ವಿಕ್ರಮೋರ್ವಶೀಯ ೧
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-೧
*वेदान्तेषु यमाहुरेकपुरुषं व्याप्य स्थितं रोदसी यस्मिन्नीश्वर इत्यनन्यविषयः शब्दो यथार्थाक्षरः । अन्तर्यश्च मुमुक्षुभिर्नियमितप्राणादिभिर्मृग्यते स स्थाणुः स्थिरभक्तियोगसुलभो निःश्रेयसायास्तु वः।।*
_ಸಂಸ್ಕೃತ ಕವಿಗಳಲ್ಲಿ ಕೀರ್ತಿಶಿಖರವನ್ನು ತಲುಪಿದ ಕವಿ ಎನಿಸಿದವನು ಕವಿಕುಲಗುರು ಕಾಳಿದಾಸ.ಅವನ ನಾನಾ ಕೃತಿಗಳಲ್ಲಿ ವಿಕ್ರಮೋರ್ವಶೀಯ ನಾಟಕವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ಪ್ರಸಿದ್ಧವಾದ ಊರ್ವಶಿ ಹಾಗೂ ಪುರೂರವನ ಪ್ರಣಯ ಪ್ರಸಂಗವನ್ನು ಆಧರಿಸಿ ಬರೆದ ಸುಂದರ ನಾಟಕ. ನಾಟಕದ ಮಂಗಲಶ್ಲೊಕ ಹಾಗೂ ನಾಂದೀಪದ್ಯ ಇದು._
_ಇಲ್ಲಿ ಲಿಂಗರೂಪದಲ್ಲಿ ಸ್ಥಿರವಾಗಿ ನೆಲೆಸಿ ಸ್ಥಾಣು ಎಂದು ಪ್ರಸಿದ್ಧನಾದ ಶಿವನ ಸ್ತುತಿ ಇದೆ. ಸ್ವರ್ಗ-ಭೂಮಿಗಳಿಗೆ ಅಥವಾ ಭೂಮ್ಯಾಕಾಶಗಳಿಗೆ ವ್ಯಾಪಿಸಿ ನೆಲೆನಿಂತಿರುವ ಯಾರನ್ನು ವೇದಾಂತಗಳು ಮಹಾಪುರುಷ ಅಥವಾ ಅದ್ವಿತೀಯಪುರುಷನೆಂದು ಕರೆದವೋ, ಈಶ್ವರ ಎಂಬ ಪದವು ಯಾವ ಒಬ್ಬನಲ್ಲಿ ಮಾತ್ರ ಅನ್ವಯಿಸುವುದೋ, ಅಕ್ಷರ ಎಂಬ ಪದಕ್ಕೆ ಅನ್ವರ್ಥದಂತಿರುವ, ಪ್ರಾಣಾಯಾಮದ ಮೂಲಕ ಇಂದ್ರಿಯಾದಿಗಳನ್ನು ನಿಯಂತ್ರಿಸಿ ಆಂತರ್ಯದಲ್ಲಿ ಮೋಕ್ಷಾರ್ಥಿಗಳು ಯಾರನ್ನು ಕಾಣಬಯಸುವರೋ, ದೃಢಭಕುತಿಗೆ-ಯೋಗಿಗಳಿಗೆ ಒಲಿವ ಅವನು ನಿಮ್ಮೆಲ್ಲರಿಗೂ ಮೋಕ್ಷವನ್ನು ಅಥವಾ ಮಂಗಳವನ್ನು ಕರುಣಿಸಲಿ._
_ಕಾಳಿದಾಸನ ಮನದ ಅಭಿಲಾಷೆಯೇ ಸರ್ವಜನಸುಖ. ಅದು ಕಾವ್ಯ ಓದುಗರಿಗಾಗಲಿ ಇತರರಿಗಾಗಲಿ ಯಾರಿಗಾದರೂ ಒಳ್ಳೆಯದನ್ನು ಮಾತ್ರ ಬಯಸುವ ವಿಶ್ವಕುಟುಂಬಿ ಅವನು. ಈಶ್ವರನು ನಿಮ್ಮೆಲ್ಲರಿಗೂ ಮಂಗಳವನ್ನು ಉಂಟುಮಾಡಲೆಂದು ಸೂತ್ರಧಾರನ ಮೂಲಕ ಪ್ರೇಕ್ಷಕರಿಗೆ-ಓದುಗರಿಗೆ-ಸಹೃದಯಿಗಳಿಗೆ ಒಳಿತಾಗಲೆಂಬ ಯಾಚನೆ. ವೇದವು ವಸ್ತುತಃ ವಿಷ್ಣುವನ್ನು ಪುರುಷಸೂಕ್ತ ಮೊದಲಾದ ಕಡೆ ವಿರಾಟ್ಪುರುಷ ಅಥವಾ ಪುರುಷೋತ್ತಮ ಎಂದು ಗೀತೆ ಮೊದಲಾದ ಕಡೆ ಸ್ತುತಿಸುತ್ತದೆ. ಕಾಳಿದಾಸನು ಇಲ್ಲಿ ಶಿವನನ್ನು ಅದ್ವಿತೀಯ ಪುರುಷನೆಂದು ಸ್ತುತಿಸಿರುವುದು ವಿಶೇಷ. ನಾಕ-ಭೂಲೋಕವನ್ನು ತ್ರಿವಿಕ್ರಮ ಅವತಾರದಲ್ಲಿ ವ್ಯಾಪಿಸಿಕೊಂಡವನು ವಾಮನನು. ಕವಿ ಇಲ್ಲಿ ತ್ರಿಪುರಾಸುರ ಸಂಹಾರಿ ಶಿವನನ್ನು ಬಹುಶಃ ವರ್ಣಿಸಿರುವನು. ವೇದಾಂತವು ಯಾವ ಅದ್ವಿತೀಯ ಶಕ್ತಿಯನ್ನು ಕುರಿತು ಹೇಳುವುದೋ ಅಂತಹ ಮಹಾಪುರುಷ ಎಂದು ವೇದ-ವೇದಾಂತ ಪ್ರತಿಪಾದ್ಯವಾದ ದೈವೀಶಕ್ತಿ ಎಂಬ ವರ್ಣನೆ ಇದೆ. ಇತರರನ್ನು ತಪ್ಪಿಯೂ ಕರೆಯಲು ಸಾಧ್ಯವಾಗದ ಜಗದೊಡೆಯನ ಸ್ಥಾನ ಯಾರಲ್ಲಿ ಇದೆಯೋ, ನಾಶವಾಗದ ಎಂಬ ಅರ್ಥದ ಅಕ್ಷರ ಶಬ್ದವು ಯಾರಲ್ಲಿ ಯಥಾರ್ಥವಾಗಿ ಇದೆಯೋ ಅಂದರೆ ಆ ಪರಮಾತ್ಮ ಸ್ವರೂಪ ನಿತ್ಯನಿರಂತರ ಎಂಬ ಭಾವ. ಯೋಗಿಗಳು-ಮಹರ್ಷಿಗಳು-ಸಜ್ಜನರು ಯಾರನ್ನು ಉಸಿರಿನ ನಿಯಂತ್ರಣದ ಮನದ ನಿಯಂತ್ರಣ ಸಾಧಿಸಿ ಅಥವಾ ಇಂದ್ರಿಯಗಳನ್ನು ಹಿಡಿತಕ್ಕೆ ತಂದು ಮನದ ಏಕಾಗ್ರತೆ ಮೇಳೈಸಿ ಹೃದಯಕಮಲದಲ್ಲಿ ಯಾವ ಆ ಚಿದ್ರೂಪವನ್ನು ಹುಡುಕುವರೋ,ಅಂತಹ ಲೋಕವಂದ್ಯ-ಮತಿಗೆ ನಿಲುಕದ ಶಕ್ತಿ ಸದಾ ನಿಮಗೆ ಶುಭ ತರಲಿ.ಮೋಕ್ಷಾರ್ಥಿಗಳಿಗೆ ಮೋಕ್ಷವನ್ನು ಕರುಣಿಸಲಿ. ಶಿವನ ಸ್ವಭಾವದ ಚಿತ್ರಣವೂ ಹೌದು. ಭಕ್ತಿಯಿಂದ ಏನು ಕೇಳಿದರೂ ನೀಡುವ ಉದಾರಿ ಅವನು. ಅವನ ಒಲುಮೆಗೆ ಸಾಧನ ಸ್ಥಿರಭಕುತಿ. ಭಕ್ತಿ ಅತ್ತಿತ್ತ ಸಾಗಿದರೆ ಮುಕ್ತಿ ಸಿಗದು. ಸ್ಥಿರಭಕ್ತಿಯೊಂದೇ ಅದನ್ನು ಸಾಧಿಸುವುದು. ಯೋಗದ ಅಭ್ಯಾಸದಿಂದ ಭಕ್ತಿಯನ್ನು ರೂಪಿಸಿಕೊಳ್ಳುವ ಮಾರ್ಗ ತಾನೇ ತೆರೆಯುವುದು. ಹಾಗಾಗಿ ಯೋಗಿಗಳಿಗೂ ಒಲಿವ ಪುರುಷ ಅವನು. ಶಾರ್ದೂಲವಿಕ್ರೀಡಿತ ಎಂಬ ಛಂದಸ್ಸಿನಲ್ಲಿ ಈ ಸುಂದರ ಸ್ತುತಿ ಚಿತ್ರಿತವಾಗಿದೆ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ