ರಾಮಾಯಣ ೧೯೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೨🏝📖!

*ಯದಿ ತೇ ಧರ್ಮಲಾಭಂ ಚ ಯಶಶ್ಚ ಪರಮಂ ಭುವಿ | ಸ್ಥಿರಮಿಚ್ಛಸಿ ರಾಜೇಂದ್ರ ರಾಮಂ ಮೇ ದಾತುಮರ್ಹಸಿ||*

_ವಿಶ್ವಾಮಿತ್ರರು ಮುಂದುವರಿದು ರಾಜನಿಗೆ ನುಡಿಯುತ್ತಿದ್ದಾರೆ. ರಾಮನೆದುರು ನಿಲ್ಲಲು ಆ ಪಾಪಿಗಳಿಗೆ ಎಳ್ಳಷ್ಟೂ ಸಾಧ್ಯವಿಲ್ಲ. ಕಾಲನ ಕರೆಗೆ ಓಗೊಟ್ಟು ಅವರೀಗಲೇ ರಾಮನಿಂದ ಹತರಾದರೆಂದು ಭಾವಿಸು. ಮಕ್ಕಳೆಂಬ ವ್ಯಾಮೋಹ ಬಿಟ್ಟು ಮಕ್ಕಳ ಸಾಮರ್ಥ್ಯ ಎಂತಹದು ಎಂಬುದನ್ನು ಯೋಚಿಸು. ನಿನಗೆ ಧರ್ಮವನ್ನು ಸ್ಥಿರಗೊಳಿಸಿದ ಕೀರ್ತಿ ಹಾಗೂ ಪ್ರಪಂಚದಲ್ಲಿ ಅತ್ಯುತ್ಕೃಷ್ಟವಾದ ಯಶಸ್ಸು ಪಡೆಯಬೇಕೆಂಬ ಬಯಕೆ ಇದ್ದರೆ ರಾಮನನ್ನು ಕಳಿಸಿಕೊಡು. ಮುಂದೆ ಕೃಷ್ಣನು ಗೀತೆಯಲ್ಲಿ ಇದೇ ಮಾತನ್ನು ಭಿನ್ನವಾಗಿ ನುಡಿಯುತ್ತಾನೆ. ಅರ್ಜುನ ನಿನ್ನೆದುರು ನಿಂತ ಯೋಧರೆಲ್ಲರೂ ನನ್ನ ಬಾಯೊಳಗೆ ಸೇರಿ ಹತರಾಗಿದ್ದಾರೆ ಎಂದು ವಿಶ್ವರೂಪ ತೋರಿ ನುಡಿಯುವನು. ಇಲ್ಲಿ ವಿಶ್ವಾಮಿತ್ರರು ಅದೇ ಅರ್ಥ ಬರುವಂತೆ ಭಗವಂತನ ಅವತಾರಿಯಾದ ರಾಮನ ಕೈಯಲ್ಲಿ ಈಗಾಗಲೇ ಅಳಿದಿದ್ದಾರೆ ಎಂದು ಭಾವಿಸು ಎನ್ನುತ್ತಾರೆ. ಸಂಕಲ್ಪ ಮಾತ್ರದಿಂದ ಸರ್ವವನ್ನೂ ನುಂಗಬಲ್ಲ ಅವನ ಮಹಿಮೆ ಯೋಗಿಗಳಿಗೆ ಮಾತ್ರ ತಿಳಿಯಬಲ್ಲದು. ಇಲ್ಲಿ ನೆರೆದಿರುವ ವಸಿಷ್ಠ, ವಾಮದೇವಾದಿ ಮಹರ್ಷಿಗಳೂ ಅವನ ಶಕ್ತಿಯನ್ನು ಬಲ್ಲರು. ವಿಶ್ವಾಮಿತ್ರರು ರಾಜನೊಡನೆ ನಡೆಸಿದ ಸಂಭಾಷಣೆ ಬಹಳ ಸೊಗಸಾಗಿದೆ. ತಾನೊಬ್ಬ ಬ್ರಹ್ಮರ್ಷಿ ಅಥವಾ ಸರ್ವಸಮರ್ಥ ಇತ್ಯಾದಿ ಯಾವುದನ್ನೂ ತೋರಗೊಡದೆ ಯಾವ ಕಾರಣದಿಂದ ತಾನು ಇವರನ್ನೇ ಅಪೇಕ್ಷಿಸುವೆ ಹಾಗೂ ನಿನಗೆ ಇದರಿಂದ ಉಂಟಾಗುವ ಪ್ರಯೋಜನಗಳು ಏನೇನು ಎಂದು ಸಹಜವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಎಷ್ಟು ಎತ್ತರಕ್ಕೇರಿದರೂ ಅಹಂಕಾರ-ಮದ ತೋರದೇ ಸಹಜವಾಗಿ ವ್ಯವಹರಿಸುವುದು ಮಹರ್ಷಿಗಳಿಗೆ ಮಾತ್ರ ಸಾಧ್ಯವಾಗುವ ಸಂಗತಿ ಇರಬಹುದು._

*ಅಭಿಪ್ರೇತಮಸಂಸಕ್ತಮಾತ್ಮಜಂ ದಾತುಮರ್ಹಸಿ| ದಶರಾತ್ರಂ ಹಿ ಯಜ್ಞಸ್ಯ ರಾಮಂ ರಾಜೀವಲೋಚನಮ್||*

_ರಾಜನೇ, ನಿನ್ನ ಮಂತ್ರಿಪ್ರಮುಖರನ್ನೂ, ವಸಿಷ್ಠಾದಿ ಪುರೋಹಿತರನ್ನೂ ಏಕಾಂತದಲ್ಲಿ ಕರೆದು ಸಮಾಲೋಚಿಸಿ ಅವರು ಒಪ್ಪಿದಲ್ಲಿ ನನ್ನೊಡನೆ ಕಳುಹಿಸು. ರಾಮನ ಸಾಂಗತ್ಯವನ್ನು ನಾನು ಬಯಸುತ್ತಿದ್ದೇನೆ. ಅಲ್ಲದೇ ನಿನ್ನನ್ನು ಇಡೀ ದಿನ ಅವನೇನು ಹಚ್ಚಿಕೊಂಡಿಲ್ಲ. ಕೇವಲ ನನ್ನ ಯಜ್ಞ ನಡೆಯುವ ಹತ್ತು ದಿನ ನನ್ನೊಡನೆ ಕಳಿಸು. ಯಜ್ಞ ಮಾಡುವ ಮುಹೂರ್ತ ಅತ್ಯಂತ ಸಮೀಪದಲ್ಲಿದೆ. ಅದು ಮೀರದಂತೆ ಕಳಿಸಿದರೆ ನಿನಗೆ ಮಂಗಳವಾಗುವುದು.‌ ಶ್ರೇಯಸ್ಸನ್ನು ತರುವ ಕಾರ್ಯದಲ್ಲಿ ಹಿಂಜರಿಕೆ ತೋರುವುದು, ದುಃಖ ಪಡುವುದು ಸಲ್ಲದು. ಈ ಕಡೇ ಮಾತು ಬಹುಶಃ ಕವಿ ನಮ್ಮನ್ನು ಉದ್ದೇಶಿಸಿಯೇ ನುಡಿದದ್ದು. ಒಂದು ಒಳ್ಳೆಯ ಕೆಲಸ ದಾನವೋ, ಪೂಜೆಯೋ, ಯಜ್ಞವೋ, ಅಧ್ಯಯನವೋ, ಸಮಾಜಮುಖಿ ಕಾರ್ಯವೋ ಮಾಡಲು ಅವಕಾಶ ದೊರೆತಾಗ ಮನಃಪೂರ್ವಕವಾಗಿ ಮಾಡಿದರೆ ನಿಸ್ಸಂಶಯವಾಗಿ ಯಶಸ್ಸು ದೊರಕುವುದು. ಅದರಲ್ಲಿ ಹೀಗಾದರೆ ಹಾಗಾದರೆ ಎಂಬ ದ್ವಂದ್ವವೋ, ಅನಾದರವೋ, ಅಪನಂಬಿಕೆಯೋ ತೋರಿದರೆ ಮತ್ತೆ ಯಶಸ್ಸೆಂಬ ನೀರು ನಮ್ಮ ದಾಹವನ್ನು ತಣಿಸಲಾರದು. ಹಾಗಾಗಿ ಅವಕಾಶ ಅರಸಿ ಬಂದಾಗ ಎರಡೂ ಕೈಗಳಿಂದ ಬಾಚಿ ಪೂರ್ಣ ತೊಡಗಿಸಿಕೊಳ್ಳುವುದು ಉತ್ತಮರ ನಡೆ. ಅದನ್ನು ನೀನು ಅನುಸರಿಸಿಲು ಎಂಬುದು ಮುನಿಯ ಭಾವ._



ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩