ವಿಕ್ರಮೋರ್ವಶೀಯ ೨
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-೨
*अग्रे यान्ति रथस्य रेणुपदवीं चूर्णीभवन्तो घनाः चक्रभ्रान्तिररान्तरेषु जनयत्यन्यामिवारावलीम् । चित्रन्यस्तमिवाचलं हयशिरस्यायामवच्चामरं यष्ट्यग्रे च समं स्थितो ध्वजपटः प्रान्ते च वेगानिलात् ।।*
_ಕಾಳಿದಾಸನ ಒಂದು ಸುಂದರ ಕಲ್ಪನೆ. ಹಿಂದೆ ಈಗಿನಂತೆ ನೂರು ನೂರೈವತ್ತು ಕಿಲೋಮೀಟರ್ ವೇಗದಲ್ಲಿ ಹೋಗುವ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳಿರಲಿಲ್ಲ. ಆಗ ಇದ್ದ ವೇಗದ ವಾಹನಗಳು ರಥಗಳು. ರಥ ಓಡಿಸುವ ಕೆಲವು ಪರಿಣತ ಸಾರಥಿಗಳು ಬಹಳ ವೇಗದಿಂದ ಆಕಾಶದಲ್ಲಿ ಹೋಗುತ್ತಿರುವಂತೆ ಓಡಿಸುತ್ತಿದ್ದರು. ಇದಕ್ಕೆ ಸಾರಥಿಯ ಚಾಕಚಕ್ಯತೆ ಹಾಗೂ ಅಶ್ವಗಳ ಗುಣಮಟ್ಟ ಎರಡೂ ಸಹಕಾರಿಯಾಗಿತ್ತು. ಪ್ರಕೃತ ವಿಕ್ರಮೋರ್ವಶೀಯ ನಾಟಕದಲ್ಲಿ ಕೇಶಿಯೆಂಬ ದೈತ್ಯನು ಅಪ್ಸರೆಯಾದ ಊರ್ವಶಿಯನ್ನು ಅಪಹರಿಸಿದ್ದಾನೆ. ರಂಭೆಯ ಕೋರಿಕೆಯ ಮೇರೆಗೆ ನಾಟಕದ ನಾಯಕ ಪಾತ್ರಧಾರಿ ಪುರೂರವ ಧಾವಿಸಿದ್ದಾನೆ. ಸಹಜವಾಗಿ ಅವನು ವೇಗದಿಂದ ರಾಕ್ಷಸನ ಮನೆಗೆ ಹೋಗುತ್ತಿದ್ದಾನೆ. ತನ್ನ ಸಾರಥಿಯು ಅತ್ಯಂತ ವೇಗದಿಂದ ರಥವನ್ನು ಚಲಾಯಿಸುವುದನ್ನು ಕಂಡು ಆನಂದದಿಂದ ವರ್ಣಿಸುತ್ತಿದ್ದಾನೆ._
_ರಥವು ಎಷ್ಟು ವೇಗದಿಂದ ಸಾಗುತ್ತಿದೆಯೆಂದರೆ ಆಕಾಶಮಾರ್ಗದಲ್ಲಿರುವ ಮೋಡಗಳು ರಥದ ಗಾಲಿಗೆ ಸಿಕ್ಕಿ ಪುಡಿಯಾಗಿ ಧೂಳು ಎಲ್ಲೆಡೆ ಹರಡಿದಂತಿದೆ. ರಥದ ಗಾಲಿಯ ಮಧ್ಯಭಾಗವು ಎರಡಾಗಿ ತೋರುತ್ತಿದೆ. ಚಕ್ರವು ವೇಗವಾಗಿ ಉರುಳುವಾಗ ಅನೇಕದ ಭ್ರಮೆಯನ್ನು ಹುಟ್ಟಿಸುತ್ತದೆ. ಅದನ್ನೇ ಕವಿ ಇಲ್ಲಿ ವರ್ಣಿಸಿದ್ದಾನೆ. ಪರ್ವತಗಳು ಚಿತ್ರದಲ್ಲಿ ಬರೆದಿರುವಂತೆ ತೋರುತ್ತಿವೆ. ಚಿತ್ರಶಾಲೆಯಲ್ಲಿ ನೂರಾರು ಚಿತ್ರ ನೋಡುವ ಭರದಲ್ಲಿ ಸುಮ್ಮನೆ ಕಣ್ಣಾಡಿಸಿ ಮುಂದೋಡುವಂತೆ ಇಲ್ಲೂ ಯಾವ ಪರ್ವತ ಅಥವಾ ಎಷ್ಟು ಎತ್ತರ! ಏನು ಸೊಬಗು ಎನ್ನುವುದನ್ನು ನೋಡುವಷ್ಟರಲ್ಲಿ ಅನೇಕ ಯೋಜನ ಕ್ರಮಿಸುತ್ತಿದೆ ಈ ರಥ. ಅಶ್ವಗಳ ತಲೆಯ ಮೇಲೆ ವೇಗವು ಚಾಮರವನ್ನು ಬೀಸುತ್ತಿರುವಂತೆ ತೋರುತ್ತಿದೆ. ಎದ್ದು ನಿಂತ ಕುದುರೆಯ ರೋಮಗಳು ದೇವರಿಗೆ ಸತತವಾಗಿ ಬೀಸುವ ಚಾಮರದ ಭ್ರಾಂತಿಯನ್ನು ತರುತ್ತಿವೆ. ವೇಗದಿಂದ ಉಂಟಾದ ಗಾಳಿಯು ರಥದ ಮೇಲಣ ಧ್ವಜವು ಎತ್ತ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಒಮ್ಮೆ ಮಧ್ಯದಲ್ಲಿ ಇರುವಂತೆ ಕಂಡರೆ ಅರೆಘಳಿಗೆಯಲ್ಲಿ ಎಡಪಾರ್ಶ್ವದಲ್ಲಿ ಕೆಲಸಮಯದಲ್ಲಿ ಬಲಪಾರ್ಶ್ವದಲ್ಲಿ ಇದೆಯೇನೋ ಎಂಬಂತೆ ತೋರುತ್ತಿದೆ. ನಿಜವಾಗಿ ಆದರೆ ರಥದ ಮೇಲಣ ಕೇತವು ಮಧ್ಯಭಾಗದಲ್ಲಿ ಇರುತ್ತದೆ. ಇಲ್ಲಿ ವೇಗದಿಂದ ಸುತ್ತಲ ಸಹಜ ಚಿತ್ರವೆಲ್ಲವೂ ವಿಚಿತ್ರವಾಗಿ ಕಂಡುಬರುವುದನ್ನು ಕವಿ ತನ್ನ ಪದಗಳಲ್ಲಿ ಸೆರೆಹಿಡಿದಿದ್ದಾನೆ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ