ಪದಶಕ್ತಿ ೪೫

ಪದಶಕ್ತಿ ೪೫🌄📔🖋️📕

*ಪವಮಾನ*

_ಪೂಙ್ ಎಂಬ ಧಾತುವಿನಿಂದ ಹುಟ್ಟಿದ ಈ ಪದದ ಪ್ರಸಿದ್ಧ ಅರ್ಥ ವಾಯು. ಎಲ್ಲವನ್ನೂ ಶುದ್ಧೀಕರಿಸುವ ಗುಣ ಉಸಿರಿನಿಂದ ಹಸಿರಿನ ತನಕ ವಾಯುವಿಗಿರುವುದು ಪ್ರಕೃತಿ ಸಹಜ. ಹಾಗಾಗಿ ವಾಯುವೇ ಮುಖ್ಯ ಅರ್ಥ._

_ಮತ್ತೊಂದು ಅರ್ಥ ಗಾರ್ಹಪತ್ಯ ನಾಮಕ ಅಗ್ನಿ. ಗೃಹಸ್ಥನಿಗೆ  ಅಗ್ನಿಹೋತ್ರ ಮೊದಲಾದವನ್ನು ಆಚರಿಸಲು ಹಾಗೂ ಆರಾಧನೆ ಮಾಡಲು ಇರುವ  ಅಗ್ನಿಗಳು ಭಿನ್ನ ಭಿನ್ನ. ದಕ್ಷಿಣಾಗ್ನಿ-ಗಾರ್ಹಪತ್ಯಾಗ್ನಿ-ಆಹವನೀಯಾಗ್ನಿ ಎಂದು. ಇವುಗಳಲ್ಲಿ ವಿವಾಹದ ನಂತರ ಸಂಸ್ಕಾರಾದಿಗಳನ್ನು ಆಚರಿಸಲು ಇರುವ ಅಗ್ನಿ ಗಾರ್ಹಪತ್ಯಾಗ್ನಿ. ನಮ್ಮನ್ನು ಸದಾ ರಕ್ಷಿಸಿ ಪೊರೆಯುವುದು ಎಂಬ ಅರ್ಥದಲ್ಲಿ ಈ ಅಗ್ನಿಗೆ ಪವಮಾನ ಎಂದು ಹೆಸರಿದೆ. ಅಗ್ನಿಯ ಕಾರ್ಯವೂ ಶುದ್ಧೀಕರಣವೇ ಆಗಿದೆ._

_ಮೂರನೆಯ ಅರ್ಥ ಸೋಮ. ಋಗ್ವೇದದ ೬೧೦ ಮಂತ್ರಗಳು  ಪವಮಾನ ಮಂತ್ರಗಳು ಎಂದು ಪ್ರಸಿದ್ಧ. ಇಲ್ಲಿ ಪ್ರಧಾನ ದೇವತೆ ಪವಮಾನ ಅಥವಾ ಸೋಮ. ಸೋಮ ಶಬ್ದಕ್ಕೆ ಹತ್ತಾರು ಅರ್ಥಗಳಿದ್ದರೂ ನಮಗೆ ಪ್ರಕೃತ ವಿವಕ್ಷಿತವಾಗುವುದು ಓಷಧೀಶನಾದ ಚಂದ್ರ. ಸೋಮಲತೆಗೆ ಅಭಿಮಾನಿ ಅವನೇ ಆಗಿದ್ದಾನೆ.ಔಷಧದ ಕೆಲಸ ವಾತ-ಪಿತ್ತ-ಕಫಗಳಿಂದ ಉಂಟಾದ ದೋಷಗಳನ್ನು ನಿವಾರಿಸಿ ಅಂದರೆ ದೇಹದ ಕಲ್ಮಶಗಳನ್ನು ದೂರಮಾಡಿ ದೇಹವನ್ನು ಶುದ್ಧೀಕರಿಸುವುದು. ಹಾಗಾಗಿ ಈ ಅರ್ಥದಲ್ಲಿ ಸೋಮನೂ ಪವಮಾನ._

_ಈ ಪದ ಸಂಸ್ಕೃತ-ಕನ್ನಡ ಎರಡೂ ಭಾಷೆಯ ಮಂತ್ರ-ಪುರಾಣ-ಕೀರ್ತನೆ ಹೀಗೆ ಸಾವಿರಾರು ಕಡೆ ಪ್ರಸಿದ್ಧವಾಗಿದೆ‌._

_ವೇದದ ಮಂತ್ರ *ಪವಮಾನೋ ರಥೀತಮಃ ಶುಭ್ರೇಭಿಃ ಶುಭ್ರಶಸ್ತಮಃ* ಎಂಬ ಮಂತ್ರದಲ್ಲಿ ಅತ್ಯಂತ ಶುಚಿ ಎಂದು ಬಣ್ಣಿಸಿದ್ದಾರೆ._

_ಪಾಲೀಸೊ ಪವಮಾನ | ಜಯಪತಿಬಾಲಾನೆ ಜಗತ್ರಾಣಾ ಪ
ಕಾಳೀರಮಣ ಹೃತ್ಕೀಲಾಲಜದಿ ತೋರೊಲೀಲಾಮಾನುಷನ | ಬಾಲ ಗೋಪಾಲನ_

_ಗುರುಗೋವಿಂದ ವಿಠಲರು ಹೇ ಪವಮಾನ ಎಮ್ಮನು ಪಾಲಿಸು ಎಂದು ಮನದುಂಬಿ ಸ್ತುತಿಸಿದ್ದಾರೆ._

_ಸೋಮ-ಅಗ್ನಿ-ವಾಯುಗಳು ನಮ್ಮ ಒಳ-ಹೊರಗನ್ನು ಪವಿತ್ರಗೊಳಿಸಿ ಸದಾ ಕಾಯಲೆಂದು ಪ್ರಾರ್ಥಿಸೋಣ._

ತಪ್ಪುಗಳಿದ್ದರೆ ತಿದ್ದಿ.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩