ರಾಮಾಯಣ ೧೯೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೪🏝📖

*ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ | ನ ಶಕ್ತಾ ರಾವಣಂ ಸೋಢುಂ ಕಿಂ ಪುನರ್ಮಾನವಾ ಯುಧಿ|| ಸ ಹಿ ವೀರ್ಯವತಾಂ ವೀರ್ಯಮಾದತ್ತೇ ಯುಧಿ ರಾಕ್ಷಸಃ|*

_ಮಹಾನುಭಾವರೇ, ದೇವ-ದಾನವ-ಗಂಧರ್ವರಿಂದಲೂ ಎದುರಿಸಲು ಅಸಾಧ್ಯವಾದ ಪರಾಕ್ರಮಿ ರಾವಣ. ಅವನ ಆಜ್ಞೆಯ ಮೇರೆಗೆ ವಿಘ್ನ ಉಂಟುಮಾಡುತ್ತಿರುವ ಮಾರೀಚ ಸುಬಾಹುಗಳೂ ಮಹಾ ಪರಾಕ್ರಮಿಗಳು. ನಾನೂ ಸಹ ಇವರನ್ನು ಎದುರಿಸಲು ಸಮರ್ಥನಲ್ಲ. ರಾವಣನಂತೂ ತನ್ನೆದುರು ಯುದ್ಧ ಮಾಡುವವರ ಪರಾಕ್ರಮವನ್ನೇ ಧ್ವಂಸ ಮಾಡುವ ಸಾಮರ್ಥ್ಯ ಉಳ್ಳವನು. ನಾನು ಸಸೈನ್ಯನಾಗಿ ಬಂದರೂ ಅವರನ್ನು ಎದುರಿಸಲಾರೆ. ಅಂತಹುದರಲ್ಲಿ ಯುದ್ಧ ಮಾಡಿ ಗೊತ್ತಿಲ್ಲದ ಬಾಲ ರಾಮನನ್ನು ಖಂಡಿತವಾಗಿಯೂ ಕಳುಹಿಸಲಾರೆ. ದಯವಿಟ್ಟು ಇಂತಹ ಕೋರಿಕೆಯನ್ನು ಮುಂದಿಡಬೇಡಿ ಎನ್ನುವನು ದಶರಥ. ರಾವಣನ ಹಾಗೂ ಮಾರೀಚ-ಸುಬಾಹುಗಳ ಪರಾಕ್ರಮ ಬಹುಶಃ ದಶರಥನ ಕಾಲದಲ್ಲೇ ಪ್ರಸಿದ್ಧವಾಗಿತ್ತು. ದಶರಥನಂತಹ ದೇವತೆಗಳಿಗೂ ಯುದ್ಧದಲ್ಲಿ ಸಹಕರಿಸಿದ ವೀರನು ಹೀಗೆ ನುಡಿಯುವುದನ್ನು ನೋಡಿದರೆ ರಾವಣನ ಖ್ಯಾತಿ ಹಾಗೂ ಪರಾಕ್ರಮದ ಎತ್ತರ ಎರಡೂ ಅರಿವಾಗುತ್ತದೆ. ಅದರಲ್ಲೂ ಮಾರೀಚ ಸುಬಾಹುಗಳಲ್ಲಿ ಒಬ್ಬನೊಡನೆ ಬೇಕಾದರೆ ನಾನು ಹೋರಾಡಬಲ್ಲೆ, ಇಬ್ಬರೂ ಸೇರಿ ಬಂದರೆ ಅವರನ್ನೂ ಎದುರಿಸಲಾರೆ ಎಂಬ ದಶರಥನ ಹೆದರಿಕೆ ಬಹುಶಃ ಮಾಯಾಯುದ್ಧದ ಕುರಿತಾಗಿದ್ದಿರಬಹುದು._

*ಪೂರ್ವಮರ್ಥಂ ಪ್ರತಿಶ್ರುತ್ಯ ಪ್ರತಿಜ್ಞಾಂ ಹಾತುಮಿಚ್ಛಸಿ| ರಾಘವಾಣಾಮಯುಕ್ತೋಯಂ ಕುಲಸ್ಯಾಸ್ಯ ವಿಪರ್ಯಯಃ||*

_ದಶರಥನ ಮಾತಿನಿಂದ ಕೋಪಗೊಂಡ ವಿಶ್ವಾಮಿತ್ರರ ನುಡಿ ಇದು- ರಾಜನೇ, ಹಿಂದೆ ಯಾವ ಕಾರ್ಯವನ್ನಾದರೂ ಮಾಡಿಕೊಡುವೆನೆಂದು ಮಾತುಕೊಟ್ಟು ಈಗ ನಿನ್ನ ಪ್ರತಿಜ್ಞೆಯನ್ನೇ ಮುರಿದುಬಿಡುತ್ತಿರುವೆ.ರಘುವಂಶದಲ್ಲಿ ಜನಿಸಿದ ಸತ್ಯವಂತರಿಗೆ ಇದು ಭೂಷಣವಲ್ಲ. ರಘು ಅಜ ದಿಲೀಪ ಭಗೀರಥ ಮೊದಲಾದ ಮಹಾತ್ಮರು ತಮ್ಮ ಸತ್ಯವಾಕ್ಯದಿಂದಲೇ ಲೋಕದಲ್ಲಿ ಖ್ಯಾತರಾದವರು. ನೀನಾದರೋ ಕ್ಷಣದ ಹಿಂದೆ ಕೊಟ್ಟ ಮಾತಿಗೆ ಬದ್ಧನಾಗದೇ ಕುಲದ ಗೌರವವನ್ನು ಹಾಳುಮಾಡುತ್ತಿರುವೆ.ಇದೇ ಏನು ಸೂರ್ಯಕುಲದವರ ವರ್ತನೆ! ರಾಜನೇ ಕೊಟ್ಟ ಮಾತಿಗೆ ಎಂದೂ ತಪ್ಪದಿರು.‌ಇದು ನಿನಗೂ ನಿನ್ನ ವಂಶಕ್ಕೂ ಶ್ರೇಯಸ್ಕರವಲ್ಲ. ಹಿಂದಿನ ಕಾಲದಲ್ಲಿ ಮಾತಿಗೆ ಎಷ್ಟು ಮಹತ್ವ ಕೊಡುತ್ತಿದ್ದರು ಎಂಬ ಅರಿವು ನಮಗೆ ಇದರಿಂದಾಗಿ ತಿಳಿಯುತ್ತದೆ. ಒಮ್ಮೆ ಏನಾದರೂ ಹೇಳಿದರೆ ಆ ಮಾತಿಗೆ ಎಂದೆಂದಿಗೂ ಬದ್ಧನಾಗಿರುವುದು ವಾಙ್ ನಿಯಮ ಎಂದು ಕರೆಸಿಕೊಳ್ಳುತ್ತದೆ. ಹಾಗಾಗಿಯೇ ಸುಮ್ಮನೇ ಮಾತು ಆಡುವುದೂ ಕೂಡ ಸಲ್ಲದು. ಆಡಿದ ಮೇಲೆ ಅದಕ್ಕೆ ಬದ್ಧತೆಯೂ ಅವಶ್ಯ.ಇದನ್ನೇ ವಿಶ್ವಾಮಿತ್ರರು ನೆನಪಿಸುತ್ತಿದ್ದಾರೆ._

 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩