇ ಸರಿ._
*ಆತ್ಮಾ ವಾ ಇದಮೇಕ ಏವಾಗ್ರೇ ಆಸೀತ್, ಅಸದ್ವಾ ಇದಮಗ್ರ ಆಸೀತ್* _ಎಂಬ ಎರಡು ವಿರುದ್ಧದ ಮಾತುಗಳು ಹೇಗೆ ಅನ್ವಯಿಸುತ್ತವೆ. ಏಕೆಂದರೆ ಸೃಷ್ಟಿಯ ಆದಿಯಲ್ಲಿ ಪರಮಾತ್ಮನೊಬ್ಬನೇ ಇರುವನೆಂದು ಮೊದಲ ಮಾತು ಹೇಳಿದರೆ, ಸೃಷ್ಟಿಗೆ ಮೊದಲು ಅಸತ್ ವಸ್ತು ಇತ್ತೆಂದು ಇನ್ನೊಂದು ಹೇಳುತ್ತದೆ. ಇದಕ್ಕೆ ಸಮಾಧಾನ ಅಸತ್ ಎಂಬ ಪದಕ್ಕೆ ಅವ್ಯಕ್ತ ಎಂದು ಅರ್ಥ ಗುರುತಿಸಿದಾಗ ಸರಿಯಾಗುವುದು. ಅವ್ಯಕ್ತನಾದ ಪರಮಾತ್ಮ ಇಂದೂ ಹಿಂದೂ ಮುಂದೂ ಇರುವನೆಂದು ವಿರೋಧ ಪರಿಹಾರವಾಗುವುದು._
*ವಿರೋಧೇ ವಿಕಲ್ಪಃ ಅವಿರೋಧೇ ಸಮುಚ್ಚಯಃ* _ಎಂಬ ಮೀಮಾಂಸಾ ವಾಕ್ಯದಂತೆ ಶ್ರುತಿ ವಾಕ್ಯಗಳಿಗೆ ವಿರೋಧ ಬಂದರೆ ಎರಡೂ ಸರಿ, ವಿರೋಧ ಬರದಿರೆ ಎರಡನ್ನೂ ಸೇರಿಸಿ ಅರ್ಥ ಮಾಡಿಕೊಳ್ಳಬಹುದು. ಇದರಂತೆ *ಸೋರೋದೀತ್ ಯದರೋದೀತ್ ತದ್ರುದ್ರಸ್ಯ ರುದ್ರತ್ವಂ* ಎಂಬಲ್ಲಿ ಅತ್ತಿದ್ದರಿಂದ ರುದ್ರ ಎಂಬ ವಿಷಯ ಕ್ರಿಯೆ ತಿಳಿಸದೇ ಕಾವ್ಯದಂತಿದೆಯಲ್ಲಾ ಎಂದರೆ ಇದರ ತಾತ್ಪರ್ಯ ಬೇರೆ ಇದೆ. ಯಜ್ಞದಲ್ಲಿ ಬೆಳ್ಳಿಯನ್ನು ದಕ್ಷಿಣೆಯನ್ನಾಗಿ ನೀಡಬಾರದು. ಬೆಳ್ಳಿಯೆಂಬುದು ರುದ್ರನ ಕಣ್ಣೀರು. ಬೆಳ್ಳಿಯನ್ನು ದಕ್ಷಿಣೆಯಾಗಿ ಕೊಟ್ಟರೆ ಯಜಮಾನನಿಗೆ ವರ್ಷದೊಳಗೆ ಅನಿಷ್ಟ ಉಂಟಾಗುವುದನ್ನು ಅನೇಕ ಮುಂದುವರಿದ ಮಂತ್ರಗಳ ಮೂಲಕ ಈ ಸಂದರ್ಭದಲ್ಲಿ ತಿಳಿಯುವುದು. ಹಾಗಾಗಿ ಕಾವ್ಯಾತ್ಮಕ ವಾಕ್ಯವೂ ವಿಧಿ ಅಥವಾ ನಿಷೇಧವನ್ನು ಸೂಚಿಸುತ್ತದೆ._
*ಅಥಾತಸ್ಸಮಯಾಚಾರಿಕಾನ್ ಧರ್ಮಾನ್ ವ್ಯಾಖ್ಯಾಸ್ಯಾಮಃ ಧರ್ಮಜ್ಞಸಮಯಃ ಪ್ರಮಾಣಮ್ ವೇದಾಶ್ಚ* _ಎಂಬ ಆಪಸ್ತಂಬ ಮುನಿಗಳ ಮಾತು ವೇದವೇ ಧರ್ಮಕ್ಕೆ ಪ್ರಮಾಣ ಎಂದಿದೆ. ಈ ಎಲ್ಲಾ ಕಾರಣಗಳಿಂದ ವೇದವನ್ನು ಪ್ರಮಾಣ ಎಂದು ಧಾರಾಳವಾಗಿ ಒಪ್ಪಬಹುದು._
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ