ರಾಮಾಯಣ ೧೫೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೫🏝📖  

*ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ | ಭದ್ರಮಂದ್ರೈರ್ಭದ್ರಮೃಗೈ ಮೃಗಮಂದ್ರೈಶ್ಚ ಸಾ ಪುರೀ ||*

_ವಾಲ್ಮೀಕಿಗಳ ಈ ಶ್ಲೋಕ ನೋಡಿದಾಗ ಮೇಲ್ನೋಟಕ್ಕೆ ಹೇಳಿದ್ದನ್ನೇ ತಿರುಗಿಸಿ ಹೇಳಿದಂತೆ ಕಾಣುತ್ತದೆ. ಆದರೆ ಅರ್ಥ ನೋಡಿದಾಗ ಚಮತ್ಕಾರಿಕ ಶೈಲಿ ಅರಿವಿಗೆ ಬರುತ್ತದೆ. ಹಿಮಾಲಯದಲ್ಲಿ ಹುಟ್ಟಿದ ಭದ್ರ ಜಾತಿಯ ಆನೆಗಳು, ವಿಂಧ್ಯಶ್ರೇಣಿಯಲ್ಲಿ ಹುಟ್ಟಿದ ಮಂದ್ರ ಜಾತಿಯ ಆನೆಗಳು, ಸಹ್ಯಾದ್ರಿ ಯಲ್ಲಿ ಜನಿಸಿದ ಮೃಗ ಜಾತಿಯ ಆನೆಗಳು ಇದ್ದವು. ಆ ಮೂರು ಜಾತಿಗಳ ಆನೆಗಳ ಅನ್ಯೋನ್ಯ ಸಂಪರ್ಕದಿಂದ ಜನಿಸಿದ ಭದ್ರಮಂದ್ರ- ಭದ್ರಮೃಗ- ಮೃಗಮಂದ್ರ ಎಂಬ ಉಪಜಾತಿಗಳ ಆನೆಗಳೂ ಅಸಂಖ್ಯವಾಗಿದ್ದವು. ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಅಥವಾ ಸಾಮಾಜಿಕ ಜೀವನವನ್ನು ಬರಹದಲ್ಲಿ ಇರಿಸುವ ಪ್ರಜ್ಞೆ ಧಾರಾಳವಾಗಿರುವ ಕಾರಣ ಇಂತಹ ಅಪೂರ್ವ ಮಾಹಿತಿ ನಮಗೆ ದೊರಕುತ್ತದೆ. ಪಾಶ್ಚಾತ್ಯರ ಒಬ್ಬನ ಸುತ್ತಲೇ ಗಿರಕಿ ಹೊಡೆಯುವ ಕೃತಕ ಇತಿಹಾಸಗಳಿಗಿಂತ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಬೆಳಕು ಚೆಲ್ಲುವ ರಾಮಾಯಣದಂತಹ ಐತಿಹಾಸಿಕ ಗ್ರಂಥಗಳ ಮಹತ್ವ ಮೇಲೆನಿಸುತ್ತದೆ. ಆನೆಗಳ, ಕುದುರೆಗಳ ಹಾಗೂ ಅನೇಕ ಪ್ರಾಣಿಗಳ ಜಾತಿ, ವರ್ತನೆ, ಸಂಖ್ಯೆ ಹೀಗೆ ಮಹರ್ಷಿಗಳ ಕಥಾನಕದಲ್ಲಿ ಬರುವ ವಿವರಣೆ ನೋಡಿದರೆ ಅವರ ಅಪಾರ ಜ್ಞಾನದ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗುತ್ತದೆ._

*ಅಷ್ಟೌ ಬಭೂವುರ್ವೀರಸ್ಯ ತಸ್ಯಾಮಾತ್ಯಾ ಯಶಸ್ವಿನಃ | ಶುಚಯಶ್ಚಾನುರಕ್ತಾಶ್ಚ ರಾಜಕೃತ್ಯೇಷು ಯಶಸ್ವಿನಃ ||*

_ದಶರಥನ ಆಸ್ಥಾನದಲ್ಲಿ ಎಂಟು ಜನ ಮಂತ್ರಿಗಳಿದ್ದರು.  ಮನುವಿನ ಮಾತು ಹೀಗಿದೆ *ಮಂತ್ರಿಣಃ ಸಪ್ತ ವಾಷ್ಟೌ ವಾ ಪ್ರಕುರ್ವೀತ ಪರೀಕ್ಷಿತಾನ್*  ಅದರಂತೆ ಧೃಷ್ಟಿ-ಜಯಂತ-ವಿಜಯ-ಸಿದ್ಧಾರ್ಥ-ಅರ್ಥಸಾಧಕ-ಅಶೋಕ-ಮಂತ್ರಪಾಲ-ಸುಮಂತ್ರ ಎಂಬ ಮಂತ್ರಿಗಳಿದ್ದರು. ಬಹುಶಃ ಹೆಸರಿಗೆ ತಕ್ಕಂತೆ ಧೈರ್ಯ- ವಿಷ್ಣುವಿನಂತೆ ಜಯ ತರುವವ- ವಿಜಯಸಾಧಕ- ಹಿಡಿದ ಕೆಲಸ ಸಾಧಿಸುವವ- ರಾಜ್ಯದ ಸಂಪತ್ತು ಹೆಚ್ಚಿಸುವ ವ್ಯಕ್ತಿತ್ವ- ಎಂತಹ ಸಂದರ್ಭದಲ್ಲೂ ಶೋಕಿಸದೇ ಮುನ್ನಡೆಸುವವ- ಮಂತ್ರಾಲೋಚನೆಯ ಪರಿಣಾಮವನ್ನು ಜಾರಿಗೆ ತರುವ- ಒಳ್ಳೆಯ ಮಂತ್ರಾಲೋಚಕ ಹೀಗಿದ್ದಿರಬಹುದು ಅವರ ಸಾಮರ್ಥ್ಯ. ಮುಖ್ಯವಾಗಿ ಇವರೆಲ್ಲರೂ ಅಂತರ್ಬಹಿ ಶುದ್ಧರಾಗಿದ್ದರು. ಲಂಚ ಮುಂತಾದವನ್ನು ತಿಂದು ಕೇಡು ಬಯಸುವ ವ್ಯಕ್ತಿತ್ವ ಇವರದಾಗಿರಲಿಲ್ಲ. ಹಾಗಾಗಿ ಮುನಿಗಳ ಉಲ್ಲೇಖ ಶುಚಿ ಎಂದು. ಅಷ್ಟಲ್ಲದೇ ಪ್ರಜಾದ್ರೋಹ-ರಾಜದ್ರೋಹ-ಸ್ವಾರ್ಥಗಳಿಗೆ ಆಸ್ಪದ ಕೊಡುತ್ತಿರಲಿಲ್ಲ. ಸರ್ವದಾ ಪ್ರಜಾಹಿತದ ದೃಷ್ಟಿಯಿಂದ ಕಾರ್ಯತತ್ಪರರಾಗಿದ್ದ ಕಾರಣ ಅಯೋಧ್ಯೆಯಲ್ಲಿ ಸಮೃದ್ಧಿ ನೆಲೆಸಿತ್ತು. ಒಬ್ಬ ರಾಜನು ಪ್ರಜಾರಂಜಕನಾಗಿ ಯಶಸ್ವಿಯಾಗಲು ಉತ್ತಮ ಮಂತ್ರಿಗಳ ಪಾತ್ರ ಮಹತ್ತರವಾದುದು. ಅಂತಹ ಮಂತ್ರಿಗಳು ಅಯೋಧ್ಯೆಯಲ್ಲಿ ಇದ್ದುದು ಬಹುಶಃ ಇಕ್ಷ್ವಾಕು ವಂಶದವರ ಔನ್ನತ್ಯಕ್ಕೆ ಕೀರ್ತಿಗೆ ಕಾರಣವಾಯಿತು._




ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩