ರಾಮಾಯಣ ೧೯೦
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೦🏝📖
*ಯಥಾಮೃತಸ್ಯ ಸಂಪ್ರಾಪ್ತಿರ್ಯಥಾ ವರ್ಷಮನೂದಕೇ|ಯಥಾ ಸದೃಶದಾರೇಷು ಪುತ್ರಜನ್ಮಾಪ್ರಜಸ್ಯ ಚ ಪ್ರಣಷ್ಟಸ್ಯ ಯಥಾ ಲಾಭೋ ಯಥಾ ಹರ್ಷೋ ಮಹೋದಯೇ| ತಥೈವಾಗಮನಂ ಮನ್ಯೇ ಸ್ವಾಗತಂ ತೇ ಮಹಾಮುನೇ *
_ವಿಶ್ವಾಮಿತ್ರರ ಆಗಮನವಾಗಿ ಕುಶಲಪ್ರಶ್ನೆಗಳು ನಡೆದು ಅರ್ಘ್ಯಪಾದ್ಯಾದಿ ಅರ್ಪಿಸಿ ದಶರಥನು ನಿವೇದಿಸಿಕೊಳ್ಳುತ್ತಿದ್ದಾನೆ ಮಹರ್ಷಿಗಳ ಬಳಿ- ಜೀವನದಲ್ಲಿ ಒಮ್ಮೆಯೂ ಸಿಗಲು ಅಸಾಧ್ಯವೆನಿಸಿದ ಅಮೃತವು ಕಿಂಚಿತ್ತು ದೊರೆತರೆ ಯಾವ ಆನಂದ ಉಂಟಾಗುವುದೋ, ಮಳೆಯೇ ಬರದೇ ಬಹುಕಾಲ ಒಣಗಿದ್ದ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದರೆ ಹೇಗೆ ತಂಪೆನಿಸುವುದೋ, ಬಹುಕಾಲ ಮಕ್ಕಳಿಲ್ಲದೇ ಪರಿತಪಿಸುವವನಿಗೆ ಮಕ್ಕಳು ಹುಟ್ಟಿದರೆ ಹೇಗೆ ಸ್ವರ್ಗವೇ ಕೈಗೆಟುಕಿದಂತೆ ತೋರುವುದೋ, ಇನ್ನೆಂದೂ ಸಿಗದೆಂದು ಭಾವಿಸಿದ್ದ ಕಳೆದುಕೊಂಡ ವಸ್ತುವೊಂದು ಆಕಸ್ಮಿಕವಾಗಿ ದೊರೆತಾಗ ಆದ ಹರ್ಷದಂತೆ, ಕಷ್ಟವೆನಿಸಿದ ಕಾರ್ಯಗಳು ಸುಲಭವಾಗಿ ನೆರವೇರಿದಾಗ ಉಂಟಾದ ಮೋದದಂತೆ ತಮ್ಮ ಆಗಮನವು ನನ್ನಲ್ಲಿ ಆನಂದವನ್ನು ಉಂಟುಮಾಡಿದೆ. ವಿಶ್ವಾಮಿತ್ರರು ವಿಶ್ವವನ್ನೇ ತಮ್ಮ ಪ್ರೀತಿಯಿಂದ ಗೆದ್ದವರು. ಪರಾಕ್ರಮದಿಂದ ಅಥವಾ ಆಕ್ರಮಣಗಳಿಂದ ಗೆಲ್ಲುವುದಕ್ಕಿಂತ ಪ್ರೀತಿಯಿಂದ ಗೆಲ್ಲುವುದು ಕಷ್ಟ. ಕೌಶಿಕನಾಗಿದ್ದವರು ಇಂತಹ ವಿಶ್ವಬಂಧುತ್ವ ಗುಣದಿಂದ ವಿಶ್ವಾಮಿತ್ರರಾಗಿ ಸಾಮಾನ್ಯರೂ ಅಸಾಮಾನ್ಯರಾಗಬಹುದೆಂಬುದನ್ನು ಸಾಧನೆಯ ಮೂಲಕ ತೋರಿದವರು. ಅಂತಹ ಮಹಾಮಹಿಮರು ಕರೆದರೂ ಬಂದಾರೋ ಇಲ್ಲವೋ! ಕರೆಯದೆ ಮನೆಗೆ ಬಂದಾಗ ಅವರ ಮಹಿಮೆ ಅಥವಾ ಸಾಧನೆ ಅರಿತ ಯಾರಿಗಾದರೂ ಆಗುವ ಆನಂದ ಅಮಿತ. ಅದನ್ನೇ ಕವಿ ಆರು ದೃಷ್ಟಾಂತಗಳಿಂದ ವರ್ಣಿಸುತ್ತಿದ್ದಾನೆ. ಎಲ್ಲಾ ದೃಷ್ಟಾಂತಗಳೂ ಒಂದಕ್ಕಿಂತ ಒಂದು ಭಿನ್ನ. ಅವುಗಳ ಪರಿಣಾಮವೂ ಅಷ್ಟೇ ಅಪರೂಪ. ಅರಮನೆಗೆ ಮುನಿಗಳ ಆಗಮನ ಆಯಿತೆಂದರೆ ಇದು ಮುಂದೆ ಅನೇಕ ಲೋಕೋಪಕಾರಿ ಕಾರ್ಯಗಳಿಗೆ ನಾಂದಿ ಹಾಡಿತೆಂದೇ ಅರ್ಥ. ಹಾಗಾಗಿ ರಾಜನಿಗೆ ಅಷ್ಟು ಸಂತೋಷವಾಗಿದ್ದು._
*ಕಂಚ ತೇ ಪರಮಂ ಕಾಮಂ ಕರೋಮಿ ಕಿಮು ಹರ್ಷಿತಃ| ಪಾತ್ರಭೂತೋಸಿ ಬ್ರಹ್ಮನ್ದಿಷ್ಟ್ಯಾ ಪ್ರಾಪ್ತೋಸಿ ಕೌಶಿಕ||*
_ಗುರುಗಳೇ, ತಮಗೆ ಸ್ವಾಗತ. ತಾವು ಬಂದ ಕಾರ್ಯವೇನು? ಅದು ಯಾವುದಾದರೂ ಸರಿ, ತಮ್ಮ ಕಾರ್ಯವನ್ನು ನಿಶ್ಚಯವಾಗಿ ಮಾಡಿಕೊಡುವೆನು. ನನ್ನಿಂದ ಯಾವ ಸೇವೆಯನ್ನು ಬೇಕಾದರೂ ಸ್ವೀಕರಿಸಲು ತಾವು ಅರ್ಹರಿದ್ದೀರಿ. ನನ್ನ ಪೂರ್ವಪುಣ್ಯದಿಂದ ತಮ್ಮ ಆಗಮನವಾಯಿತೆಂದೇ ಭಾವಿಸುವೆ.ನನ್ನ ಜನ್ಮ ತಮ್ಮ ದರ್ಶನದಿಂದ ಸಾರ್ಥಕ ವಾಯಿತು. ಈಗ ನಮ್ಮ ಅರಮನೆಯೇ ತೀರ್ಥಕ್ಷೇತ್ರವಾಯಿತು. ದೊಡ್ಡ ಕ್ಷೇತ್ರಕ್ಕೆ ಯಾತ್ರೆ ಮಾಡಿದಂತೆಯೇ ಆಯಿತು. ಪಾಪವೆಲ್ಲವೂ ಕರಗಿಹೋಯಿತು. ಚಕ್ರವರ್ತಿ ಎನಿಸಿದ್ದರೂ ಮಹಾತ್ಮರು ಬಂದರೆಂದು ಅವರನ್ನು ಆದರಿಸಿದ ದಶರಥನ ವಿನಯ ಎಂತಹ ಮಾದರಿ. ತೀರ್ಥದ ಮಜ್ಜನವು ಹೇಗೆ ನಮ್ಮ ಅಘಗಳನ್ನು ತೊಳೆಯುವುದೋ ಮಹಾತ್ಮರ ದರ್ಶನ- ಸಂಭಾಷಣಗಳು ಇದನ್ನೇ ಸಾಧಿಸುತ್ತವೆ. ಹಾಗಾಗಿಯೇ ದಶರಥನು ಅಂದಿದ್ದು ಕ್ಷೇತ್ರ ಸಂದರ್ಶನ ಆದಂತೆ ಆಯಿತು ಎಂದು. ಬದುಕಿನುದ್ದಕ್ಕೂ ಕೆಲವೊಮ್ಮೆ ಕಾರಣಾಂತರಗಳಿಂದ ಮಹಾತ್ಮರ ಸಂತರ ಒಡನಾಟ ಸಿಗುವುದಿಲ್ಲ. ಸಿಕ್ಕಿತು ಎಂದರೆ ನಮ್ಮ ಪೂರ್ವಪುಣ್ಯದ ಫಲವೇ ಅದು. ಅಂತಹವರ ದರ್ಶನವೇ ನಮ್ಮ ಒಳ-ಹೊರಗನ್ನು ತೊಳೆದು ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯಬಲ್ಲದು. ವಿಶ್ವಾಮಿತ್ರರಾದರೋ ಭಗವಂತನನ್ನೇ ಕರೆದೊಯ್ಯಲು ಬಂದವರು. ಹಾಗಾದರೆ ಅವರ ಸಮ ಯಾರಿರುವರು ಪುಣ್ಯಾತ್ಮರು!_
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
*ಯಥಾಮೃತಸ್ಯ ಸಂಪ್ರಾಪ್ತಿರ್ಯಥಾ ವರ್ಷಮನೂದಕೇ|ಯಥಾ ಸದೃಶದಾರೇಷು ಪುತ್ರಜನ್ಮಾಪ್ರಜಸ್ಯ ಚ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ