ಮಹಾಭಾರತ ೫೮
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೮
*ದಗ್ಧೈಕದೇಶಾ ಬಹವೋ ನಿಷ್ಟಪ್ತಾಶ್ಚ ತಥಾಪರೇ ಸ್ಫುಟಿತಾಕ್ಷಾ ವಿಶೀರ್ಣಾಶ್ಚ ವಿಪ್ಲುತಾಶ್ಚ ವಿಚೇತಸಃ*
_ಅರ್ಜುನ ಹಾಗೂ ಕೃಷ್ಣನ ಬೆಂಗಾವಲಿನಲ್ಲಿ ಅಗ್ನಿಯು ಎಲ್ಲೆಡೆ ವ್ಯಾಪಿಸಿಕೊಂಡು ಖಾಂಡವವನವನ್ನು ತಿನ್ನಲು ಆರಂಭಿಸಿದನು. ಆ ಸಮಯದಲ್ಲಿ ಪ್ರಾಣಭಯದಿಂದ ಹೆದರಿದ ಜೀವಿಗಳು ದಿಕ್ಕು ದಿಕ್ಕಿಗೆ ಓಡಿಹೋದವು. ಕಣ್ಣಿಗೆ ಕಂಡ ಪ್ರಾಣಿಗಳಿರುವಲ್ಲಿ ಅವರೀರ್ವರ ರಥಗಳು ಧಾವಿಸಿ ಅಗ್ನಿಯು ಆಕ್ರಮಿಸುವಂತೆ ಮಾಡುತ್ತಿತ್ತು. ಕೆಲವು ಪ್ರಾಣಿಗಳ ಶರೀರದ ಒಂದು ಭಾಗ ಸುಟ್ಟು ಹೋಯಿತು. ಕೆಲವುಗಳ ಶರೀರ ಸಂಪೂರ್ಣ ಸುಟ್ಟಿತು. ಕೆಲವು ಪ್ರಾಣಿಗಳ ಕಣ್ಣುಗಳು ಒಡೆದು ಹೋದವು. ಇನ್ನು ಕೆಲವು ತತ್ತರಿಸಿದವು. ಇನ್ನು ಕೆಲವು ಪ್ರಜ್ಞೆ ತಪ್ಪಿ ಬಿದ್ದವು. ಇತರ ಕೆಲವು ಜೀವಿಗಳು ತಮ್ಮ ಮಕ್ಕಳನ್ನು, ತಂದೆತಾಯಂದಿರನ್ನೂ , ಅಪ್ಪಿಕೊಂಡೇ ಮರಣ ಹೊಂದಿದವು. ಹೀಗೆ ಭಯಾನಕ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು._
*ಜಲಸ್ಥಾನೇಷು ಸರ್ವೇಷು ಕ್ವಾಥ್ಯಮಾನೇಷು ಭಾರತ ಗತಸತ್ವಾಃಸ್ಮ ದೃಶ್ಯಂತೇ ಕೂರ್ಮಮತ್ಸ್ಯಾಃ ಸಹಸ್ರಶಃ*
_ಜಲಾಶಯಗಳು ಕುದಿಯುತ್ತಿರಲಾಗಿ ಸಾವಿರಾರು ಅಮೆಗಳೂ ಮೀನುಗಳೂ ಪ್ರಾಣ ಬಿಟ್ಟವು.ಬರೀ ನೆಲದ ಮೇಲಲ್ಲದೆ ಅಗ್ನಿ ಆ ಪ್ರದೇಶದ ಎಲ್ಲಾ ಭೂತಗಳೊಡನೆ ಸೇರಿ ಸಿಕ್ಕಸಿಕ್ಕವರನ್ನೆಲ್ಲಾ ಬೂದಿ ಮಾಡಿದನು. ಹೊತ್ತಿಕೊಂಡು ಹೋಗುತ್ತಿರುವ ಶರೀರ ಇರುವ ಜೀವಿಗಳು ಶರೀರವೆತ್ತು ಬಂದ ಅಗ್ನಿಗಳಂತೆ ತೋರುತ್ತಿದ್ದವು. ದೂರಕ್ಕೆ ಹಾರಿಹೋಗುತ್ತಿದ್ದ ಪ್ರಾಣಿಗಳನ್ನು ಅರ್ಜುನನು ತುಂಡುತುಂಡಾಗಿ ಕತ್ತರಿಸಿ ಉರಿಯುತ್ತಿದ್ದ ಬೆಂಕಿಗೆ ಎಸೆಯುತ್ತಿದ್ದನು. ಅಗ್ನಿಯು ಬಹಳ ಸಂತೋಷದಿಂದ ಎತ್ತರೆತ್ತರಕ್ಕೆ ತನ್ನ ಜ್ವಾಲೆಗಳನ್ನು ಚಾಚಲು ದೇವತೆಗಳು ಒಮ್ಮೆ ಉದ್ವೇಗಗೊಂಡರು.ದೇವತೆಗಳ ಕೋರಿಕೆಯಂತೆ ಇಂದ್ರನು ಅದನ್ನು ನಿಯಂತ್ರಿಸಲು ಧಾವಿಸುತ್ತಾನೆ._
*ಅಸಂಪ್ರಾಪ್ತಾಸು ತಾ ಧಾರಾಸ್ತೇಜಸಾ ಜಾತವೇದಸಃ ಖ ಏವ ಸಮಶುಷ್ಯಂತ ನ ಕಾಶ್ಚಿತ್ಪಾವಕಂ ಗತಾಃ*
_ಇಂದ್ರನು ಬೆಂಕಿ ನಂದಿಸಲು ಜೋರಾಗಿ ಮಳೆ ಸುರಿಸಿದಾಗ ಆ ಜಲಧಾರೆಗಳು ವನವನ್ನು ತಲುಪದೆಯೇ ಅಗ್ನಿಯ ತೇಜಸ್ಸಿನಿಂದ ಅಂತರಿಕ್ಷದಲ್ಲೇ ಒಣಗಿಹೋದವು. ಯಾವ ಧಾರೆಯೂ ವನದ ಕೊಂಚ ಭಾಗವನ್ನೂ ಸ್ಪರ್ಶಿಸಲಿಲ್ಲ. ಇಂದ್ರನು ಮತ್ತಷ್ಟು ಮಳೆ ಸುರಿಸಲಾಗಿ ಅರ್ಜುನನು ತನ್ನ ಬಾಣಗಳ ಮೂಲಕ ಮಳೆಯನ್ನು ದೂರ ಮಾಡಿಸಿ ಅಗ್ನಿಯ ವಿಘ್ನವನ್ನು ಪರಿಹರಿಸಿದನು. ಇಂತಹ ದೃಶ್ಯ ಈಗಲೂ ಕೆಲವೊಮ್ಮೆ ನಾವು ನೋಡುತ್ತೇವೆ.ಇಲ್ಲೆಲ್ಲೋ ಮಳೆಯಾಗುವ ಲಕ್ಷಣವಿದ್ದಾಗ ಇನ್ನೆಲ್ಲೂ ಒಣ ಜಾಗದಲ್ಲಿ ಅಕಸ್ಮಾತ್ತಾಗಿ ಮಳೆಯಾಗುತ್ತದೆ. ಅದನ್ನು ಅರ್ಜುನನಂತಹವರ ಕೃತ್ಯ ಎನ್ನಬಹುದೇನೋ! ಇತ್ತ ಕಡೆ ತಕ್ಷಕನ ಮಗನಾದ ಅಶ್ವಸೇನನು ಇಲ್ಲಿ ಬೆಂಕಿಯಿಂದ ಒದ್ದಾಡುತ್ತಿರಲು ತಕ್ಷಕನು ಅಲ್ಲಿರದೇ ಕುರುಕ್ಷೇತ್ರದಲ್ಲಿ ಇದ್ದನು. ಸರ್ಪಪುತ್ರಿಯಾದ ತಕ್ಷಕನ ಪತ್ನಿ ತನ್ನ ಮಗನನ್ನು ನುಂಗಿ ಅವನನ್ನು ರಕ್ಷಿಸಿದನು._
*ತಂಮುಮೋಚಯಿಷುರ್ವಜ್ರೀ ವಾತವರ್ಷೇಣ ಪಾಂಡವಮ್ ಮೋಹಯಾಮಾಸ ತತ್ಕಾಲಮಶ್ವಸೇನಸ್ತ್ವಮುಚ್ಯತ*
_ಅವಳು ಮೊದಲು ಅವನ ತಲೆಯನ್ನು ನುಂಗಿ ನಂತರ ಬಾಲವನ್ನು ನುಂಗುತ್ತಾ ಮೇಲೆ ಹಾರುತ್ತಾಳೆ. ಕೂಡಲೇ ಅದನ್ನು ಕಂಡ ಅರ್ಜುನನು ಅವಳ ತಲೆ ಕತ್ತರಿಸುತ್ತಾನೆ.ಇದನ್ನು ನೋಡುತ್ತಿದ್ದ ಇಂದ್ರನು ತಕ್ಷಕನ ಮೇಲಿನ ಪ್ರೀತಿಯಿಂದ ಬಿರುಗಾಳಿ ಉಂಟುಮಾಡಿ ಅರ್ಜುನನಿಗೆ ದಿಗ್ಭ್ರಮೆ ಉಂಟುಮಾಡಿದನು. ಆಗ ಕ್ಷಣದಲ್ಲಿ ಅಶ್ವಸೇನನು ತಪ್ಪಿಸಿಕೊಂಡನು. ಇದನ್ನು ಕಂಡ ಆ ಕೃಷ್ಣಾರ್ಜುನರು ಕುಟಿಲತನದಿಂದ ತಪ್ಪಿಸಿಕೊಂಡ ಅವನಿಗೆ *ನೀನು ಆಶ್ರಯಹೀನನಾಗು* ಎಂದು ಶಪಿಸುತ್ತಾರೆ. ಇದೇ ಅಶ್ವಸೇನನು ಮುಂದೆ ಕರ್ಣನ ಸರ್ಪಾಸ್ತ್ರದಲ್ಲಿ ಸೇರಿ ಅರ್ಜುನನ ತಲೆ ತೆಗೆಯಲು ಪ್ರಯತ್ನಿಸಿ ಕೃಷ್ಣನ ಕೃಪೆಯಿಂದ ವಿಫಲನಾಗುತ್ತಾನೆ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ