ವಿಕ್ರಮೋರ್ವಶೀಯ ೩
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-3
*आविर्भूते शशिनि तमसा मुच्यमानेव रात्रिः नैशस्यार्चिर्हुतभुज इव च्छिन्नभूयिष्ठधूमा। मोहेनान्तर्वरतनुरियं लक्ष्यते मुक्तकल्पा गङ्गा रोधः पतनकलुषो गृह्णतीव प्रसादम् ।।*
_ಊರ್ವಶಿಯು ಅಸುರರಿಂದ ಆಕ್ರಮಣಕ್ಕೊಳಗಾದಾಗ ಪುರೂರವನು ಪೊರೆದಿದ್ದಾನೆ. ಅವಳನ್ನು ಅಡರಿದ ಭಯ ಇನ್ನೂ ಅಸುರರೊಡನೆ ಹೊರನಡೆದಿಲ್ಲ. ನಿಧಾನವಾಗಿ ಚೇತರಿಸಿಕೊಂಡು ಉಸಿರುಬಿಡುತ್ತಿದ್ದಾಳೆ. ಕವಿ ಅದನ್ನು ಸುಂದರವಾಗಿ ನಾಯಕನ ಮಾತನ್ನಾಗಿಸಿದ್ದಾನೆ. ಸುತ್ತಲೂ ಕತ್ತಲಿಂದ ಮುಚ್ಚಿಹೋಗಿದ್ದ ರಾತ್ರಿಯು ತಂಗದಿರನ ಕಿರಣದ ಸ್ಪರ್ಶದಿಂದ ಈಗ ತಾನೇ ಕಣ್ಣುಬಿಡುವಂತೆ, ರಾತ್ರಿಕಾಲದಲ್ಲಿ ಆವರಿಸಿದ ಹೊಗೆಯೆಲ್ಲ ಸರಿದು ಬಂಗಾರದ ಕಾಂತಿಯ ಅಗ್ನಿಶಿಖೆಯು ಹೊಳೆವಂತೆ, ಮಳೆಯ ಸಾಂಗತ್ಯದಲ್ಲಿ ತೀರದ ಮಣ್ಣಿನಿಂದ ಕಲುಷಿತಳಾಗಿದ್ದ ಗಂಗೆ ಈಗ ತಾನೇ ನಿರ್ಮಲವಾಗಿ ಹರಿವಂತೆ, ಅಸುರ-ಕ್ಷಿತಳಾಗಿ ಭಯವೆಂಬ ಭಾವದಲ್ಲಿ ಮುಳುಗಿದ್ದ ಈ ಸುಂದರಿಯು ಈ ಕ್ಷಣದಲ್ಲಿ ಸಾವರಿಸಿಕೊಂಡು ಅತ್ತಿತ್ತ ಕಣ್ಣುಹಾಯಿಸುತ್ತಾ ಬೆಳಕಾಗುತ್ತಿದ್ದಾಳೆ. ಸಖಿಯು ಅರೇ, ಗೆಳತಿ ಸಾವರಿಸಿಕೊ ಎಂದು ಅವಸರ ಮಾಡಿದಾಗ ನಾಯಕನಾಡುವ ಮಾತು. ಕವಿ ಇಲ್ಲಿ ಸುಂದರ ಚಿತ್ರವನ್ನೇ ಪದಗಳ ಮೂಲಕ ರಚಿಸಿದ್ದಾನೆ. ಒಂದೆಡೆ ಬೆಳದಿಂಗಳು, ಮತ್ತೊಂದೆಡೆ ಕತ್ತಲಲ್ಲೂ ಹೊಳೆಯುತ್ತಿರುವ ಬೆಂಕಿಯ ಜ್ವಾಲೆ, ಮತ್ತೊಂದೆಡೆ ನಿರ್ಮಲವಾದ ಗಂಗೆ ಈ ಮೂರರ ಸಾಕಾರವೆನಿಸಿದ ಹೆಣ್ಣೆಂಬ ಮಾಯೆ. ಅದೂ ಊರು ಜಾತೆಯಾದ ಅಪ್ಸರೆ. ಕಾಳಿದಾಸನ ಮಾತು ಅಸದೃಶ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ