ಮಹಾಭಾರತ ೬೦

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೦

*ನರನಾರಾಯಣೌ ದೇವೌ ತಾವೇತೌ ವಿಶ್ರುತೌ ದಿವಿ ಭವಾನಪ್ಯಭಿಜಾನಾತಿ ಯದ್ವೀರ್ಯೌ ಯತ್ಪರಾಕ್ರಮೌ*

_ಕೃಷ್ಣಾರ್ಜುನರೊಡನೆ ಖಾಂಡವವನದಲ್ಲಿ ಇಂದ್ರನು ಭೀಕರವಾಗಿ ಸೆಣಸುತ್ತಿದ್ದಾಗ ದೇವತೆಗಳ ಬೆಂಬಲ‌ ದೊರೆತರೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಇಂದ್ರನು ಅವರೀರ್ವರ ಪರಾಕ್ರಮ ನೋಡುತ್ತಾ ತಟಸ್ಥನಾದಾಗ ಅಶರೀರವಾಣಿಯೊಂದು ಕೇಳುತ್ತದೆ. ಇಂದ್ರನೇ, ನೀನಿವರನ್ನು ಗೆಲ್ಲಲು ಸಾಧ್ಯವಿಲ್ಲ. ಇವರು ನರ-ನಾರಾಯಣರೆಂದು ದೇವಲೋಲದಲ್ಲಿ ಖ್ಯಾತರಾದ ದೇವತೆಗಳು. ಪ್ರತಿಭಟಿಸಲು ಅಸಾಧ್ಯರೂ, ಯುದ್ಧದಲ್ಲಿ ಸೋಲದವರೂ, ಪ್ರಾಚೀನ ಋಷಿ ಶ್ರೇಷ್ಠರೂ ಆದ ಇವರನ್ನು ಜಯಿಸಲು ಸಮಸ್ತಲೋಕಗಳಲ್ಲಿ ಯಾರಿಗೂ ಸಾಧ್ಯವಿಲ್ಲ. ಹಾಗಾಗಿ ನೀನು ಹಿಂತಿರುಗು. ಖಾಂಡವದ ದಹನ ದೈವಸಂಕಲ್ಪ ಎಂದು ತಿಳಿ. ಪರಾಶಕ್ತಿಯ ಆ ಮಾತನ್ನು ಕೇಳಿ ಇಂದ್ರನು ಕೋಪ ಮತ್ತು ಅಸೂಯೆಗಳನ್ನು ತ್ಯಜಿಸಿ ಹೊರಟು ಹೋಗುತ್ತಾನೆ. ಮಹಾಭಾರತದಲ್ಲಿ ಬೇರೆಯವರ ವೈಶಿಷ್ಟ್ಯ ಎತ್ತಿಹಿಡಿಯಲು ಕೆಲವರು ಅರ್ಜುನನ ಸಾಮರ್ಥ್ಯವನ್ನು ಕೀಳಾಗಿ ಅಂದಾಜಿಸುತ್ತಾರೆ. ಪ್ರವಚನ- ಲೇಖನ- ಭಾಷಣಗಳಲ್ಲಿ ಮತ್ತೆ ಮತ್ತೆ ಅದೇ ಸುಳ್ಳನ್ನು ಹೇಳುತ್ತಾ ತಮ್ಮ ಮೂರ್ಖತೆಯನ್ನು ತೋರಿಸುತ್ತಾರೆ. ವ್ಯಾಸರ ಈ ಮಾತು ಅರ್ಜುನನು ಯಾರು ಅವನ ಮಹತ್ವ ಏನೆಂಬುದನ್ನು ಸ್ಪಷ್ಟವಾಗಿ ಸಾರಿದೆ. ಪಾಂಡವರೈವರಲ್ಲಿ ಯಾರೂ ಕನಿಷ್ಠರಲ್ಲ, ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಶ್ರೇಷ್ಠರೇ ಎಂಬುದೇ ಸತ್ಯ._

*ಶತೇನೈಕಂ ಚ ವಿವ್ಯಾಧ ಶತಂ ಚೈಕೇನ ಪತ್ರಿಣಾ ವ್ಯಸವಸ್ತೇಪತನ್ನಗ್ನೌ ಸಾಕ್ಷಾತ್ಕಾಲಹತಾ ಇವ*

_ಬಿರುಗಾಳಿಯು ಮೋಡಗಳನ್ನು ಚದುರಿಸುವಂತೆ ಅರ್ಜುನನ ಬಾಣಗಳು ಪ್ರಾಣಿಗಳ ಪ್ರಾಣಗಳನ್ನು ಎಲ್ಲೆಡೆ ಚದುರಿಸಿದವು. ದೊಡ್ಡ ದೊಡ್ಡ ಗಾತ್ರದ ಪ್ರಾಣಿಗಳೂ ಅವನ ಬಾಣದೆದುರು ನಿಲ್ಲಲಾಗದೆ ಓಡಿಹೋದವು. ಆ ಅರ್ಜುನನು ಕೆಲವೊಮ್ಮೆ ನೂರು ಬಾಣಗಳಿಂದ ಒಂದು ಪ್ರಾಣಿಯನ್ನೂ,ಕೆಲವೊಮ್ಮೆ ಒಂದು ಬಾಣದಿಂದ ನೂರು ಜೀವಿಗಳನ್ನೂ ಕೊಲ್ಲುತ್ತಿದ್ದನು. ಇಲ್ಲಿ ಅವನ ಬಾಣಪ್ರಯೋಗದ ವೈಶಿಷ್ಟ್ಯ ಕಾಣುತ್ತದೆ. ಕೆಲವೊಮ್ಮೆ ಅತ್ಯಂತ ವೇಗವಾಗಿ ಹೋಗುತ್ತಿದ್ದ ಬಾಣಗಳು ದೊಡ್ಡ ಪ್ರಾಣಿಗಳು ಸ್ವಲ್ಪವೂ ಅಲ್ಲಾಡದಂತೆ ಜೀವ ಹೀರುತ್ತಿದ್ದವು. ಕೆಲವೊಮ್ಮೆ ನಿಧಾನಗತಿಯ ಅವನ ಕೂರಂಬುಗಳು  ಒಂದೇ ಕಡೆ ಕೇಂದ್ರೀಕೃತವಾಗಿ ಕಡಿಮೆ ಹಾನಿಯನ್ನು ಮಾಡುತ್ತಿದ್ದವು. ಸಾಕ್ಷಾತ್ ಕಾಲಪುರುಷನಿಂದ ಹತವಾದವುಗಳಂತೆ ಆ ಪ್ರಾಣಿಗಳು ಬೆಂಕಿಯಲ್ಲಿ ಬೂದಿಯಾದವು._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩