ರಾಮಾಯಣ ೧೮೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೫🏝📖 

*ಅಪ್ಸರಸ್ಸು ಚ ಮುಖ್ಯಾಸು ಗಂಧರ್ವೀಣಾಂ ತನೂಷು ಚ| ಯಕ್ಷಪನ್ನಗಕನ್ಯಾಸು ಋಕ್ಷೀವಿದ್ಯಾಧರೀಷು ಚ|| ಕಿನ್ನರೀಣಾಂ ಚ ಗಾತ್ರೇಷು ವಾನರೀಣಾಂ ತನೂಷು ಚ| ಸೃಜಧ್ವಂ ಹರಿರೂಪೇಣ ಪುತ್ರಾಂಸ್ತುಲ್ಯಪರಾಕ್ರಮಾನ್||*

_ರಾಕ್ಷಸರ ಸಂಹಾರ ಕಾರ್ಯದಲ್ಲಿ ಭಗವಂತನಿಗೆ ಸಹಾಯಕರಾಗಿ ಅಪ್ಸರೆಯರಲ್ಲಿ, ಗಂಧರ್ವಸ್ತ್ರೀಯರಲ್ಲಿ, ಯಕ್ಷ-ಪನ್ನಗ ಕನ್ಯೆಯರಲ್ಲಿ, ಋಕ್ಷಿ ಮತ್ತು ವಿದ್ಯಾಧರ ಕನ್ಯೆಯರಲ್ಲಿ( ಋಕ್ಷಿ=ಹೆಣ್ಣು ಕರಡಿ), ಕಿನ್ನರ ಸ್ತ್ರೀಯರಲ್ಲಿ, ವಾನರಸ್ತ್ರೀಯರಲ್ಲಿ ಉಪಾಯಜ್ಞರಾದ (ಸಾಮ-ದಾನ-ಭೇದ-ದಂಡ) ಸಿಂಹ ಸದೃಶ ಬಲಿಷ್ಠರಾದ ದೀರ್ಘಾಯುಗಳಾದ ಸರ್ವಾಸ್ತ್ರಗಳ ಶಕ್ತಿತುಂಬಿರುವ ಮಕ್ಕಳನ್ನು ಹುಟ್ಟಿಸಿ ಎಂದು ನುಡಿದನು ಬ್ರಹ್ಮ. ಹಾಗೆ ಹುಟ್ಟಿದ ವೀರರ ಹೆಸರು- ಇಂದ್ರನು ವಾಲಿಯನ್ನು, ಸೂರ್ಯನು ಸುಗ್ರೀವನನ್ನೂ, ಬೃಹಸ್ಪತಿಯು ತಾರನನ್ನೂ, ಕುಬೇರನು ಗಂಧಮಾದನನನ್ನೂ, ವಿಶ್ವಕರ್ಮನು ನಲನನ್ನೂ,( ಸೇತುವೆಯ ಮುಖ್ಯ ರಚನಕಾರ ವಿಶ್ವಕರ್ಮನ ಮಗ) ಅಗ್ನಿಯು ನೀಲನನ್ನೂ, ಅಶ್ವಿನಿಗಳು ಮೈಂದ-ದ್ವಿವಿದರನ್ನೂ, ವರುಣನು ಸುಷೇಣನನ್ನೂ, ಪರ್ಜನ್ಯನು ಶರಭನನ್ನೂ, ವಾಯುವು ಹನುಮನನ್ನೂ ಹುಟ್ಟಿಸಿದರು. ಕಾಮರೂಪಿಗಳೂ, ಮಹಾಬಲಶಾಲಿಗಳೂ, ಇಚ್ಛಿಸಿದಲ್ಲಿಗೆ ಕೂಡಲೇ ತೆರಳುವ ಸಾಮರ್ಥ್ಯ ಉಳ್ಳವರೂ,ಉಳಿದ ಪ್ರಾಣಿಗಳನ್ನು ಸೋಲಿಸುವ ಸಾಮರ್ಥ್ಯವುಳ್ಳ ಲಕ್ಷ ಲಕ್ಷ ವಾನರರು ಜನಿಸಿದರು. ನಂದೀಶ್ವರನ ಶಾಪವನ್ನು ಸತ್ಯ ಮಾಡಲು ಹೀಗೆ ಬೇರೆ ಬೇರೆ ಯೋನಿಗಳಲ್ಲೂ ವಾನರರೇ ಜನಿಸಿದರು. ಇಡೀ ಭೂಮಿ ಆ ಕಾಲದಲ್ಲಿ ವಾನರಸೇನೆಯಿಂದ ತುಂಬಿ ಹೋಯಿತು. ಇಲ್ಲಿ ಭಗವಂತನ ಅವತಾರ ಪೂರ್ವದಲ್ಲೇ ಎಲ್ಲಾ ದೇವತೆಗಳು ಜನಿಸಿ ಭಗವಂತನ ಕಾರ್ಯಕ್ಕೆ ಯಾವಾಗ ಕೈಜೋಡಿಸುವೆವು ಎಂಬ ತವಕದಲ್ಲಿ ಕಾಯುತ್ತಿದ್ದರು. ದುಷ್ಟ ಶಿಕ್ಷೆಯಿರಲಿ-ಶಿಷ್ಟ ರಕ್ಷೆಯಿರಲಿ-ಲೋಕೋದ್ಧಾರವಿರಲಿ ದೇವತೆಗಳ ಈ ಉತ್ಕಟತೆ ನಮ್ಮಲ್ಲಿ ಸದಾ ಇರಬೇಕು. ಯಾವುದಾದರೂ ಉತ್ತಮ ಕೆಲಸ ಆರಂಭವಾಗಲಿ ಆಮೇಲೆ ಕೈ ಜೋಡಿಸುವ ಎಂಬ ಆಲಸ್ಯ ಅಥವಾ ನಮಗೇಕೆ ಲೋಕದ ಚಿಂತೆ ಎಂಬ ತಾತ್ಸಾರ ಇದಾವುದೂ ನಮಗೆ ತರವಲ್ಲ. ಉತ್ತಮ ಕೆಲಸಗಳಿಗೆ ಸದಾ ಪೂರ್ವದಲ್ಲೇ ನಮ್ಮನ್ನು ನಾವು ಸದಾ ಸನ್ನದ್ಧಸ್ಥಿತಿಯಲ್ಲಿ ಇರಿಸಿದಾಗ ಭಗವಂತನ ಕೃಪೆ ದೇವತೆಗಳಿಗೆ ದೊರಕಿದಂತೆ ನಮಗೂ ದೊರಕೀತು. ಹಾಗಿಲ್ಲದಿದ್ದಾಗ ಜಗದ ಒಳಿತಿನ ದೃಷ್ಟಿ ಇಲ್ಲದಿದ್ದಾಗ ಯಾವ ತಪವೂ-ಪೂಜೆಯೂ-ಮಡಿಮೈಲಿಗೆಯೂ-ಜಪತಪಾನುಷ್ಠಾನವೂ ನಮ್ಮನ್ನು ಮುಕ್ತಿಯೆಡೆಗೆ ಕರೆದೊಯ್ಯಲಾರವು._

 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩