ರಾಮಾಯಣ ೧೫೪
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೪🏝📖
*ನ ನಾಸ್ತಿಕೋ ನಾನೃತಕೋ ನ ಕಶ್ಚಿದಬಹುಶ್ರುತಃ | ನಾಸೂಯಕೋ ನ ಚಾಶಕ್ತೋ ನಾವಿದ್ಯಾನ್ವಿದ್ಯತೇ ಕ್ವಚಿತ್ ||*
*ವರ್ಣೇಷ್ವಗ್ರ್ಯಚತುರ್ಥೇಷು ದೇವತಾತಿಥಿಪೂಜಕಾಃ | ಕೃತಜ್ಞಾಶ್ಚ ವದಾನ್ಯಾಶ್ಚ ಶೂರಾ ವಿಕ್ರಮಸಂಯುತಾಃ ||*
_ಅಯೋಧ್ಯೆಯಲ್ಲಿ ಯಾವೊಬ್ಬ ನಾಸ್ತಿಕನೂ, ಸುಳ್ಳು ಹೇಳುವವನೂ, ಅಲ್ಪವಿದ್ಯೆಯುಳ್ಳವನೂ, ಪರರ ಸಂಪತ್ತು ಅಥವಾ ಅಭಿವೃದ್ಧಿ ಕಂಡು ಮಾತ್ಸರ್ಯಪಡುವವರು, ಕಾರ್ಯಸಾಧನೆಯಲ್ಲಿ ಅಶಕ್ತರೂ ಅಥವಾ ಅಜ್ಞಾನಿಯೂ ಇರಲಿಲ್ಲ. ನಾಸ್ತಿಕ ಎಂದರೆ ಎಲ್ಲರ ಅಸ್ತಿತ್ವ ಒಪ್ಪದೇ ನಿರಾಶಾವಾದಿಯಾಗಿರುವುದು. ಜೀವಜಗತ್ತಿನ ವ್ಯವಸ್ಥೆಯ ದ್ವೇಷಿ ನಾಸ್ತಿಕನೆನಿಸುತ್ತಾನೆ. ಇನ್ನು ಪರಹಿತಕ್ಕಾಗಿ ಹೇಳುವ ಸುಳ್ಳು ಸುಳ್ಳಲ್ಲ. ಸಜ್ಜನರ- ಲೋಕದ - ಸಮಾಜದ ಹಿತಕ್ಕಾಗಿ ನುಡಿದ ಸುಳ್ಳು ಕ್ಷಮ್ಯ. ಉಳಿದಂತೆ ತನ್ನ ಹಿತಕ್ಕಾಗಿ ಮಾತ್ರ ನುಡಿಯುವ ಸುಳ್ಳಾಡುವವರು ಅಯೋಧ್ಯೆಯಲ್ಲಿ ಇರಲಿಲ್ಲ. ತೃಪ್ತಿ ಎನ್ನುವುದು ಅಯೋಧ್ಯೆಯ ಜನರಲ್ಲಿ ಸಹಜವಾಗಿ ನೆಲೆಸಿದ್ದ ಕಾರಣ ಮಾತ್ಸರ್ಯಕ್ಕೆ ಅವಕಾಶ ಎಂದಿಗೂ ಇರಲಿಲ್ಲ. ಇನ್ನು ಯಾವ ವಿದ್ಯೆಯನ್ನೂ ಸರಿಯಾಗಿ ಅರ್ಜಿಸದೆ ಲೋಕಕ್ಕೆ - ಸಮಾಜಕ್ಕೆ- ತನ್ನ ಕುಟುಂಬಕ್ಕೆ ಭಾರವಾಗಿ ಸಮಾಜವನ್ನು ನಿಂದಿಸುವ ಜನರಾರೂ ಅಲ್ಲಿ ಇರಲಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ವಿದ್ಯೆಯನ್ನು ಅರ್ಜಿಸಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದರು._
_ಇನ್ನೊಂದು ಗಮನಿಸಬೇಕಾದ ಅಂಶ ನಾಲ್ಕು ವರ್ಣದವರೂ ದೇವ- ಅತಿಥಿ ಪೂಜಕರಾಗಿದ್ದರು. ಆಧುನಿಕ ಪಾಶ್ಚಾತ್ಯಪ್ರಭಾವಿತ ಜನರಾಡುವಂತೆ ವೈದಿಕರು ಅಥವಾ ಪುರೋಹಿತರು ಹೇರಿದ್ದಲ್ಲ ಪೂಜಾದಿಗಳನ್ನು. ರಾಮಾಯಣ ಕಾಲದಲ್ಲೇ ನಾಲ್ಕು ವರ್ಣದವರೂ ತಮ್ಮ ತಮ್ಮ ಕುಲಾಚಾರಕ್ಕೆ ಅನುಗುಣವಾಗಿ ನಿತ್ಯವೂ ದೇವರನ್ನು ಪೂಜಿಸುತ್ತಾ, ಮನೆಗೆ ಯಾವ ವರ್ಣದ ಅತಿಥಿಗಳು ಬಂದರೂ ಅವರನ್ನು ಸತ್ಕರಿಸುತ್ತಾ , ಇನ್ನೊಬ್ಬರ ಅಲ್ಪ ಉಪಕಾರವನ್ನೂ ನೂರು ಬಾರಿ ಸ್ಮರಿಸುತ್ತಾ, ಸಂಪತ್ತಿನ ಆರನೇ ಒಂದಂಶವನ್ನು ದಾನ ಮಾಡುತ್ತಾ, ತಮ್ಮ ಕರ್ಮಗಳಲ್ಲಿ ಕುಶಲರಾಗಿಯೂ, ಕಷ್ಟಸಹಿಷ್ಣುಗಳಾಗಿಯೂ ಇದ್ದುದು ವಾಲ್ಮೀಕಿ ಮುನಿಗಳ ಮಾತಲ್ಲೇ ತಿಳಿಯುತ್ತದೆ._
*ಯೋಧಾನಾಮಗ್ನಿಕಲ್ಪಾನಾಂ ಪೇಶಲಾನಾಮಮರ್ಷಿಣಾಮ್ | ಸಂಪೂರ್ಣ ಕೃತವಿದ್ಯಾನಾಂ ಗುಹಾ ಕೇಸರಿಣಾಮಿವ||*
_ಇಲ್ಲೊಂದು ಸುಂದರ ಉಪಮೆ ನೀಡಿದ್ದಾರೆ ಮಹರ್ಷಿಗಳು. ಸಿಂಹ ಗುಹೆಯೊಳಗಿದೆ ಎಂಬ ವಿಷಯ ತಿಳಿದರೆ ಸಾಕು ಗರ್ಜಿಸಬೇಕೆಂದಿಲ್ಲ. ಯಾವ ಪ್ರಾಣಿಯೂ ಅದನ್ನು ಪ್ರವೇಶ ಮಾಡುವ ಸಾಹಸ ಮಾಡಲಾರದು. ಅದರಂತೆಯೇ ಅಗ್ನಿಯಂತೆ ತಮ್ಮ ತೇಜಸ್ಸಿನಿಂದ ಹೊಳೆಯುತ್ತಾ ಪ್ರತಾಪಶಾಲಿಗಳಾಗಿ ಕಪಟವಿಲ್ಲದ ಪರಿಣತರಾದ ಯೋಧರಿಂದ ಆ ಅಯೋಧ್ಯೆಯು ಸಿಂಹದ ಗುಹೆಯಂತೆಯೇ ಶೋಭಿಸುತ್ತಿತ್ತು. ಯಾವೊಬ್ಬ ಸಾಮಂತನೂ ಅಥವಾ ಮಾಂಡಲೀಕನೂ ಅಯೋಧ್ಯೆಗೆ ದಾಳಿ ಮಾಡುವ ಸಾಹಸ ಮಾಡುತ್ತಿರಲಿಲ್ಲ. ರಾವಣನಂತಹ ವರಬಲ ಪ್ರೇರಿತರು ಮಾತ್ರ ಅಯೋಧ್ಯೆಗೆ ದಾಳಿ ಮಾಡಿದ್ದು ಹೊರತು ಪುರುಷ ಬಲವನ್ನು ನಂಬಿ ಯಾವ ಸಾಹಸಿಗನೂ ಪ್ರಯತ್ನ ಪಟ್ಟಿರಲಿಲ್ಲ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ