ರಾಮಾಯಣ ೧೮೪
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೪🏝📖
*ಪುತ್ರತ್ವಂ ತು ಗತೇ ವಿಷ್ಣೌ ರಾಜ್ಞಸ್ತಸ್ಯ ಮಹಾತ್ಮನಃ | ಉವಾಚ ದೇವತಾಃ ಸರ್ವಾಃ ಸ್ವಯಂಭೂರ್ಭಗವಾನಿದಮ್ || ವಿಷ್ಣೋಃ ಸಹಾಯಾನ್ಬಲಿನಃ ಸೃಜಧ್ವಂ ಕಾಮರೂಪಿಣಃ || ಮಾಯಾವಿದಶ್ಚ ಶೂರಾಂಶ್ಚ ವಾಯುವೇಗಸಮಾಂಜವೇ|*
_ಭಗವಂತನ ಅವತಾರ ದಶರಥನ ಪುತ್ರನಾಗಿ ಆಗುತ್ತಿರಲು ಬ್ರಹ್ಮನು ದೇವತೆಗಳನ್ನು ಕುರಿತು ನುಡಿದನು- ದೇವತೆಗಳೇ ನೀವೆಲ್ಲರೂ ವಿಷ್ಣುವಿನ ಸಹಾಯಕ್ಕೆ ಇಚ್ಛೆ ಬರುವ ರೂಪಧಾರಿಗಳಾದ ಪ್ರಾಣಿಗಳನ್ನು ನಿಮ್ಮ ಪ್ರಭಾವದಿಂದಾಗಿ ಹುಟ್ಟಿಸಿರಿ. ಶೂರರೂ, ವಾಯುವೇಗದವರೂ, ನೀತಿಜ್ಞರೂ, ಬುದ್ಧಿವಂತರೂ ಆಗಿ ವಿಷ್ಣುವಿಗೆ ಸಮಾನ ಪರಾಕ್ರಮ ಉಳ್ಳವರಾಗಿ ಸಾಮಾದಿ ಚತುರೋಪಾಯಗಳನ್ನು ಅರಿತವರೂ,ಸಿಂಹಸದೃಶ ಬಲಿಷ್ಠರೂ,ದೀರ್ಘಾಯುಷಿಗಳಾಗಿಯೂ ಇರುವರಾಗಿರಬೇಕು. ಶ್ರೇಷ್ಠ ಅಪ್ಸರೆಯರಿಂದಲೂ,ಗಂಧರ್ವಸ್ತ್ರೀಯರಿಂದಲೂ, ಯಕ್ಷ-ಪನ್ನಗ ಸ್ತ್ರೀಯರಿಂದಲೂ, ವಿದ್ಯಾಧರ ಕನ್ಯೆಯರಿಂದಲೂ, ಕಿನ್ನರ-ವಾನರ ಸ್ತ್ರೀಯರಿಂದಲೂ, ನಿಮ್ಮಷ್ಟೇ ಬಲಿಷ್ಠರಾದ ವಾನರರೂಪಿಗಳನ್ನು ಸೃಷ್ಟಿಸಿರಿ ಎಂದು ಆಜ್ಞಾಪಿಸಿದನು._
_ಇಲ್ಲಿ ತಮ್ಮ ತಮ್ಮ ಮಡದಿಯರಲ್ಲಿ ಮಕ್ಕಳನ್ನು ಪಡೆಯದಿರಲು ಪಾರ್ವತಿಯ ಶಾಪ ಕಾರಣವಾಗಿತ್ತು. ಹಾಗಾಗಿ ತಮ್ಮ ಕ್ಷೇತ್ರದಲ್ಲಿ ದೇವತೆಗಳು ಮಕ್ಕಳನ್ನು ಪಡೆಯುವುದು ಸಾಧ್ಯವಾಗದ ಸಂಗತಿ. ಹಾಗಾಗಿ ಅಪ್ಸರೆ-ಗಂಧರ್ವ ಹೀಗೆ ನಾನಾ ಸ್ತ್ರೀಯರನ್ನು ಆಶ್ರಯಿಸಿ ವಾನರರನ್ನು ಸೃಷ್ಟಿಸಿದರು. ನಂದಿಕೇಶ್ವರನ ಶಾಪ ಸತ್ಯ ಮಾಡಲು ರಾವಣನ ವಧೆಗೆ ಕಪಿಸೈನ್ಯ ತಯಾರಾಗಿ ನಿಂತಿತು. ಆ ಕಾಲದ ಯುದ್ಧಕ್ಕೆ ಸಜ್ಜಾದ ಎಲ್ಲಾ ಪ್ರಾಣಿವರ್ಗವೂ ಸಾಮಾನ್ಯ ಪ್ರಾಣಿಗಳಾಗಿರಲಿಲ್ಲ ಎಲ್ಲವೂ ದೇವತಾಂಶಸಂಭೂತರಾಗಿ ದೇವತೆಗಳ ಲಕ್ಷಣವನ್ನು ಹೊಂದಿದ್ದವು. ಹಾಗಾಗಿಯೇ ಸಾಮಾನ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ, ಆಯುಷ್ಯ, ಬುದ್ಧಿ, ನೀತಿ ಎಲ್ಲವೂ ತಿಳಿದಿತ್ತು. ವಿಕಾಸವಾದಕ್ಕೆ ರಾಮಾಯಣ ಉದಾಹರಿಸುವ ಜನರು ಈ ದೇವಸಂಕಲ್ಪವನ್ನು ಅರಿತಿಲ್ಲ. ಜಾಂಬವಂತನು ಸಾಕ್ಷಾತ್ ಆಗಿ ಬ್ರಹ್ಮನು ಆಕಳಿಸುವ ಸಂದರ್ಭ ಜನಿಸಿದ್ದನು._
_ಪರಮಾತ್ಮನೇ ಸರ್ವಸಮರ್ಥನಾದರೂ ಏಕೆ ಇವರೆಲ್ಲರ ಸಹಾಯ ಎಂದರೇ ಲೋಕದ ಭಾರವನ್ನು ಇಳಿಸುವ ಹೊಣೆ ಪೂರ್ಣ ದೇವಸಮೂಹಕ್ಕೆ ಇರುತ್ತದೆ. ಪರಮಾತ್ಮನು ಅದಕ್ಕನುಸಾರವಾಗಿ ಜನ್ಮ ತಳೆದಾಗ ದೇವತೆಗಳು ತಮ್ಮ ತಮ್ಮ ಜವಾಬ್ದಾರಿ ನಡೆಸಲು ಬೇರೆ ಬೇರೆ ರೂಪದಿಂದ ಎಲ್ಲಾ ಕಾಲದಲ್ಲೂ ಇಳಿದುಬರುತ್ತಾರೆ._
_ಒಂದು ಒಳ್ಳೆಯ ಕೆಲಸದಲ್ಲಿ ಯಾರಾದರೂ ತೊಡಗಿದರೆ ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುವ ದೇವಚಿಂತನೆ ನಮಗೂ ಸದಾ ಇರಬೇಕು. ಹಾಗೆ ಮಾಡದೇ ಕೊಂಕು ನುಡಿಯುವುದೋ, ತಟಸ್ಥರಾಗಿರುವುದೋ, ನಮ್ಮ ವೈಯಕ್ತಿಕ ಹಿತಚಿಂತನೆಯಲ್ಲಿ ಮುಳುಗುವುದೋ, ಉತ್ತಮ ಕೆಲಸಗಳಿಗೆ ತಡೆ ಒಡ್ಡುವುದೋ ಮಾಡಿದರೆ ಯಾವ ತಪ-ಪೂಜೆ-ಜ್ಞಾನಗಳೂ ನಮ್ಮನ್ನು ಉದ್ಧರಿಸಲಾರವು. ಲೋಕದ ಒಳಿತಿಗಾಗಿಯೇ ನಮ್ಮೀ ದೇಹಧಾರಣೆ ಎಂಬುದನ್ನು ಈ ಸನ್ನಿವೇಶ ಸದಾ ನಮಗೆ ನೆನಪಿಸಿಕೊಡುತ್ತದೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ