ವಿಕ್ರಮೋರ್ವಶೀಯ೮

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-8

*आभरणस्याभरणं प्रसाधनविधेः प्रसाधनविशेषः। उपमानस्यापि सखे प्रत्युपमानं वपुस्तस्याः।।*

_ಕಾಳಿದಾಸನ ಸುಂದರ ಶ್ಲೋಕಗಳಲ್ಲಿ ಇದೂ ಒಂದು. ಪುರೂರವನು ಊರ್ವಶಿಯಲ್ಲೇ  ಮನವಿಟ್ಟಿದ್ದಾನೆ. ವಿದೂಷಕನು ಅವಳೇನು ಅಂತಹ ಸೌಂದರ್ಯವತಿಯೇ? ಎಂದು ಪ್ರಶ್ನಿಸಿದಾಗ ಒಂದೊಂದು ಅವಯವ ಸೊಗಸೆಂದರೆ ಅದು ಅವಳ ಸೌಂದರ್ಯಕ್ಕೆ ಅಪಚಾರ ಎನ್ನುತ್ತಾ ರಾಜ ಈ ಮಾತನ್ನು ಆಡುವನು. ಕೆಲವೊಂದು ಅವಯವಗಳಿಂದ ಸುಂದರಿಯರು ಬಹಳಷ್ಟು ಇದ್ದಾರೆ. ಆದರೆ ಒಟ್ಟಂದದ ಸೌಂದರ್ಯ ಕಾಣಸಿಗುವುದು ಅಪರೂಪ. ಹಾಗಾಗಿಯೇ ಈ ರೂಪ ನನ್ನನ್ನು ಅಪಹರಿಸಿದೆ ಎಂದು ಅವಳ ಸೊಗಸಿನ ಬಗೆಗೆ ಈ ಮಾತು. ಅವಳು ಲೋಕದಲ್ಲಿ ಎಂತಹ ವಿಶಿಷ್ಟವಾದ ರೂಪವರ್ಧಕ ಆಕರ್ಷಕ ಆಭರಣಗಳಿವೆಯೋ ಅವೆಲ್ಲಕ್ಕೂ ಮಿಗಿಲು. ಅಂತಹ ಆಭರಣಗಳನ್ನು ಇವಳು ಧರಿಸಿ ಅವುಗಳ ಮೆರುಗು ಹೆಚ್ಚಾಗಬಹುದೇ ಹೊರತು ಆಭರಣಗಳಿಂದ ಇವಳದಲ್ಲ. ಎಲ್ಲಾ ಆಭರಣಗಳಿಗಿಂತಲೂ ಒಂದು ತೂಕ ಹೆಚ್ಚಿನ ಮನೋಹರ ರೂಪ ಇವಳದು. ಸ್ತ್ರೀಯರ ಪ್ರಸಾಧನ ಸಾಮಗ್ರಿಗಳು ಏನೇನು ಇವೆಯೋ ಅವೆಲ್ಲವನ್ನೂ ಮೀರಿಸಿದ ಸಹಜ ಸೌಂದರ್ಯ ಇವಳ ಕಾಯದಲ್ಲಿದೆ.‌ಕಾಡಿಗೆ-ಗಂಧ,ಚಂದನ-ಮೂಗುತಿ-ಕಾಲ್ಗೆಜ್ಜೆ-ಕಿವಿಯೋಲೆ-ಬಳೆ-ಡಾಬು-ರತ್ನಹಾರ-ಉಂಗುರ-ಬಣ್ಣಗಳು-ನಾನಾ ಲೇಪನಗಳು ಹೀಗೆ ಅಲಂಕಾರ ಮಾಡಿಕೊಳ್ಳಲು ಇರುವ ಸಕಲ ಸಾಮಗ್ರಿಗಳೂ ಇವಳ ಸೌಂದರ್ಯದ ಇದಿರು ಸಪ್ಪೆ ಎನಿಸುತ್ತವೆ. ಇವಳ ರೂಪವೇ ಅಲಂಕಾರ ಸಾಮಗ್ರಗಳಿಗೆ ವಿಶೇಷ ಮಾದರಿ. ಇದೆಲ್ಲಾ ಇರಲಿ, ಯಾರಿಗೆ ಇವಳನ್ನು ಹೋಲಿಸಬಹುದು! ಚಂದ್ರನಿಗೋ-ತಾವರೆಗೋ-ನೈದಿಲೆಗೋ-ಸಂಪಿಗೆಗೋ ಎಂದರೆ ಸಾಧ್ಯವಿಲ್ಲ. ಇವಳಿಗೆ ಇವಳೇ ಉಪಮೆ. ಇವಳ ಸೌಂದರ್ಯ ಮೀರಿಸುವ ಸೊಬಗು ಇನ್ನೆಲ್ಲಿದೆ! ಭಗವಂತನ ಊರುಜಾತೆಯಾದ ಇವಳ ತನುವಿನ  ಬಣ್ಣನೆ ಪದಗಳಿಗೆ ನಿಲುಕುವಂತಹುದಲ್ಲ. ಅದೇನಿದ್ದರೂ ನೋಡಿಯೇ ಆನಂದಿಸಬೇಕು. ಕವಿ ಇಲ್ಲಿ ಪುರೂರವನಂತಹ ರಾಜರ್ಷಿ ಮರುಳಾಗಲು ಪ್ರಬಲ ಕಾರಣವೊಂದನ್ನು ಊರ್ವಶಿಯೆನ್ನುವುದನ್ನು ಸೂಚ್ಯವಾಗಿ ಹೇಳಿದ್ದಾನೆ. ಅನನ್ವಯ ಅಲಂಕಾರದ ಮೂಲಕ ಊರ್ವಶಿಗೆ ಊರ್ವಶಿಯೇ ಸಾಟಿ ಎಂಬುದನ್ನು ಬಾರಿ ಬಾರಿ ಸಾರಿದ್ದಾನೆ._

ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.

http://shreenidhiabhyankar.blogspot.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩