ವಿಕ್ರಮೋರ್ವಶೀಯ ೪
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-೪
*अस्याः सर्गविधौ प्रजापतिरभूच्चन्द्रो नु कान्तप्रभः । शृङ्गारैकरसः स्वयं नु मदनो मासो नु पुष्पाकरः । वेदाभ्यासजडः कथं नु विषयव्यावृत्तकौतुहलो निर्मातुं प्रभवेन्मनोहरमिदं रूपं पुराणो मुनिः ।।*
_ಊರ್ವಶಿಯನ್ನು ಕಂಡ ಪುರೂರವನ ಮನದ ಭಾವನೆ ಹೊರಹೊಮ್ಮಿದ ಬಗೆ. ನಾರಾಯಣ ಮುನಿಯ ಮಗಳೇ ಇವಳು! ಇರಲಾರಳು. ಬಹುಶಃ ಚಂದ್ರನೇ ಸೃಷ್ಟಿಕರ್ತನಾಗಿ ತನ್ನ ಕಾಂತಿಯಿಂದ ಇವಳನ್ನು ಸೃಷ್ಟಿ ಮಾಡಿದನೋ! ಅಥವಾ ಶೃಂಗಾರವೇ ಮುಖ್ಯವಾದ ರಸವಾಗಿರುವ ಮನ್ಮಥನು ಇವಳನ್ನು ನಿರ್ಮಿಸಿದನೋ! ಅಥವಾ ಮಾಸಗಳಲ್ಲೆಲ್ಲ ಸೊಗಸಾದ ಪ್ರಕೃತಿಯ ಯೌವ್ವನವನ್ನು ಹೆಚ್ಚಿಸುವ ವಸಂತನು ತನ್ನ ಸೃಷ್ಟಿಯ ಸೊಬಗನ್ನು ಹೀಗೆ ಉಣಬಡಿಸಿದನೋ! ಏಕೆಂದರೆ ನಿರಂತರ ವೇದ-ಶಾಸ್ತ್ರ-ಪುರಾಣಗಳು ಅಭ್ಯಾಸದಿಂದ ಶಬ್ದ ಸ್ಪರ್ಶ ಮೊದಲಾದ ಇಂದ್ರಿಯಗಳ ಸೆಳೆತದ ವಿಷಯಗಳಿಂದ ದೂರವಾದ ಪರಮಸ್ವರೂಪವೇ ಪ್ರಧಾನ ರೂಪವಾದ ಆ ಮುನಿಯು ಇಂತಹ ಸೌಕುಮಾರ್ಯದ-ತ್ರಿಲೋಕಗಳ ಸೌಂದರ್ಯವನ್ನು ನಾಚಿಸುವ-ಜಗದ ಸೊಬಗೆಲ್ಲವೂ ಒಂದೆಡೆ ಮಡುಗಟ್ಟಿದಂತಿರುವ ಈ ಮನೋಹರ ರೂಪವನ್ನು ಹೇಗೆ ಸೃಷ್ಟಿಸಿಯಾನು! ಚಂದ್ರನ ಬೆಳದಿಂಗಳು, ಮನ್ಮಥನ ಮೋಹಕ-ಆಕರ್ಷಕ ರೂಪ, ವಸಂತದ ನವೋಲ್ಲಾಸ ಎಲ್ಲವೂ ಒಂದಡೆ ಮೇಳೈಸಿದಂತೆ. ಅಬ್ಬಾ ನಿಜಕ್ಕೂ ಮುನಿಯ ಮಗಳೆಂದು ತಿಳಿದು ಆಶ್ಚರ್ಯವು ಮತ್ತೆ ಮತ್ತೆ ಮೂಡುತ್ತಿದೆ. ಊರ್ವಶಿಯ ಸೌಂದರ್ಯವನ್ನು ಕಂಡು ಕಣ್ಣು ತುಂಬಿಕೊಂಡ ರಸಜ್ಞನಾದ ಪುರೂರವನ ಸಹಜಭಾವ ಕಾಳಿದಾಸನ ಪದಗಳಲ್ಲಿ ಮೂಡಿಬಂದ ಬಗೆ ಹೀಗೆ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ