ರಾಮಾಯಣ ೧೯೫
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೫🏝📖
*ಯದಾ ಸ್ವಯಂ ನ ಯಜ್ಞಸ್ಯ ವಿಘ್ನಕರ್ತಾ ಮಹಾಬಲಃ | ತೇನ ಸಂಚೋದಿತೌ ದ್ವೌ ತು ರಾಕ್ಷಸೌ ಸುಮಹಾಬಲೌ||*
_ವಿಶ್ವಾಮಿತ್ರರ ಮಾತು. ಯಾರವರು ನಿಮಗೆ ತೊಂದರೆ ನೀಡುತ್ತಿರುವವರು ಎಂಬ ದಶರಥನ ಪ್ರಶ್ನೆಗೆ ಹೇಳುತ್ತಿದ್ದಾರೆ-ರಾವಣನೆಂಬ ಲೋಕೈಕವೀರನು ನೇರವಾಗಿ ತಾನು ಯಜ್ಞಕ್ಕೆ ವಿಘ್ನ ತರದೇ ತನ್ನ ಅನುಚರರ ಮೂಲಕ ತೊಂದರೆ ಕೊಡುತ್ತಿರುವನು. ರಾವಣನಿಗೆ ನಿಜಕ್ಕಾದರೆ ವಿಶ್ವಾಮಿತ್ರರಿಂದ ಯಾವ ತೊಂದರೆಯೂ ಇಲ್ಲ. ವಿಶ್ವಾಮಿತ್ರರು ಲೋಕ ಸದಾ ಸುಭಿಕ್ಷವಾಗಿರಲಿ ಎಂದು ಬಯಸುವವರು. ಯಾರಿಗೂ ಕೇಡನ್ನು ಬಯಸದ ತಪಸ್ವಿ. ಅಂತಹ ಋಷಿಗಳ ತಪಸ್ಸು ಕೆಡಿಸುವ ಕುಕೃತ್ಯವೇ ರಾವಣನನ್ನು ಕೊಲ್ಲಲು ಪ್ರಮುಖ ಕಾರಣ. ಅನೇಕರ ಆಕ್ಷೇಪಕ್ಕೆ ವಾಲ್ಮೀಕಿಗಳು ಅಲ್ಲಲ್ಲಿ ರಾವಣನ ದುಷ್ಕೃತ್ಯಗಳನ್ನು ವರ್ಣಿಸುತ್ತಾ ಹೋಗಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಮ ಕೇವಲ ಸೀತೆಗಾಗಿ ಅಲ್ಲದೆ ಸೀತೆಗೆ ಜನ್ಮ ನೀಡಿದ ಭೂತಾಯಿಯ ಉದ್ಧಾರಕ್ಕಾಗಿಯೂ ರಾವಣನಂತಹ ಕಟುಕರನ್ನು ಕೊಂದದ್ದು. ಲೋಕಕ್ಕೆ ಒಳಿತನ್ನು ಬಯಸುವ ಎಲ್ಲರ ಕ್ಷೇಮ ಬಯಸುವ ತನ್ನ ಆಳ್ವಿಕೆಗೆ ಕಿಂಚಿತ್ತೂ ಭಂಗ ಬರದ ಅಥವಾ ಸಂಬಂಧಪಡದ ವಿಶ್ವಾಮಿತ್ರರ ಯಜ್ಞಕ್ಕೆ ವಿಘ್ನ ತರುವ ಅವನ ಮನಸ್ಥಿತಿ ಎಷ್ಟು ದುಷ್ಟವಿದ್ದೀತು! ತಮ್ಮ ದೇಶಕ್ಕೆ ಸಂಬಂಧಿಸದ ವಿಷಯದಲ್ಲಿ ಮತ್ತೊಂದು ದೇಶ ತಲೆ ಹಾಕಿದರೆ ಈಗಿನ ಕಾಲದಲ್ಲಿ ಯುದ್ಧ. ಹಿಂದೆಯೂ ಅದೇ ರೀತಿ._
*ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ|| ಸ ಹಿ ವೀರ್ಯವತಾಂ ವೀರ್ಯಮಾದತ್ತೇ ಯುಧಿ ರಾಕ್ಷಸಃ|*
_ದಶರಥನ ಮಾತು.ಗುರುಗಳೇ ಕ್ಷಮಿಸಿ, ರಾವಣನಂತಹ ವೀರನನ್ನು ದೇವತೆಗಳು, ಕಶ್ಯಪರ ಮಕ್ಕಳಾದ ದಾನವರು, ಗಂಧರ್ವರು, ಯಕ್ಷರು, ಗರುಡಾದಿ ಪಕ್ಷಿಗಳು, ನಾಗಗಳು ಇವರೇ ಎದುರಿಸಲು ಅಸಾಧ್ಯವೆನಿಸಿದ ಈ ರಾವಣನನ್ನು ನನ್ನ ಬಾಲರಾಮ ಎದುರಿಸಿಯಾನೇ! ವೀರ್ಯವಂತರ ಶಕ್ತಿಯನ್ನೆಲ್ಲ ಯುದ್ಧದಲ್ಲಿ ನುಂಗಿ ಬಿಡುವ ದೊಡ್ಡ ಗ್ರಹವದು. ಅವನ ಜೊತೆಗಾರರಲ್ಲಿ ಆಗಲಿ ಅವನಲ್ಲಾಗಲೀ ಸುಂದ- ಉಪಸುಂದರಂತೆ ಮೃತ್ಯುವಿನ ರೂಪದಲ್ಲಿ ಇರುವ ಮಾರೀಚ- ಸುಬಾಹುವಿರೊಡನೆ ನಾನೇ ಯುದ್ಧ ಮಾಡಲು ಅಸಮರ್ಥ.ಅಂತಹುದರಲ್ಲಿ ಈ ಬಾಲನನ್ನು ಹೇಗೆ ಆ ಕಾಲನಿಗೆ ಬಲಿಕೊಡಲಿ? ಅವರಲ್ಲಿ ಒಬ್ಬನ ಜೊತೆ ಬೇಕಾದರೆ ನಾ ಬಂದು ಸೆಣಸಬಲ್ಲೆ ಆದರೆ ನನ್ನ ರಾಮನ ಎಂದಿಗೂ ಕಳಿಸಲೊಲ್ಲೆ ಮುನಿವರ್ಯ. ಹೀಗೆ ದಶರಥನು ಅನೇಕ ಬಗೆಯಲ್ಲಿ ಮುನಿಗಳ ಬಳಿ ನಿವೇದಿಸಿಕೊಂಡನು. ದಶರಥನು ಸಾಮಾನ್ಯನಲ್ಲ. ದೇವಾಸುರ ಸಂಗ್ರಾಮದಲ್ಲಿ ದೇವಸೈನ್ಯಕ್ಕೆ ಸಹಕಾರ ಇತ್ತ ಮಹಾರಥಿ. ಬಹುಶಃ ರಾವಣಮ ಪರಾಕ್ರಮದ ಕಥೆಯೇ ಜನಜನಿತವಾಗಿ ದುಷ್ಟರ ಕಥೆಗಳು ಮತ್ತೆ ಮತ್ತೆ ಕಿವಿಗಪ್ಪಳಿಸಿ ಭಯ ಮೂಡಿಸಿಬಿಟ್ಟಿದೆ. ಕೆಲವೊಮ್ಮೆ ಪ್ರತ್ಯಕ್ಷ ನೋಡದಿದ್ದರೂ ಅನೇಕ ಘಟನೆಗಳನ್ನು ಕೇಳಿಯೇ ನಾವು ಭೀತರಾಗುತ್ತೇವೆ. ನಾಲ್ಕು ಮನೆಗಳಲ್ಲಿ ಕಳ್ಳತನವಾದಾಗ ನಮ್ಮ ಮನೆಯನ್ನು ಭದ್ರ ಮಾಡುತ್ತೇವೆ. ಇಲ್ಲೂ ದಶರಥನ ಮನಸ್ಥಿತಿ ಹಾಗೆಯೇ ಇದೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ