ರಾಮಾಯಣ ೧೮೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೨🏝📖

*ತತೋ ವೈ ಯಜಮಾನಸ್ಯ ಪಾವಕಾದತುಲಪ್ರಭಮ್ | ಪ್ರಾದುರ್ಭೂತಂ ಮಹದ್ಭೂತಂ ಮಹಾವೀರ್ಯಂ ಮಹಾಬಲಮ್ || ಕೃಷ್ಣಂ ರಕ್ತಾಂಬರಧರಂ ರಕ್ತಾಸ್ಯಂ ದುಂದುಭಿಸ್ವನಮ್ | ಸ್ನಿಗ್ಧಹರ್ಯಕ್ಷತನುಜಶ್ಮಶ್ರುಪ್ರವರಮೂರ್ಧಜಮ್||*

_ಭಗವಂತನು ಅವತಾರ ತಾಳಲೆಂದು ನಿಶ್ಚಯಿಸಿದ ಕಾಲದಲ್ಲಿ ದಶರಥನು ಪುತ್ರಕಾಮೇಷ್ಟಿ ಯಜ್ಞದಲ್ಲಿ ಪಾಲ್ಗೊಂಡಿದ್ದನು. ಯಜ್ಞದಲ್ಲಿ ದೇವತೆಗಳು ಆಹುತಿ ಸ್ವೀಕರಿಸಿ ಪೂರ್ಣಾಹುತಿಯೂ ನಡೆಯಿತು. ಆಗ ಆಹವನೀಯ ಯಜ್ಞ ಕುಂಡದ ಮಧ್ಯಭಾಗದಿಂದ ಅಪಾರ ತೇಜಸ್ಸಿನ-ಮಹಾಬಲಿಷ್ಠನಾದ-ಮಹಾಶಕ್ತಿಯಾಲಿಯೊಬ್ಬನು ಆವಿರ್ಭವಿಸಿದನು. ಇಲ್ಲಿ ಮಹದ್ಭೂತಂ ಎಂದಿದ್ದಾರೆ. ವಿಷ್ಣುವನ್ನೂ ಪುರಾಣಗಳು ಮಹದ್ಭೂತಂ ಎಂದೇ ಕರೆದಿದ್ದಾರೆ. ಭಗವಂತನ ತೇಜಸ್ಸನ್ನು ಅವನಲ್ಲದೆ ಬೇರಾರು ಧರಿಸಿಯಾರು! ಆ ತೇಜಸ್ವಿಯ ಬಣ್ಣ ಕಪ್ಪು, ಮುಖವು ಕೆಂಪು, ಧ್ವನಿಯು ನಗಾರಿಯಂತೆ ಘನಗಂಭೀರ, ಸಿಂಹದ ಕೇಸರದಂತೆ ಮುಖದಲ್ಲೂ-ಶಿರದಲ್ಲೂ ನೀಳಕೇಶರಾಶಿ, ನಾನಾ ಶುಭಲಕ್ಷಣಗಳು ಎದ್ದು ತೋರುವಂತಿದ್ದವು, ಅನೇಕ ದಿವ್ಯವಾದ ಆಭರಣಧಾರಿ,ಪರ್ವತದ ಶಿಖರದಂತೆ ಉನ್ನತ ಕಾಯ, ವ್ಯಾಘ್ರದಂತೆ ನಿಧಾನದ ನಡೆ, ಸೂರ್ಯನ ತೇಜಸ್ಸು, ಅಗ್ನಿಯ ಜ್ವಾಲೆಯೇ ಮೇಲೆದ್ದು ಬಂದಂತೆ ಹೊಳೆಯುವ ಆ ಪುರುಷನು ಚಿನ್ನದ ಪಾತ್ರೆಯಲ್ಲಿ ಬೆಳ್ಳಿಯ ಮುಚ್ಚಳ ಹೊಂದಿದ್ದ ದಿವ್ಯಪಾಯಸದಿಂದ ಕೂಡಿದ್ದ ಪಾತ್ರೆಯನ್ನು ತಂದು ಕೊಟ್ಟನು._

_ಭಗವಂತನ ಅವತಾರವೆಂದರೆ ಅದು ಪ್ರಕೃತಿಯಲ್ಲಿ ಪೂರ್ಣತೆ ಹೊಂದಿರುವ ಪ್ರತಿಯೊಂದರ ಸ್ವರೂಪವೇ ಹೌದು. ಕೃಷ್ಣವರ್ಣವು ಮುಂದೆ ಲೋಕದ ಕತ್ತಲನ್ನು ಕಳೆಯುವ ಅರ್ಥ ಧ್ವನಿಸಿದರೆ, ಕೆಂಪು ಧರ್ಮದ ಹಿರಿಮೆ ಎತ್ತಿ ಹಿಡಿಯುವ ಸಾರವನ್ನು ತೋರಿಸಿತು. ಸಿಂಹದ ಕೇಶರಾಶಿಯು ಶತ್ರುಗಳ ಪಾಲಿಗೆ ಸಿಂಹಸ್ವಪ್ನನಾಗಿರುವೆನೆಂದೂ, ಶುಭಲಕ್ಷಣಗಳು ಸಾಮಾನ್ಯರ ಉದ್ಧಾರವೇ ತನ್ನ ಗುರಿಯೆಂದೂ, ಆಭರಣಗಳ ದಿವ್ಯತೆಯು ತನ್ನ ಒಂದೊಂದು ಗುಣಗಳ ಔನ್ನತ್ಯವನ್ನೂ, ಮಹಾಕಾಯವು ಅತುಲ ಪರಾಕ್ರಮವನ್ನೂ ಹಾಗೂ ಆಜಾನುಬಾಹು ಶರೀರವನ್ನೂ, ವ್ಯಾಘ್ರದ ಪದವಿನ್ಯಾಸವು ಶತ್ರುಗಳ ಮೇಲೆ ಸದಾ ಎರಗುವ ಛಾತಿಯನ್ನೂ, ಸೂರ್ಯನ ಕಾಂತಿಯು ಸೂರ್ಯವಂಶಕ್ಕೆ ಕಿರೀಟಪ್ರಾಯತೆಯನ್ನೂ, ಬೆಂಕಿಯಂತೆ  ಹೊಳಪು ನಡೆ-ನುಡಿಯಲ್ಲಿ ಚಿತ್ತಿಲ್ಲದ ಪ್ರಭೆಯನ್ನೂ, ಚಿನ್ನದ ಪಾತ್ರೆಯು ವೇದೋಕ್ತ ಮಂತ್ರದಂತೆ ಸುವರ್ಣದ ಪಾತ್ರೆಯಲ್ಲಿ ಮುಚ್ಚಿರುವ ಸತ್ಯಸ್ವರೂಪವೆಂದೂ, ಬೆಳ್ಳಿಯ ಮುಚ್ಚಳವು ಪೂರ್ಣ ಜನಾನುರಾಗತೆಯನ್ನೂ ಹಾಗೂ ಸಕಲರಿಗೂ ಸುಖನೀಡುವ ಭಾವವನ್ನೂ, ಎರಡು ತೋಳುಗಳಿಂದ ಹೊತ್ತು ತಂದ ರೀತಿಯು ಲೋಕವನ್ನು ಇದೇ ಎರಡು ಬಾಹುಗಳಿಂದ ಉದ್ಧರಿಸುವೆನು ಎಂಬಂತೆ ಇತ್ತು ರಾಮನ ಜನನ ಪೂರ್ವದ ಯಜ್ಞಫಲದ ಅಗಮನ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩