ರಾಮಾಯಣ ೧೫೩
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೩🏝📖
*ನಾಕುಂಡಲೀ ನಾಮುಕುಟೀ ನಾಸ್ರಗ್ವೀ ನಾಲ್ಪಭೋಗವಾನ್ | ನಾಮೃಷ್ಟೋ ನಾನುಲಿಪ್ತಾಂಗೋ ನಾಸುಗಂಧಶ್ಚ ವಿದ್ಯತೇ || ನಾಮೃಷ್ಟಭೋಜೀ ನಾದಾತಾ ನಾಪ್ಯನಂಗದನಿಷ್ಕಧೃಕ್ | ನಾಹಸ್ತಾಭರಣೋ ವಾಪಿ ದೃಶ್ಯತೇ ನಾಪ್ಯನಾತ್ಮವಾನ್ ||*
_ಅಯೋಧ್ಯೆಯಲ್ಲಿ ಜನರ ಬದುಕು ಹೇಗಿತ್ತೆಂಬ ವರ್ಣನೆ ಆರನೇ ಸರ್ಗದಲ್ಲಿ ಮುಂದುವರೆಯುತ್ತದೆ. ಹಿಂದಿನ ಜನಗಳಲ್ಲಿ ಅಲಂಕಾರಪ್ರಿಯತೆ, ಜೀವನೋತ್ಸಾಹ, ಜೀವನಪ್ರೀತಿ ಎಷ್ಟಿತ್ತು ಎಂಬುದು ಇವುಗಳಿಂದ ತಿಳಿದುಬರುತ್ತದೆ. ಎಲ್ಲರೂ ಕರ್ಣಕುಂಡಲಧಾರಿಗಳಾಗಿ, ಶಿರಸ್ತ್ರಾಣಗಳನ್ನೂ ( ಟೊಪ್ಪಿಗೆ, ಮುಂಡಾಸು, ಕಿರೀಟ ಮೊದಲಾದವು) ರತ್ನಹಾರಗಳನ್ನೂ ಧರಿಸುತ್ತಿದ್ದರು. ತುಂಬಾ ಬಡತನ ಎಂಬ ಪದವೇ ಅಯೋಧ್ಯೆಯಲ್ಲಿ ಕೇಳಿಸುತ್ತಿರಲಿಲ್ಲ. ತಮ್ಮ ಅಭಿಲಾಷೆಯನ್ನು ಪೂರ್ಣಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಯಾರೂ ಸುಳ್ಳಾಡುತ್ತಿರಲಿಲ್ಲ. ಮೈಗೆ ಚಂದನ- ಶ್ರೀಗಂಧ ಮೊದಲಾದವನ್ನು ಪೂಸಿಕೊಂಡು ಸದಾ ನವಯೌವ್ವನಿಗಳಂತೆ ಕಂಗೊಳಿಸುತ್ತಿದ್ದರು. ಕಾಲಕಾಲಕ್ಕೆ ಅಭ್ಯಂಗವನ್ನು ( ಎಣ್ಣೆ ಹಚ್ಚಿ ದೀರ್ಘ ಸ್ನಾನ) ಮಾಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅವರ ದೇಹಗಳಲ್ಲಿ ದುರ್ಗಂಧದ ಛಾಯೆ ಎಂದಿಗೂ ಕಂಡು ಬರುತ್ತಿರಲಿಲ್ಲ. ಎಲ್ಲರೂ ಮೃಷ್ಟಾನ್ನಭೋಜನ ಮಾಡುತ್ತಿದ್ದರು. ( ವ್ರತಗಳಲ್ಲಿ ಉಪವಾಸವನ್ನೂ, ಪ್ರಾಯಶ್ಚಿತ್ತ ಮೊದಲಾದ ಸಂದರ್ಭದಲ್ಲಿ ಒಪ್ಪೊತ್ತನ್ನೂ ಮಾಡುತ್ತಿದ್ದರು. ) ದಾನ ಮಾಡದ ವ್ಯಕ್ತಿ ಅಲ್ಲಿ ಯಾರೂ ಇರಲಿಲ್ಲ. ಅತಿಥಿ ಸೇವೆಗೆ ಸದಾ ಜನರು ಹಾತೊರೆಯುತ್ತಿದ್ದರು. ತೋಳ್ಬಳೆಗಳನ್ನು, ( ಕಡಗ, ಬ್ರಾಸ್ಲೈಟ್ ) ಎದೆಯಲ್ಲಿ ಪದಕವನ್ನೂ, ಹಸ್ತಾಭರಣಗಳನ್ನೂ ಧರಿಸುತ್ತಿದ್ದರು. ಇಷ್ಟಾಗಿಯೂ ಜಿತೇಂದ್ರಿಯರಾಗಿ ಇರುತ್ತಿದ್ದರು. ಬ್ರಾಹ್ಮಣರು ಆಹಿತಾಗ್ನಿಗಳಿಲ್ಲದ ಅಥವಾ ಯಾಗ ಮಾಡದ ಒಬ್ಬರೂ ಇರಲಿಲ್ಲ. ( ದಿನವೂ ಅಗ್ನಿ ಆರಾಧನೆ ಮಾಡಿ ಅಗ್ನಿಸಂರಕ್ಷಣೆ ನಡೆಸಿ ಪರ್ವ ದಿನಗಳಲ್ಲಿ ಇಷ್ಟಿಗಳನ್ನು ನಡೆಸುವವರು ಆಹಿತಾಗ್ನಿಗಳು) ( ಮಂತ್ರಗಳನ್ನು ಅರಿತು ಯಾಗ ಮಾಡುವವರಿದ್ದರು ) ಕ್ಷುದ್ರರೂ, ಕಳ್ಳಕಾಕರೂ ಅಲ್ಲಿ ಹುಡುಕಿದರೂ ಸಿಗುತ್ತಿರಲಿಲ್ಲ. ( ಕ್ಷುದ್ರ= ಜಿಪುಣ, ಕ್ರೂರಿ, ಸಂಕುಚಿತ ಬುದ್ಧಿ ಉಳ್ಳ ವ್ಯಕ್ತಿ)_
*ಕಶ್ಚಿದಾಸೀದಯೋಧ್ಯಾಯಾಂ ನ ನಿರ್ವೃತ್ತಸಂಕರಃ*
_ಇದು ಬಹಳ ವಿಶಿಷ್ಟವಾದ ಮಾದರಿಯಾದ ಅಂಶ. ಬೇರೆಯವರ ಹೆಂಡತಿಯರನ್ನು ಬಯಸಿ ಸಂಗ ಮಾಡಿ ವರ್ಣಸಂಕರ ಮಾಡುವವರು ಯಾರೂ ಇರಲಿಲ್ಲ. ತಮ್ಮ ಕುಲಕ್ಕೆ ಅನುಗುಣವಾದ ಸ್ತ್ರೀಯರನ್ನು ಹಿರಿಯರ ಇಚ್ಛೆಗೆ ಅನುಗುಣವಾಗಿ ವರಿಸಿ ಸುಖಿಗಳಾಗಿದ್ದರು. ಪ್ರೀತಿ- ಪ್ರೇಮ ಎಂಬುದಕ್ಕೆ ಮನಬಂದಂತೆ ಅಥವಾ ದೇಹವಾಂಛೆ ಎಂಬ ಅರ್ಥ ಆಗಿನ ಜನರಲ್ಲಿ ಇರಲಿಲ್ಲ. ಹಾಗಾಗಿಯೇ ವರ್ಣಸಂಕರವಾಗದೇ ಸಮಾಜದಲ್ಲಿ ಒಗ್ಗಟ್ಟು- ಸಹಕಾರ- ಪರಸ್ಪರ ವೃತ್ತಿ ಗೌರವ- ಸಾಮುದಾಯಿಕ ಒಳಿತಿನ ಭಾವನೆ ನೆಲೆಸಿತ್ತು._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ