ರಾಮಾಯಣ ೧೮೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೩🏝📖

*ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ಮಿತಮ್ | ಪ್ರಜಾಕರ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್ || ಭಾರ್ಯಾಣಾಮನುರೂಪಾಣಾಮಶ್ನೀತೇತಿ ಪ್ರಯಚ್ಛ ವೈ | ತಾಸು ತ್ವಂ ಪ್ರಾಪ್ಸ್ಯಸೇ ಪುತ್ರಾನ್ಯದರ್ಥಂ ಯಜಸೇ ನೃಪ||*

_ದೇವಪುರುಷನ ಆವಿರ್ಭಾವದಿಂದ ಮುದಗೊಂಡ ದಶರಥನು ಏನು ಮಾಡಬೇಕೆಂದು ಕೇಳಿದಾಗ ಅವನಾಡುವ ಮಾತು- ರಾಜನೇ, ಅಶ್ವಮೇಧ ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳಿಂದ ದೇವತಾರಾಧನೆ ಮಾಡಿದ ಫಲರೂಪವಾದ ಪಾಯಸವಿದು. ನಿನ್ನ ಪತ್ನಿಯರಿಗೆ ಪಾನಮಾಡಲು ನೀಡಿ ಪುತ್ರರನ್ನು ಪಡೆ ಎಂದು. ಹೋಮಗಳಲ್ಲಿ ಪಾಯಸವನ್ನು ಅಹುತಿ ನೀಡುವ ಫಲವೂ ಸಂತತಿ ಅಥವಾ ಪ್ರಜಾವೃದ್ಧಿ. ಇಲ್ಲಿ ಪಾಯಸದ ಪಾನವೂ ಅದನ್ನೇ ನಿರೂಪಿಸಿದೆ. ಪಾಯಸದ ಸ್ವರೂಪ ಹೇಗೆಂದರೆ- ತುಪ್ಪದೊಂದಿಗೆ ಇಡೀ ಅಕ್ಕಿಯನ್ನು ಮಿಶ್ರಮಾಡಿ ಹಾಲಿನಲ್ಲಿ ಬೇಯಿಸಿದರೆ ಪಾಯಸ ಸಿದ್ಧವಾಗುತ್ತದೆ. ನಾವು ಪ್ರಕೃತ ಮಾಡುವಂತೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕೆಂದಿಲ್ಲ. ಈ ಪಾಯಸದ ಸೇವನೆಯು ಕಫವನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ವೃದ್ಧಿಸುತ್ತದೆ,ಶೀತವನ್ನು ಉಂಟುಮಾಡುತ್ತದೆ ಹಾಗೂ ತಿನ್ನಲು ಬಹಳ ಮಧುರವಾಗಿರುತ್ತದೆ. ಭಗವಂತನ ಪ್ರಸಾದವೆನಿಸಿದಾಗ ಅದರ ದೋಷಗಳು ದೂರವಾಗಿ ಗುಣಗಳು ಹೆಚ್ಚಾಗಿ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ರಾಜನೇ, ಇದರ ಸೇವನೆಯು ನಿಶ್ಚಿತವಾಗಿ ನಿನಗೆ ಫಲ ಕೊಡುವುದೆಂದು ನುಡಿದು ಆ ಪರಮಪುರುಷನು ಅಂತರ್ಧಾನನಾದನು._

*ಬಭೂವ ಪರಮಪ್ರೀತಃ ಪ್ರಾಪ್ಯ ವಿತ್ತಮಿವಾಧನಃ*

_ಆ ಪಾಯಸವನ್ನು ಪಡೆದ ರಾಜನ ಸಂತೋಷಕ್ಕೆ ಪಾರವಿಲ್ಲ. ಬಡವನೊಬ್ಬ ಅಪಾರಧನವನ್ನು ಪಡೆದು ಸಂತೋಷಿಸುವಂತೆ ದಶರಥನು ತುಷ್ಟನಾದನು. ಹಿರಿಯಳಾದ ಕೌಸಲ್ಯೆಗೆ ಅರ್ಧಭಾಗವನ್ನೂ, ಉಳಿದರ್ಧವನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ಸುಮಿತ್ರೆಗೆ, ಮತ್ತೆ ಪುನಃ ಕಾಲುಭಾಗದಲ್ಲಿ ಎರಡು ಭಾಗ ಮಾಡಿ ಒಂದು ಭಾಗವನ್ನು ಕೈಕೇಯಿಗೆ, ಅನಂತರ ಕ್ಷಣ ಯೋಚಿಸಿ ಉಳಿದ ಭಾಗವನ್ನು ಸುಮಿತ್ರೆಗೆ ನೀಡಿದನು. ದಶರಥನ ಬಗ್ಗೆ ಸ್ತ್ರೀಲೋಲ ಕೈಕೇಯಿದಾಸ ಎಂದೆಲ್ಲಾ ಟೀಕಿಸುವ ಜನರು ಈ ಭಾಗವನ್ನು ಗಮನಿಸಬೇಕು. ವಯಸ್ಸಿನಲ್ಲಿ ಸಣ್ಣವಳಾದ ಕೈಕೇಯಿಗೆ ನೀಡಿದ ಪಾಯಸದ ಭಾಗ ಕಾಲಿನಲ್ಲಿ ಮತ್ತೆ ಅರ್ಧ. ಕೌಸಲ್ಯೆಗೆ ಪೂರ್ಣ ಅರ್ಧವೂ, ಸುಮಿತ್ರೆಗೆ ಅರ್ಧದಲ್ಲಿ ಹೆಚ್ಚಿನ ಪ್ರಮಾಣದ ಪಾಯಸ ಸಿಕ್ಕಿತು. ಅವರು ಶುದ್ಧಮಾನಸ-ಶುದ್ಧಾಸನದಲ್ಲಿ ಕುಳಿತು ಹರ್ಷದಿಂದ ಭಗವದ್ಧ್ಯಾನಪರರಾಗಿ ಪಾಯಸ ಸ್ವೀಕರಿಸಿ ಅನತಿಕಾಲದಲ್ಲಿ ಗರ್ಭ ಧರಿಸಿದರು.ಇಲ್ಲಿ ಪಾಲು ಮಾಡಿದ್ದು ಸಾಕ್ಷಾತ್ ದಶರಥನೇ ಹೊರತು ಪತ್ನಿಯರಲ್ಲ. ಅವರು ಪತಿಯ ಆದೇಶವನ್ನು ಅನುಸರಿಸಿ ಸ್ವಿಕರಿಸಿದರು.ಭಗವಂತನ ಪ್ರಸಾದ ಯಾವ ರೂಪದಲ್ಲಿ ದೊರಕಿದರೂ ಫಲ ದೊರಕುವುದು ನಿಶ್ಚಿತ. ಅದಕ್ಕಾಗಿ ಕಾಯುವ ವ್ಯವಧಾನ ಹಾಗೂ ಭಕ್ತಿ ನಮ್ಮಲ್ಲಿ ಸಾಕಷ್ಟು ಇರಬೇಕು._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩